Advertisement

ಅಡುಗೆ ಅನಿಲ ಪರಿಶೀಲನೆ ಗೊಂದಲ: ಸರಕಾರದ ಸೂಚನೆ ಇಲ್ಲದಿದ್ದರೂ ಪರಿಶೀಲನೆ

01:10 AM Dec 28, 2022 | Team Udayavani |

ಕುಂದಾಪುರ: ಅಡುಗೆ ಅನಿಲ ಗ್ರಾಹಕರ ಮನೆಗೆ ತೆರಳಿ ವಿವಿಧ ತಂಡದವರು ತಪಾಸಣೆ ನಡೆಸುತ್ತಿದ್ದು ಮಾಹಿತಿ ಇಲ್ಲದೆ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

Advertisement

ವಿತರಕ ಸಂಸ್ಥೆಗಳ ಆದೇಶದಂತೆ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆಯ ಎಲ್ಲ ಮಾಹಿತಿಗಳನ್ನೂ ವಿತರಕ ಸಂಸ್ಥೆಗೆ ಕಳುಹಿಸಲಾಗುತ್ತದೆ. ಪಡೆದ ಹಣಕ್ಕೆ ರಶೀದಿ ನೀಡಲಾಗುತ್ತದೆ. ದೂರುಗಳಿದ್ದರೆ ಏಜೆನ್ಸಿಗಳನ್ನು ಸಂಪರ್ಕಿಸಬಹುದು. ಗೊಂದಲ ಅನಗತ್ಯ ಎಂದು ವಿತರಕರು ಹೇಳುತ್ತಾರೆ.

ಶುಲ್ಕ ಎಷ್ಟು?
ಅನಿಲ ವಿತರಕ ಕಂಪೆನಿಗಳ ಪರವಾಗಿ ಸಿಬಂದಿ ಗ್ರಾಹಕರ ಮನೆಗೆ ತೆರಳಿ ಅನಿಲದ ಸಂಪರ್ಕ, ಪೈಪ್‌, ಸ್ಟವ್‌, ಅನಿಲ ಜಾಡಿ ಇರಿಸಿದ ಸ್ಥಳ ಇತ್ಯಾದಿಗಳನ್ನು ಪರಿಶೀಲಿಸುತ್ತಾರೆ. ಚೆಕ್‌ಲಿಸ್ಟ್‌ಗೆ ಗ್ರಾಹಕರ ಸಹಿ ಪಡೆದು ತಪಾಸಣೆ ಶುಲ್ಕವೆಂದು 236 ರೂ. ವಸೂಲಿ ಮಾಡುತ್ತಿದ್ದಾರೆ. ಪೈಪ್‌ ಬದಲಿಸಿದರೆ ಪ್ರತ್ಯೇಕ 190 ರೂ. ಕೊಡಬೇಕು. ಒಟ್ಟು 426 ರೂ. ಆಗುತ್ತದೆ.

ಗೊಂದಲ
ಅನಿಲ ಸಂಪರ್ಕದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಶುಲ್ಕ ಪಡೆಯುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕೆಲವರು ಪಡೆದ ಹಣಕ್ಕೆ ರಸೀದಿ ನೀಡಿಲ್ಲ ಎಂದೂ ಆಪಾದಿಸುತ್ತಿದ್ದಾರೆ. ಪರೀಕ್ಷೆಯೇ ನಡೆಸದೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಅಪವಾದವೂ ಇದೆ. ಆರ್ಥಿಕವಾಗಿ ಹಿಂದುಳಿದವರಿಗೆ ಈ ಮೊತ್ತ ದುಬಾರಿಯೇ. 5 ವರ್ಷಗಳಿಗೊಮ್ಮೆ ತಪಾಸಣೆ ಎನ್ನುತ್ತಾರಾದರೂ 2020ರಲ್ಲಿ ತಪಾಸಣೆ ನಡೆಸಿದ್ದು, ಎರಡೇ ವರ್ಷದಲ್ಲಿ ಮತ್ತೂಮ್ಮೆ ತಪಾಸಣೆ ನೆಪದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದೂ ಕೆಲವು ಗ್ರಾಹಕರು ಆರೋಪಿಸುತ್ತಿದ್ದಾರೆ.

ಜಾಲತಾಣದಲ್ಲಿ
ಇದರಲ್ಲೇನೋ ಗೋಲ್‌ಮಾಲ್‌ ಇದೆ ಎಂಬ ಯೋಚನೆಯಲ್ಲಿ ಕೆಲವು ಗ್ರಾಹಕರು ಮನೆಗೆ ಬಂದ ಸಿಬಂದಿಯ ಫೋಟೋ ತೆಗೆದು ಜಾಲತಾಣದಲ್ಲಿ ಹಾಕಿ “ಇಂತಹವರು ಬಂದರೆ ಅಡುಗೆ ಅನಿಲ ಸಂಪರ್ಕ ತಪಾಸಣೆ ಮಾಡಿಸಿಕೊಳ್ಳಬೇಡಿ’ ಎಂದು ಬರೆದು ಪ್ರಸಾರ ಮಾಡುತ್ತಿದ್ದಾರೆ. ಗ್ರಾಹಕರು ಅಡುಗೆ ಅನಿಲ ವಿತರಕ ಸಂಸ್ಥೆಗಳನ್ನು ಸಂಪರ್ಕಿಸಿದರೆ “ಇದು ಕಡ್ಡಾಯವಾಗಿ ಮಾಡಿಸಬೇಕಾದ ತಪಾಸಣೆ’ ಎಂಬ ಉತ್ತರ ಬರುತ್ತದೆ.

Advertisement

ವಿಮೆ ಸೌಲಭ್ಯ
ಅಡುಗೆ ಅನಿಲ ಸಂಪರ್ಕ ಪಡೆದ ಕೂಡಲೇ ಪ್ರತೀ ಗ್ರಾಹಕರೂ ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ. ಗ್ರಾಹಕರ ತಪ್ಪುಗಳ ಹೊರತಾಗಿ ಅನಿಲ ವಿತರಕ ಸಂಸ್ಥೆಯವರ ತಪ್ಪಿನಿಂದ ಅನಾಹುತಗಳು ಸಂಭವಿಸಿದರೆ ಅದಕ್ಕೆ ವಿಮಾ ಸೌಲಭ್ಯ ಇರುತ್ತದೆ. ಹಾಗೆಂದು ತಪಾಸಣೆಗೂ ವಿಮೆಗೂ ನೇರ ಸಂಬಂಧ ಇಲ್ಲ, ತಪಾಸಣೆ ಮಾಡಿದರಷ್ಟೇ ವಿಮೆ ವ್ಯಾಪ್ತಿಗೆ ಒಳಪಡುವುದು ಎಂಬ ನಿಯಮವೇನೂ ಇಲ್ಲ ಎನ್ನುತ್ತಾರೆ ವಿತರಕರು.

ಅಡುಗೆ ಅನಿಲ ಗ್ರಾಹಕರು ಪ್ರತಿಯೊಬ್ಬರೂ ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ. ಅದಕ್ಕಾಗಿ 5 ವರ್ಷಗಳಿಗೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಸಿಲಿಂಡರ್‌ ಸ್ಫೋಟದಂತಹ ಯಾವುದೇ ಅಪಘಾತದಲ್ಲಿ ವಿಮೆ ಪರಿಹಾರದ ಸಂದರ್ಭ ಬಂದಾಗ “ಪರಿಶೀಲನೆ ನಡೆಸದೇ ಗ್ರಾಹಕರ ನಿರ್ಲಕ್ಷ್ಯ’ ಎಂದು ಪ್ರತಿಪಾದನೆ ಆದರೆ, ವಿಮೆ ದೊರೆಯದಿದ್ದರೆ ತೊಂದರೆಯಾಗುತ್ತದೆ. ಆದರೂ ತಪಾಸಣೆ ಐಚ್ಛಿಕ. ಗ್ರಾಹಕರು ಪರಿಶೀಲನೆ ಬೇಡ ಎಂದು ಘೋಷಣಾಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ.
– ಹಸೀಬ್‌ ಕೆ., ಅಸಿಸ್ಟೆಂಟ್‌ ಮ್ಯಾನೇಜರ್‌, ಮಾರಾಟ ವಿಭಾಗ ಎಲ್‌ಪಿಜಿ, ಮಂಗಳೂರು ವಲಯ

ತಪಾಸಣೆಗೆ ಸಂಬಂಧಿಸಿದ ಒಳಿತು, ಕೆಡುಕುಗಳ ಕುರಿತು
ಗ್ರಾಹಕರಿಗೆ ಸ್ಪಷ್ಟ ತಿಳಿವಳಿಕೆ ನೀಡಬೇಕು. ಗೊಂದಲಕ್ಕೆ ಅವಕಾಶ ನೀಡಬಾರದು. ಇದನ್ನು ನಮ್ಮ ಆಹಾರ ನಿರೀಕ್ಷಕರ ಮೂಲಕ ತಿಳಿಸಲು ಕ್ರಮ ಕೈಗೊಳ್ಳುತ್ತೇನೆ. – ಕೂರ್ಮಾ ರಾವ್‌, ಉಡುಪಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next