ಕುಂಬಳೆ: ಕೇಂದ್ರ ಸರಕಾರವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ನೂತನ ಶಿಕ್ಷಣ ನೀತಿಯಲ್ಲಿ ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಶಿಕ್ಷಣದಲ್ಲಿ ರಾಮಾಯಣ, ಮಹಾಭಾರತ ಮುಂತಾದ ಪುರಾಣಗಳ ಮತ್ತು ದೇಶಭಕ್ತ ಮಹನೀಯರ ಆದರ್ಶವನ್ನು ಸೇರ್ಪಡೆಗೊಳಿಸಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕಾಗಿದೆ. ಆತ್ಮನಿರ್ಭರ ಭಾರತದತ್ತ ನಾವೆಲ್ಲ ಚಿತ್ತ ಹರಿಸಬೇಕು ಎಂದು ಕೇಂದ್ರ ಸಹಾಯಕ ಶಿಕ್ಷಣ ಸಚಿವ ಡಾ| ಸುಭಾಶ್ ಸಾಗರ್ ಹೇಳಿದರು.
ಪೆರಿಯದಲ್ಲಿ ಜರಗಿದ ಕೇರಳ ಕಾಸರಗೋಡು ಕೇಂದ್ರೀಯ ವಿ.ವಿ.ಯ 6ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕೇಂದ್ರ ಸಹಾಯಕ ವಿದೇಶಾಂಗ ಸಚಿವ ವಿ. ಮುರಳೀಧರನ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರಕಾರದ ನೂತನ ಶಿಕ್ಷಣ ನೀತಿಯನ್ನು ಪ್ರಶಂಸಿಸಿದರು. ವಿ.ವಿ. ಉಪಕುಲಪತಿ ಪ್ರೊ| ಎಚ್. ವೆಂಕಟೇಶ್ವರಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿ.ವಿ. ರಿಜಿಸ್ಟ್ರಾರ್ ಡಾ| ಮುರಳೀಧರನ್ ಪ್ರಸ್ತಾವನೆಗೈದು ಸ್ವಾಗತಿಸಿದರು.
ಸಮಾರಂಭದಲ್ಲಿ 1,947 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರಿಗೆ ವಿ.ವಿ. ವತಿಯಿಂದ ಪ್ರಥಮ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.