ಮಡಿಕೇರಿ: ಬೃಹತ್ ಕಾಡಾನೆಯೊಂದು ಸಿಮೆಂಟ್ ಕಂಬಗಳ ಬೇಲಿಯ ನಡುವೆ ಸಿಲುಕಿ ಪಡಿಪಾಟಲು ಪಟ್ಟ ಘಟನೆ ತೊಂಡೂರು ಗ್ರಾಮದಲ್ಲಿ ನಡೆದಿದೆ.
ಕಾಡಾನೆಯ ರಕ್ಷಣೆಗೆ ಸನ್ ಪ್ಯೂರ್ ಆಯಿಲ್ ಮತ್ತು ಸಫ್ì ಬಳಸುವ ಅನಿವಾರ್ಯ ಅರಣ್ಯ ಇಲಾಖೆಗೆ ಎದುರಾಯಿತು.
ಆನೆಕಾಡು ರಕ್ಷಿತಾರಣ್ಯ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ, ಕಾಡಾನೆಗಳ ನಿಯಂತ್ರಣಕ್ಕೆ ಸಿಮೆಂಟ್ ಕಂಬಗಳ ಬೇಲಿ ಅಳವಡಿಸಲಾಗಿದೆ. ಶುಕ್ರವಾರ ಸಂಜೆ ಹೆಣ್ಣಾನೆಯೊಂದು ಎರಡು ಸಿಮೆಂಟ್ ಕಂಬಗಳ ನಡುವೆ ಸಿಲುಕಿ ಒದ್ದಾಡಿತು.
ವಿಷಯವರಿತ ಅರಣ್ಯ ಇಲಾಖಾ ಅಧಿಕಾರಿ ಸಿಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ, ಜೆಸಿಬಿ ಮೂಲಕ ಹೆಣ್ಣಾನೆಯ ರಕ್ಷಣೆ ಮಾಡುವ ಪ್ರಯತ್ನಕ್ಕೆ ಮುಂದಾದ ಸಂದರ್ಭ, ಇತರ ಆನೆಗಳು ಸಿಬಂದಿ ಮೇಲೆ ದಾಳಿಗೆ ಮುಂದಾಗಿ ಕಾರ್ಯಾಚರಣೆಗೆ ತೊಡಕನ್ನುಂಟು ಮಾಡಿದವು.
ಬೇರೆ ಉಪಾಯ ಕಾಣದ ಅರಣ್ಯ ಇಲಾಖೆ ಸಿಬಂದಿ ನಾಲ್ಕು ಟಿನ್ ಸನ್ ಪ್ಯೂರ್ ಎಣ್ಣೆ ಮತ್ತು ಸಫ್ ಬೆರೆಸಿದ ನೀರನ್ನು ಸಿಮೆಂಟ್ ಕಂಬದ ನಡುವೆ ಸಿಲುಕಿದ್ದ ಆನೆಯ ಮೇಲೆ ಸುರಿದದ್ದು ಉಪಯೋಗಕ್ಕೆ ಬಂದಿತು. ಜಾರಿಕೆಯ ಎಣ್ಣೆ ಮತ್ತು ಸಫ್ ನಿಂದ ಹೆಣ್ಣಾನೆ ಕಂಬಗಳೆಡೆಯಿಂದ ಹೊರ ಬರುವ ಮೂಲಕ ಸಂಕಷ್ಟ ಬಗೆಹರೆಯಿತು. ಅಷ್ಟು ಹೊತ್ತು ಕಂಬಗಳ ನಡುವೆ ಸಿಲುಕಿ ಆಕ್ರೋಶ ಗೊಂಡಿದ್ದ ಹೆಣ್ಣಾನೆ ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾಗಿ ಆತಂಕ ಮೂಡಿಸಿತು. ಇತರ ಆನೆಗಳೊಂದಿಗೆ ಕಾಡು ಸೇರಿತು.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಮ, ಆರ್‌ಎಫ್ಒಗಳಾದ ರಂಜನ್, ಅನಿಲ್ ಡಿ’ಸೋಜಾ, ಸುಬ್ರಾಯ, ದೇವಯ್ಯ ಮತ್ತು ಸಿಬಂದಿ ಪಾಲ್ಗೊಂಡಿದ್ದರು.