Advertisement

ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಿ

12:36 PM Oct 22, 2021 | Team Udayavani |

ಬೀದರ: ಶಾಂತಿ ಮತ್ತು ಭದ್ರತೆ ಸುವ್ಯವಸ್ಥಿತ ಹೊಂದಿರುವ ದೇಶ ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿರಲು ಪೊಲೀಸ್‌ ಇಲಾಖೆಯೊಂದಿಗೆ ಪ್ರತಿಯೊಬ್ಬರು ಕೈಜೋಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಕರೆ ನೀಡಿದರು.

Advertisement

ನಗರದ ಪೊಲೀಸ್‌ ಕವಾಯಿತು ಮೈದಾನದಲ್ಲಿ ಗುರುವಾರ ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಆಯೋಜಿಸಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಗಡಿ ರಕ್ಷಣೆ, ಆಂತರಿಕ ಭದ್ರತೆ, ನಾಡಿನ ಆಸ್ತಿ-ಪಾಸ್ತಿಯನ್ನು ಕಾಪಾಡಲು ಮತ್ತು ಜನರ ನೆಮ್ಮದಿಗಾಗಿ ಸೈನಿಕರು ಹಾಗೂ ಪೊಲೀಸರು ತಮ್ಮ ಬದುಕನ್ನೇ ಒತ್ತೆಯಾಗಿಟ್ಟು ಕೆಲಸ ಮಾಡುತ್ತಾರೆ. ಅಂಥ ಹುತಾತ್ಮರಾದವರ ತ್ಯಾಗ, ಬಲಿದಾನವನ್ನು ಒಂದು ದಿನವಷ್ಟೇ ಅಲ್ಲದೇ ಪ್ರತಿ ದಿನವೂ ಸ್ಮರಿಸುವಂತಾಗಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಮಾತನಾಡಿ, ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಸಲ್ಲಿಸುತ್ತಿರುವ ಸೇವಾ ಮನೋಭಾವ ತ್ಯಾಗ ಮತ್ತು ಬಲಿದಾನ ಸ್ಮರಣೀಯವಾಗಿದೆ. ದೇಶ, ಸಮಾಜಕ್ಕೋಸ್ಕರ ತಮ್ಮ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಪೊಲೀಸರ ಸ್ಮರಣೆಗಾಗಿ 1960ರಿಂದ ಪ್ರತಿ ವರ್ಷ ಅ.21ರಂದು ಪೊಲೀಸ್‌ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ. ದೇಶಾದ್ಯಂತ ಪೊಲೀಸ್‌ ಮತ್ತು ಅರೆ ಸೇನಾ ಪಡೆಗಳು ಈ ದಿನವನ್ನು ಆಚರಿಸಿ ಹುತಾತ್ಮ ವೀರರಿಗೆ ಗೌರವ ಸಲ್ಲಿಸುತ್ತವೆ ಎಂದು ತಿಳಿಸಿದರು.

ಇದನ್ನೂ ಓದಿ: ಪೊಲೀಸರು-ಸೈನಿಕರು ದೇಶದ ಕಣ್ಣುಗಳಿದ್ದಂತೆ

ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಗೋಪಾಲ್‌ ಬ್ಯಾಕೋಡ್‌, ಡಿವೈಎಸ್ಪಿಗಳಾದ ಕೆ.ಎಂ. ಸತೀಶ್‌, ಸೋಮಲಿಂಗಪ್ಪ ಕುಂಬಾರ, ಐಪಿಎಸ್‌ ಅ ಧಿಕಾರಿ ಪ್ರತೀಕ್ಷ ಶಂಕರ ಹಾಗೂ ಜಿಲ್ಲೆಯ ಸಿಪಿಐ ಮತ್ತು ಪಿಎಸ್‌ಐಗಳು ಪಾಲ್ಗೊಂಡಿದ್ದರು. ಈ ವೇಳೆ ಹುತಾತ್ಮ ಸ್ಮಾರಕಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಗೌರವಿಸಿದರು. ಪೊಲೀಸ್‌ ವಾದ್ಯ ತಂಡ ಶೋಕ ಗೀತೆ ಮೊಳಗಿಸಿತು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next