ಬೆಂಗಳೂರು: ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ), ಇದೊಂದು ಇಸ್ಲಾಮಿಕ್ ಸ್ಟೇಟ್(ಐಎಸ್)ನ ಪ್ರಾಯೋಜಿತ ಕೃತ್ಯ. ಅದಕ್ಕೆ ಶಂಕಿತ ಉಗ್ರರಾದ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಶಾರೀಕ್‌ರನ್ನು ಸಂಘಟನೆ ಬಳಸಿಕೊಂಡಿದೆ ಎಂದು ಬುಧವಾರ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದೆ.
2022ರ ನ.19ರಂದು ಮೊಹಮ್ಮದ್ ಶಾರೀಕ್ ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ) ತುಂಬಿಕೊಂಡು ಆಟೋದಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಕುಕ್ಕರ್ ಸ್ಫೋಟಗೊಂಡು, ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ಹಾಗೂ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಎನ್‌ಐಎ ಪ್ರಕರಣ ದಾಖಲಿಸಿಕೊಂಡು ಮೊಹಮ್ಮದ್ ಶಾರೀಕ್ ಹಾಗೂ ಸೈಯದ್ ಶಾರೀಕ್‌ನನ್ನು ಬಂಧಿಸಿತ್ತು.
ಬಳಿಕ ಇಬ್ಬರ ವಿಚಾರಣೆಯಲ್ಲಿ, ಐಎಸ್ ಸಂಘಟನೆ ಹ್ಯಾಂಡ್ಲರ್‌ಗಳ ಜತೆ ನಿರಂತರ ಸಂಪರ್ಕ ಹೊಂದಿದ್ದರು. ಅವರ ಸೂಚನೆ ಮೇರೆಗೆ ಭಾರತದಲ್ಲಿ ಶರಿಯಾ ಕಾನೂನು ಸ್ಥಾಪಿಸಲು ಸಂಚು ರೂಪಿಸಿದ್ದರು. ಹೀಗಾಗಿ ಶಂಕಿತ ಮೊಹಮ್ಮದ್ ಶಾರೀಕ್ ಐಇಡಿ ತಯಾರಿಸಿ, ಕುಕ್ಕರ್‌ನಲ್ಲಿ ಇಟ್ಟುಕೊಂಡು ಪ್ರಯಾಣಿಸುತ್ತಿದ್ದ. ಸೈಯದ್ ಯಾಸೀನ್ ಎಂಬ ಮತ್ತೂಬ್ಬ ಶಂಕಿತ ಐಇಡಿಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡಿದ್ದ ಎಂದು ಎನ್‌ಐಎ ತಿಳಿಸಿದೆ.
ಅಲ್ಲದೆ, ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಾಲಯ ಸ್ಫೋಟಿಸಿ, ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ್ದರು. ಜತೆಗೆ ಮುಸ್ಲಿಂ ಯುವಕರನ್ನು ಭಯೋತ್ಪಾದನಾ ಚಟುವಟಿಕೆಗೆ ಪ್ರೇರೆಪಿಸುವುದು, ಸಂಘಟನೆಗಾಗಿ ನಿಧಿ ಸಂಗ್ರಹ, ಯುವಕರ ನೇಮಕಾತಿ ಹಾಗೂ ಭಾರತದಲ್ಲಿ ಐಎಸ್ ಸೂಚನೆ ಮೇರೆಗೆ ಸ್ಫೋಟಕ್ಕೆ ಸಂಚು ರೂಪಿಸುವುದು ಶಂಕಿತರ ಉದ್ದೇಶವಾಗಿತ್ತು ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಇದಕ್ಕೂ ಮೊದಲು ಶಂಕಿತರ ವಿರುದ್ಧ ಮಂಗಳೂರಿನಲ್ಲಿ ಉಗ್ರರ ಕೃತ್ಯಕ್ಕೆ ಸಂಬಂಧಿಸಿದ ಗೋಡೆ ಬರಹ ಪ್ರಕರಣ ದಾಖಲಾಗಿತ್ತು. ಇಸ್ಲಾಮಿಕ್ ಸ್ಟೇಟ್ ಬೆಂಬಲಿಸಲು ಗೋಡೆಬರಹ ಬರೆದಿದ್ದರು. ಜತೆಗೆ ಶಿವಮೊಗ್ಗದ ತುಂಗಾ ತೀರದಲ್ಲಿ ಪ್ರಾಯೋಗಿಕ ಸ್ಫೋಟಿಸುವ ಪ್ರಯೋಗ ನಡೆದಿತ್ತು. ಈ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಿದ್ದು, ಸೈಯದ್ ಹಾಗೂ ಶಾರುಕ್ ಪಾತ್ರದ ಬಗ್ಗೆಯೂ ಜುಲೈನಲ್ಲೇ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.