ಮೈಸೂರು: ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಜೂ.12 ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಸಹಕರಿಸುವಂತೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವಾಟಾಳ್ ನಾಗರಾಜ್, ಬಸ್ ಚಾಲಕರು, ನಿರ್ವಾಹಕರು, ಪ್ರಯಾಣಿಕರುಗಳಿಗೆ ಬಂದ್‌ಗೆ ಕರೆ ನೀಡಲಾಗಿರುವ ಉದ್ದೇಶ ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯ ಬಂದ್‌ಗೆ ಬೆಂಬಲ ನೀಡುವಂತೆ ಕೋರಿದರು. ಉತ್ತರ ಕರ್ನಾಟಕದಲ್ಲಿ ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಎರಡು ವರ್ಷ ಪೂರೈಸಿದೆ.
ಆ ಮೂಲಕ ಮಹದಾಯಿ ಯೋಜನೆ ಪ್ರತಿಭಟನೆ ಪ್ರಬುದ್ಧ ಚಳವಳಿಯಾಗಿ ಗುರುತಿಸಿಕೊಂಡಿದೆ. ರಾಜ್ಯದ ಸಂಸದರು ಮನಸ್ಸು ಮಾಡಿದ್ದರೆ ಕಳಸಾ ಬಂಡೂರಿ ಮತ್ತು ಮಹದಾಯಿ ಹೋರಾಟಕ್ಕೆ ಜಯ ಸಿಗಲಿದ್ದು, ಹೀಗಿದ್ದರೂ ನಮ್ಮ ಸಂಸದರು ಕೈಚೆಲ್ಲಿ ಕುಳಿತಿದ್ದಾರೆ. ಈ ಎಲ್ಲಾ ಕಾರಣದಿಂದ ಜೂ.12ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಾವುದೇ ರಾಜಕೀಯ ಪಕ್ಷಗಳು ಗಂಭೀರವಾಗಿ ಕೆಲಸ ಮಾಡುತ್ತಿಲ್ಲ. ಕೇವಲ ಚುನಾವಣೆಗೆ ಮಾತ್ರ ಸಿದ್ಧವಾಗುತ್ತಿವೆ, ಸಂಸತ್ತಿನಲ್ಲಿ ನಮ್ಮ ರಾಜ್ಯದ ಸಮಸ್ಯೆಗಳನ್ನು ಚರ್ಚಿಸುವ ಶಕ್ತಿ ನಮ್ಮ ಸಂಸದರು ಕಳೆದುಕೊಂಡಿದ್ದಾರೆ.
ಈ ಹಿಂದಿನ ಸಂಸದರು ಸಂಸತ್‌ನಲ್ಲಿ ರಾಜ್ಯದ ಪರ ಕಾಳಜಿ ಇಟ್ಟುಕೊಂಡು ಕರ್ನಾಟದ ಅಭಿವೃದ್ಧಿಗೆ ಬೇಕಾದ ಕೆಲಸವನ್ನು ಮಾಡಿಕೊಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರುತ್ತಿದ್ದರು, ಆದರೆ ಇಂದಿನ ಸಂಸದರಿಗೆ ರಾಜ್ಯದ ಪರವಾಗಿ ಕಾಳಜಿ ಇಲ್ಲದಿರುವುದರಿಂದ ರಾಜ್ಯದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ ಎಂದು ಹರಿಹಾಯ್ದರು.