Advertisement

ತಂಪು ತಂಪು ತಂಬುಳಿ

08:45 PM May 16, 2019 | Sriram |

ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚು ಖಾರ, ಕರಿದ ಪದಾರ್ಥಗಳನ್ನು ನಾವು ತಿನ್ನುವ ಆಹಾರದಲ್ಲಿ ಕಡಿಮೆ ಮಾಡಿ ತಂಪಾದ ತಂಬುಳಿಗಳನ್ನು ಮಾಡಿ ಸವಿದರೆ ಆರೋಗ್ಯಕ್ಕೆ ಹಿತ.

Advertisement

ಕರಿಬೇವಿನ ತಂಬುಳಿ
ಬೇಕಾಗುವ ಸಾಮಗ್ರಿ: 1/4 ಕಪ್‌ ಕರಿಬೇವಿನೆಲೆ, 1/2 ಕಪ್‌ ತೆಂಗಿನ ತುರಿ, 2 ಕಪ್‌ ಸಿಹಿ ಮಜ್ಜಿಗೆ, 1/4 ಇಂಚು ಉದ್ದದ ಶುಂಠಿ, ಉಪ್ಪು ರುಚಿಗೆ ತಕ್ಕಷ್ಟು , 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು.
ತಯಾರಿಸುವ ವಿಧಾನ: ಕರಿಬೇವಿನೆಲೆಗಳನ್ನು ಚೆನ್ನಾಗಿ ತೊಳೆದು, ಕಾಯಿತುರಿ, ಶುಂಠಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಉಪ್ಪು , ಮಜ್ಜಿಗೆ ಬೆರೆಸಿ, ನಂತರ ಸಾಸಿವೆ, ಕೆಂಪುಮೆಣಸು ಸೇರಿಸಿ ಒಗ್ಗರಣೆ ಕೊಡಿ.

ಮೆಂತೆ ತಂಬುಳಿ
ಬೇಕಾಗುವ ಸಾಮಗ್ರಿ: 1 ಚಮಚ ಮೆಂತೆ ಕಾಳು, 1/2 ಕಪ್‌ ತೆಂಗಿನ ತುರಿ, 2 ಕಪ್‌ ಸಿಹಿ ಮಜ್ಜಿಗೆ, 1 ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು , 1/4 ಚಮಚ ಸಾಸಿವೆ, 1 ಚಮಚ ಎಣ್ಣೆ ಯಾ ತುಪ್ಪ.
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಮೆಂತೆಕಾಳು, ಕೆಂಪು ಮೆಣಸು ಸೇರಿಸಿ ಹುರಿದು ಕೆಳಗಿಳಿಸಿ. ನಂತರ ತೆಂಗಿನತುರಿ, ಹುರಿದ ಮೆಂತೆಕಾಳು, ಮೆಣಸು ಸೇರಿಸಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಮಜ್ಜಿಗೆ, ಉಪ್ಪು , ಬೇಕಾದಷ್ಟು ನೀರು ಸೇರಿಸಿ. ನಂತರ ತುಪ್ಪ ಯಾ ಎಣ್ಣೆಯಲ್ಲಿ ಸಾಸಿವೆ ಸೇರಿಸಿ ಒಗ್ಗರಣೆ ಕೊಡಿ. ಮೆಂತೆ ತಂಪು ಗುಣ ಹೊಂದಿರುವ ಕಾರಣ ಬೇಸಿಗೆಯಲ್ಲಿ ಇದರ ತಂಬುಳಿ ಮಾಡಿ ಸೇವಿಸಿದರೆ ದೇಹ ತಂಪಾಗುವುದು.

ಒಂದೆಲಗದ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: 1 ಕಪ್‌ ಒಂದೆಲಗದ ಸೊಪ್ಪು, 1/2 ಕಪ್‌ ತೆಂಗಿನ ತುರಿ, 2 ಕಪ್‌ ಸಿಹಿ ಮೊಸರು ಯಾ ಮಜ್ಜಿಗೆ, 2 ಕಾಳುಮೆಣಸು ಯಾ 1 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು , 1/4 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, 1 ಚಮಚ ತುಪ್ಪ.
ತಯಾರಿಸುವ ವಿಧಾನ: ಒಂದೆಲಗವನ್ನು ತೊಳೆದು, ಕಾಯಿತುರಿ, ಕಾಳುಮೆಣಸು ಯಾ ಹಸಿಮೆಣಸು ಸೇರಿಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಮಜ್ಜಿಗೆ, ಉಪ್ಪು ಸೇರಿಸಿ ಸಾಕಷ್ಟು ತೆಳ್ಳಗೆ ಮಾಡಿ, ಸಾಸಿವೆ, ಕೆಂಪುಮೆಣಸು ಸೇರಿಸಿ ತುಪ್ಪದಲ್ಲಿ ಒಗ್ಗರಣೆ ಕೊಡಿ. ತಂಪು ಗುಣವುಳ್ಳ ಈ ತಂಬುಳಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೊತ್ತಂಬರಿ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: 1 ಕಪ್‌ ಕೊತ್ತಂಬರಿ ಸೊಪ್ಪು , 1/2 ಕಪ್‌ ತೆಂಗಿನತುರಿ, 2-3 ಹಸಿಮೆಣಸು, ಸಿಹಿ ಮೊಸರು ಅಥವಾ ಮಜ್ಜಿಗೆ 4 ಕಪ್‌, 1/4 ಚಮಚ ಜೀರಿಗೆ, 1/2 ಚಮಚ ತುಪ್ಪ , 1 ಒಣಮೆಣಸು.
ತಯಾರಿಸುವ ವಿಧಾನ: ಕೊತ್ತಂಬರಿ ಸೊಪ್ಪಿನ ಬೇರು, ಬಲಿತ ದಂಟುಗಳನ್ನು ತೆಗೆದು, ಎಳೆಯ ದಂಟು ಮತ್ತು ಸೊಪ್ಪನ್ನು ತೆಗೆದು ತೊಳೆದು, ಹಸಿಮೆಣಸು, ಕಾಯಿತುರಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಉಪ್ಪು ಮತ್ತು ಮಜ್ಜಿಗೆ ಸೇರಿಸಿ ತುಪ್ಪದಲ್ಲಿ ಜೀರಿಗೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ.

Advertisement

ಬಸಳೆ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: 10-15 ಎಲೆ ಬಸಳೆ, 1/2 ಚಮಮ ಜೀರಿಗೆ, 1/2 ಕಪ್‌ ತೆಂಗಿನತುರಿ, ಸ್ವಲ್ಪ ಬೆಣ್ಣೆ , ಉಪ್ಪು ರುಚಿಗೆ ತಕ್ಕಷ್ಟು , 1/2 ಕಪ್‌ ಮೊಸರು ಯಾ ಮಜ್ಜಿಗೆ, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪು ಮೆಣಸು, 1/2 ಚಮಚ ಎಣ್ಣೆ.
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಬೆಣ್ಣೆ ಹಾಕಿ. ಬಿಸಿಯಾದಾಗ ತೊಳೆದು ಬಸಳೆ ಎಲೆಯನ್ನು ಸಣ್ಣಗೆ ಹೆಚ್ಚಿ ಹಾಕಿ ಹುರಿಯಿರಿ. ನಂತರ ಜೀರಿಗೆ ಹಾಕಿ ಹುರಿದು, ಕಾಯಿತುರಿ ಸೇರಿಸಿ ನುಣ್ಣ ರುಬ್ಬಿ. ನಂತರ ಮಜ್ಜಿಗೆ, ಉಪ್ಪು ಸೇರಿಸಿ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು ಸೇರಿಸಿ ಒಗ್ಗರಣೆ ಕೊಡಿ. ಈ ತಂಬುಳಿಯು ಬಾಯಿಹುಣ್ಣು ಆದವರಿಗೆ ಒಳ್ಳೆಯ ಔಷಧಿ.

ತೊಂಡೆ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: 2 ಹಿಡಿ ತೊಂಡೆ ಸೊಪ್ಪು , 1 ಚಮಚ ಜೀರಿಗೆ, 3 ಕಪ್‌ ಸಿಹಿ ಮಜ್ಜಿಗೆ, 1/2 ಕಪ್‌ ತೆಂಗಿನತುರಿ, 1 ಚಮಚ ತುಪ್ಪ , 1 ಚಮಚ ಸಾಸಿವೆ.
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ತೊಂಡೆ ಸೊಪ್ಪು ಹಾಕಿ. ತುಪ್ಪದಲ್ಲಿ ಹುರಿದು ಜೀರಿಗೆ ಸೇರಿಸಿ ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ನಂತರ ಮಜ್ಜಿಗೆ, ಉಪ್ಪು ಸೇರಿಸಿ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಕೊಡಿ. ಈ ತಂಬುಳಿಯು ಬಾಯಿಹುಣ್ಣು ಬೀಳುವವರಿಗೆ ಉತ್ತಮ ಔಷಧ.

-ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next