Advertisement

ಚಿತ್ತಾಪುರಕ್ಕೂ ಕಾಲಿಟ್ಟಿತು ಕುಕ್ಕರ್ ಗಿಫ್ಟ್ ರಾಜಕಾರಣ!

08:37 PM Mar 01, 2023 | Team Udayavani |

ವಾಡಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸದ್ದು ಮಾಡಿದ ಕುಕ್ಕರ್ ಗಿಫ್ಟ್ ರಾಜಕಾರಣ, ಈಗ ಚಿತ್ತಾಪುರ ಮೀಸಲು ಮತಕ್ಷೇತ್ರಕ್ಕೂ ಕಾಲಿಟ್ಟಿದೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮಹಿಳೆಯರಿಗೆ ಕುಕ್ಕರ್ ಗಿಫ್ಟ್ ನೀಡಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದರೆ, ಚಿತ್ತಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಸುನೀಲ ವಲ್ಯಾಪುರೆ ಸ್ತ್ರೀಶಕ್ತಿ ಸಂಘಗಳಿಗೆ ಕುಕ್ಕರ್ ಹಂಚಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಲು ದಿನಗಣನೆ ಶುರುವಾಗುತ್ತಿದ್ದಂತೆ ಚಿತ್ತಾಪುರ ಮತಕ್ಷೇತ್ರದ ಕಮಲ ಪಾಳೆಯದಲ್ಲಿ ಟೀಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತ್ಯೇಕವಾಗಿ ಕ್ಷೇತ್ರ ಸಂಚಾರ ಗೈಗೊಳ್ಳುವ ಮೂಲಕ ಗ್ರಾಮೀಣ ಜನರ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಚಿತ್ತಾಪುರ ಮತಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಕಳೆದ ಐದಾರು ತಿಂಗಳಿಂದ ಗುಪ್ತವಾಗಿ ಕ್ಷೇತ್ರದ ಸುತ್ತಾಟದಲ್ಲಿ ತೊಡಗಿದ್ದು ಗುಟ್ಟಾಗಿ ಉಳಿದಿಲ್ಲ. ತಮ್ಮ ಜನ್ಮದಿನದ ನೆನಪಿನ ಕಾಣಿಕೆ ರೂಪದಲ್ಲಿ ವಿವಿಧ ಗ್ರಾಮಗಳ ಮಹಿಳಾ ಸಂಘಗಳಿಗೆ ಕುಕ್ಕರ್ ವಿತರಣೆ ಮಾಡುವ ಮೂಲಕ ವಲ್ಯಾಪುರೆ ಚರ್ಚೆಗೆ ಗ್ರಾಸವಾಗಿದ್ದಾರೆ.

ಕ್ಷೇತ್ರದ ಕೆಲ ಬಿಜೆಪಿ ಮುಖಂಡರ ಮತ್ತು ತಮ್ಮ ಬೆಂಬಲಿಗರ ಬಳಗವನ್ನು ಕಟ್ಟಿಕೊಂಡು ಬುಧವಾರ ಹಳಕರ್ಟಿ, ಲಾಡ್ಲಾಪುರ, ರಾವೂರ, ಬಳವಡಗಿ, ನಾಲವಾರ ಸೇರಿದಂತೆ ಇತರ ಗ್ರಾಮಗಳಿಗೆ ತೆರಳಿ ದಿನವಿಡೀ ಕುಕ್ಕರ್ ಹಂಚುವ ಕಾರ್ಯದಲ್ಲಿ ತೊಡಗಿದ್ದು ಬೆಳಕಿಗೆ ಬಂದಿದೆ. ಸಾವಿರಾರು ಕುಕ್ಕರ್ ಬಾಕ್ಸ್ ತುಂಬಿದ ಮಿನಿ ಗೂಡ್ಸ್ ವಾಹನಗಳು ಗ್ರಾಮೀಣ ಭಾಗದಲ್ಲಿ ಸಂಚರಿಸಿವೆ. ಸ್ವತಹಃ ವಲ್ಯಾಪುರೆ ಅವರೇ ಅಭಿಮಾನಿಗಳ ಸಮ್ಮುಖದಲ್ಲಿ ಮಹಿಳೆಯರಿಗೆ ಕುಕ್ಕರ್ ವಿತರಿಸುವ ಮೂಲಕ ತಮಗೆ ಆಶೀರ್ವಾದ ಮಾಡುವಂತೆ ಬೇಡಿಕೊಂಡಿದ್ದಾರೆ.

ಮಹಿಳೆಯರ ತಿರಸ್ಕಾರ: ರಾವೂರ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರವಾಡಿ ಗ್ರಾಮದ ವಿವಿಧ ಮಹಿಳಾ ಸಂಘಗಳ ಮಹಿಳೆಯರಿಗೆ ಕುಕ್ಕರ್ ಗಿಫ್ಟ್ ಹಂಚಲು ಬುಧವಾರ ಗ್ರಾಮಕ್ಕೆ ಆಗಮಿಸುತ್ತಿದ್ದ ಸುನೀಲ ವಲ್ಯಾಪುರೆ ಅವರಿಗೆ ಅವಮಾನವಾದ ಪ್ರಸಂಗ ಸಂಭವಿಸಿದೆ. ಮುಂಚಿತವಾಗಿಯೇ ಮಹಿಳಾ ಸಂಘದ ಮುಖಂಡರಿಗೆ ಕುಕ್ಕರ್ ನೀಡುವ ವಿಷಯ ತಿಳಿಸಿದ್ದಾಗಲೂ ಯಾರೊಬ್ಬ ಮಹಿಳೆಯೂ ಕುಕ್ಕರ್ ಸ್ವೀಕರಿಸಲು ಮುಂದೆ ಬರಲಿಲ್ಲ. ಪರಿಣಾಮ ವಾಹನದಲ್ಲಿ ತರಲಾಗಿದ್ದ ನೂರಾರು ಕುಕ್ಕರ್‌ಗಳನ್ನು ವಲ್ಯಾಪುರೆ ಅಭಿಮಾನಿಗಳು ವಾಪಸ್ ತೆಗೆದುಕೊಂಡು ಹೋಗಬೇಕಾಯಿತು.

ಇದನ್ನೂ ಓದಿ: ಯೋಧನ ಕುಟುಂಬದೊಂದಿಗೆ ಅನುಚಿತ ವರ್ತನೆ : ನಿತೀಶ್ ರಿಗೆ ರಾಜನಾಥ್ ಕರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next