ದೇವನಹಳ್ಳಿ: ಜಾಗತಿಕ ಮಟ್ಟದಲ್ಲಿ ಖಾದ್ಯ ತೈಲದ ದಾಸ್ತಾನು ಖಾಲಿಯಾಗುತ್ತಿರುವುದರಿಂದ ಅಡುಗೆ ಎಣ್ಣೆಗಳ ಬೆಲೆ ಹೆಚ್ಚಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ಧದ ಪರಿಣಾಮದಿಂದ ಅಡುಗೆ ಎಣ್ಣೆ ಗ್ರಾಹಕರಿಗೆ ಹೊರೆಯಾಗಿದೆ.
ಹೋಳಿ ಹುಣ್ಣಿಮೆ, ಯುಗಾದಿ, ಶ್ರೀರಾಮ ನವಮಿ ಹಬ್ಬಗಳ ಸಾಲು ಸಾಲಾಗಿ ಬರುವುದರಿಂದ ದಿನಸಿಗಳಿಗಿಂತಲೂ ಹೆಚ್ಚಾಗಿ ಎಣ್ಣೆ ಖರೀದಿ ಮಾಡುತ್ತಿದ್ದಾರೆ. ನಿತ್ಯ 10 ಲೀ. 10 ಬಾಕ್ಸ್ ಖಾಲಿಯಾಗುತ್ತಿತ್ತು. ಕಳೆದ 15 ದಿನದಿಂದ 20ರಿಂದ 30 ಬಾಕ್ಸ್ ಖರ್ಚಾಗುತ್ತಿವೆ. ಮಾರುಕಟ್ಟೆಯಲ್ಲಿ ಬೇಡಿಕೆ ಪೂರೈಕೆ ನಡುವೆ ಯಾವುದೇ ಪರ್ಯಾಯವಿಲ್ಲದಂತಾಗಿದೆ. ಎಣ್ಣೆ ಬಳಸುವವರು ಬಡವರು, ಮಧ್ಯಮ ವರ್ಗದವರು ಯೋಚಿಸುವಂತಾಗಿದೆ.
ಅಡುಗೆಗೆ ಅತಿ ಮುಖ್ಯ: ಯಾವುದೇ ಅಡುಗೆ ಮಾಡಬೇಕಾದರೆ ಅಡುಗೆ ರುಚಿಯಾಗಿರಲು ಸಾರಿಗೆ, ಚಟ್ನಿಗೆ, ಚಿತ್ರಾನ್ನ, ಪುಳಿಯೋಗರೆ, ಪಲಾವ್‌ಸೇರಿ ವಿವಿಧ ಅಡುಗೆಗೆ ರುಚಿ ಬರಲು ಹೊಗ್ಗರಣೆ ಹಾಕಲು ಎಣ್ಣೆ ಮುಖ್ಯವಾಗಿದೆ. ಬೋಂಡಾ, ಬಜ್ಜಿ ಕರಿಯಲು ಸಹ ಎಣ್ಣೆ ಮೇಲೆ ಅವಲಂಬಿತರಾಗಿದ್ದಾರೆ. ಸೂರ್ಯಕಾಂತಿ ಎಣ್ಣೆ ಬಳಕೆ ಮೇಲೆ ಜನರು ಹೆಚ್ಚು ಅವಲಂಬಿತರಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಎಣ್ಣೆ ದರ ಹೆಚ್ಚಾಗುತ್ತದೆ ಎಂಬ ಕಾರಣದಿಂದ ಗ್ರಾಹಕರು ಮೊದಲೇ ಅಡುಗೆ ಎಣ್ಣೆಯನ್ನು ಹಳೆಯ ದರದಲ್ಲಿಯೇ ಖರೀದಿಸಿದ್ದಾರೆ.
ರಫ್ತು ಸ್ಥಗಿತ: ದೇಶದ ಹಲವು ಅಡುಗೆ ಎಣ್ಣೆ ತಯಾರಿಕಾ ಘಟಕಗಳು ಕಚ್ಚಾ ವಸ್ತುವಿನ ಪೂರೈಕೆಗೆ ಉಕ್ರೇನ್ ಮೇಲೆ ಅವಲಂಬಿತರಾಗಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಯುದ್ಧ ಪ್ರಾರಂಭವಾದ ಒಂದೆರಡು ದಿನಗಳಲ್ಲಿಯೇ ರಫ್ತು ಸ್ಥಗಿತವಾದ ಪರಿಣಾಮ ಬೆಲೆ ಏರಿಕೆ ಉಂಟಾಗಿದೆ. ಬೆಲೆ ಏರಿಕೆಯಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ. ತಿಂಗಳಿಗೆ 10 ಲೀಟರ್ ಖರೀದಿಸುತ್ತಿದ್ದವರು ಈಗ 15ರಿಂದ 25 ಲೀಟರ್ ಖರೀದಿಸುತ್ತಿದ್ದಾರೆ. ಇದೇ ರೀತಿ ಅಡುಗೆ ಎಣ್ಣೆ ಗಗನಕ್ಕೇರಿದರೆ ಸಾಮಾನ್ಯ ಜನ ಹೇಗೆ ಜೀವನ ನಡೆಸು ತ್ತಾರೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಬೆಲೆ ಏರಿಕೆಯ ಆತಂಕ: ಜನರು ಮಾತ್ರ ಸೂರ್ಯಕಾಂತಿಯ ಗುಂಗಿನಿಂದ ಹೊರ ಬರುತ್ತಿಲ್ಲ. ಇದನ್ನೇ ಕೆಲ ಅಂಗಡಿ ಮಾಲೀಕರು ದುರುಪಯೋಗ ಪಡಿಸಿಕೊಂಡು ಎಂಆರ್‌ಪಿ ದರಕ್ಕಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಕೃತಕ ಅಭಾವ ಸೃಷ್ಟಿಸಿ, ದರ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ದಗಳು ಮುಂದುವರಿದರೆ ಸಾರ್ವಜನಿಕರ ಹತ್ತಿರ ದ್ವಿಚಕ್ರ ವಾಹನ ಮತ್ತು ಕಾರು ಇರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಆತಂಕದಲ್ಲಿ ಸಾರ್ವಜನಿಕರಿದ್ದಾರೆ.
ವಿವಿಧ ಎಣ್ಣೆ ದರಗಳು: ಸೂರ್ಯಕಾಂತಿ ಎಣ್ಣೆ ಒಂದು ಲೀಟರ್‌ಗೆ 175 ರೂ., ಸನ್ ಪ್ಯೂರ್ 185 ರೂ. ಗೋಲ್ಡ್‌ವಿನ್ನರ್ 190 ರೂ. ಸ್ವಾದ್ 180 ರೂ. ಪಾಮ್ ಆಯಿಲ್ 170 ರೂ., ಹೋಂ ಕಡಲೆಕಾಯಿ ಎಣ್ಣೆ 175 ರೂ.,ಗೆ ಏರಿಕೆಯಾಗಿದೆ.
ಯಾವುದೇ ಅಡುಗೆ ಮಾಡಬೇಕಾದರೆ ಅಡುಗೆ ಎಣ್ಣೆ ಇಲ್ಲದಿದ್ದರೆ ಮಾಡಲು ಸಾಧ್ಯವಿಲ್ಲ. ಎಷ್ಟೇ ಅಡುಗೆ ಎಣ್ಣೆ ದುಬಾರಿಯಾದರೂ ಸಹ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ಮಾಡಿಕೊಂಡು ತಿನ್ನುವ ನಾವು ದುಬಾರಿ ಹಣ ಕೊಟ್ಟು ಎಣ್ಣೆ ಖರೀದಿ ಮಾಡುವುದು ಕಷ್ಟವಾಗುತ್ತದೆ.
● ಅರುಣಾ, ಗ್ರಾಹಕಿ
ಉಕ್ರೇನ್, ರಷ್ಯಾ ಯುದ್ಧದಿಂದ ಕ್ರೂಡ್ ಆಯಿಲ್ ಸರಿಯಾದ ಸಮಯಕ್ಕೆ ಬರದೇ ಇರುವುದರಿಂದ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಹೆಚ್ಚಾಗಿದೆ. ಯಶವಂತಪುರದಿಂದ ಸರಕು ಖರೀದಿ ಮಾಡಿಕೊಂಡು ಬರುತ್ತಿದ್ದೇವೆ. ಬೇಡಿಕೆಗೆ ತಕ್ಕಷ್ಟು ಎಣ್ಣೆ ಪೂರೈಕೆಯಾಗುತ್ತಿಲ್ಲ.
- ಬಿ.ವಿ.ನಾಗರಾಜ್, ವರ್ತಕರ ಸಂಘದ ಕಾರ್ಯದರ್ಶಿ