ಕುಣಿಗಲ್: ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಬದ್ಧನಾಗಿದ್ದು, ಜನರ ಸಹಕಾರ ಬೇಕು ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು. ಹುತ್ರಿದುರ್ಗ ಹೋಬಳಿ ಜೋಡಿಹೊಸಹಳ್ಳಿಯಲ್ಲಿ ತಾಪಂ, ಗ್ರಾಪಂ, ಆರೋಗ್ಯ ಇಲಾಖೆ, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಕ್ರಮ ಮದ್ಯ ಮಾರಾಟ ತಡೆಯಲು ಮುಂದಾದರೆ ಕೆಲ ವ್ಯಕ್ತಿಗಳು ಇದನ್ನೇ ರಾಜಕೀಯ ದಾಳವಾಗಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು. ತಾಲೂಕಿನಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆ ಅನುಷ್ಠಾನಕ್ಕೆ 800 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು, ಜಲ ಸಂಪನ್ಮೂಲ ಸಚಿವ ರಮೇಶ್‌ಜಾರಕಿಹೊಳಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. 1500 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ.
ಇದರಿಂದ ಜನರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಈ ನಿಟ್ಟಿನಲ್ಲಿ ಶ್ರೀರಂಗ ಏತಾ ನೀರಾವರಿ ಯೋಜನೆಗೆ ಅಂದಿನ ಕಾಂಗ್ರೆಸ್ ಸರ್ಕಾರ 300 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ ಪೈಪ್‌ಲೈನ್ ಕಾಮಗಾರಿಗೆ ರೈತರು ಜಮೀನು ಬಿಟ್ಟು ಕೊಡದ್ದರಿಂದ ಕಾಮಗಾರಿ ವಿಳಂಬವಾಯಿತು. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
80 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ತಾಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ರೈತರ ಸಮಸ್ಯೆ ನಿವಾರಿಸಲು ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ “ಕಂದಾಯ ನಡಿಗೆ ರೈತರ ಮನೆ ಮನೆಗೆ’ ಹೊಸ ಯೋಜನೆ ಕಂದಾಯ ಇಲಾಖೆ ಅಧಿಕಾರಿಗೊಂದಿಗೆ ಸೇರಿ ಅನುಷ್ಠಾನಕ್ಕೆ ತರಲಾಗಿದೆ. ಇದು ರಾಜ್ಯದಲ್ಲೇ ಪ್ರಥಮವಾಗಿದೆ. ಅಲ್ಲದೆ ಶೇ.60ರಷ್ಟು ಇರುವ ಮಣ್ಣಿನ ರಸ್ತೆ ಡಾಂಬರೀಕರಣ ಮಾಡಲು ಈಗಾಗಲೇ 300 ಕೋಟಿ ರೂ. ಖರ್ಚು ಮಾಡಲಾಗಿದೆ.
ತಾಲೂಕಿನಲ್ಲಿ ತೀರ ಹಿಂದುಳಿದಿರುವ ಹುತ್ರಿದುರ್ಗ ಹೋಬಳಿ ರಸ್ತೆ ಅಭಿವೃದ್ಧಿಗೆ 80 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ತಿಳಿಸಿದರು. ತಾಪಂ ಸದಸ್ಯ ಐ.ಎ.ವಿಶ್ವನಾಥ್ ಮಾತನಾಡಿ, ರೈತರು ಹೆಚ್ಚಾಗಿ ವ್ಯವಸಾಯದ ಕಡೆ ಗಮನಹರಿಸುತ್ತಿದ್ದಾರೆ. ಆದರೆ ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ರೈತರನ್ನು ಆರೋಗ್ಯವಂತರನ್ನಾಗಿ ಮಾಡಲು ಡಿಕೆಎಸ್ ಚಾರಿಟಬಲ್ ಟ್ರಸ್ಟ್, ಆರೋಗ್ಯ ಇಲಾಖೆ,
ಗ್ರಾಮ ಪಂಚಾಯಿತಿಗಳು ತಾಲೂಕಿನ ವಿವಿದೆಡೆ ಉಚಿತ ಆರೋಗ್ಯ ಶಿಬಿರ ನಡೆಸಿ ಔಷಧಿ, ಮಾತ್ರೆ, ವಾಕಿಂಗ್ ಸ್ಟಿಕ್, ಕನ್ನಡಕ ಮೊದಲಾದ ಸೌಲಭ್ಯ ಕಲ್ಪಿಸುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಟಿಎಚ್‌ಒ ಜಗದೀಶ್, ಗ್ರಾಪಂ ಅಧ್ಯಕ್ಷೆ ಬೋರಮ್ಮ, ಸದಸ್ಯರಾದ ಭಾಗ್ಯಮ್ಮ, ಕೊಲ್ಲಾಪುರಿ, ಪಿಡಿಓ ಲೋಕೇಶ್, ಮುಖಂಡ ಕೆಂಪೀರೆಗೌಡ ಮತ್ತಿತರರು ಇದ್ದರು.
ಶಿಬಿರದಲ್ಲಿ 350ಕ್ಕೂ ಅಧಿಕ ಜನರು ತಪಾಸಣೆಗೆ ಒಳಗಾಗಿದ್ದಾರೆ. ಈ ಪೈಕಿ 40 ಮಂದಿ ರಕ್ತದೊತ್ತಡ, 53 ಜನ ಮಧುಮೇಹ, ಇಬ್ಬರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಗಿದೆ. ಅವರಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಿ ವೆಚ್ಚ ಟ್ರಸ್ಟ್ ಭರಿಸುತ್ತದೆ. ತಾಲೂಕಿನಲ್ಲಿ ಔಷಧಿ ಅಂಗಡಿ ಪ್ರಾರಂಭಿಸುವ ಮೂಲಕ ಬಿ.ಪಿ. ಹಾಗೂ ಸಕ್ಕರೆ ಕಾಯಿಲೆ ರೋಗಿಗಳಿಗೆ ಉಚಿತ ಮಾತ್ರೆ ಕೊಡಲು ಚಿಂತಿಸಲಾಗಿದೆ.
-ಡಾ.ಎಚ್.ಡಿ.ರಂಗನಾಥ್, ಶಾಸಕ