ಅಂಕಿತ್ (24) ಕುಂಪಲ ಬಂಧಿತ ಆರೋಪಿಯಾಗಿದ್ದು, ತನಿಖೆಯ ವೇಳೆ ಎರಡು ಪ್ರಕರಣವನ್ನು ತಾನೇ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಶುಕ್ರವಾರ ಮತ್ತೆ ಆರೋಪಿಯನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವ ಬಗ್ಗೆ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ. 28ರ ತಡರಾತ್ರಿ ಅಂಕಿತ್ ಮೊದಲು ಮಸೀದಿಗೆ ಕಲ್ಲು ಎಸೆದು, ಆನಂತರ ಕರಾವಳಿ ಬೈಪಾಸ್ ಬಳಿಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ರಿಕ್ಷಾ ಚಾಲಕ ಹನೀಫ್ ಜತೆ ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಅಲ್ಲಿಗೆ ಬಂದ ಹನೀಫ್ ಭಾವ ಶಬ್ಬಿರ್ ಹಾಗೂ ಅಂಕಿತ್ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತೆರ ಳಿದ್ದು, ಈ ವೇಳೆ ಅಂಕಿತ್ ಇಬ್ಬರಿಗೂ ಚೂರಿಯಿಂದ ಇರಿದು ಪರಾರಿ ಯಾಗಿದ್ದ. ಘಟನೆಯಲ್ಲಿ ಹನೀಫ್ ಗಾಯಗೊಂಡು ಮೃತಪಟ್ಟಿದ್ದ.
Advertisement
ಫೆ. 1ರಂದು ಆರೋಪಿ ಅಂಕಿತ್‌ನನ್ನು ಬಂಧಿಸಲಾಗಿದ್ದು, ಈ ವೇಳೆ ಆತನಿಂದ ಬೈಕ್ ವಶಕ್ಕೆ ಪಡೆಯಲಾಗಿದೆ. ಯಾವುದಾದರೂ ಸಂಘಟನೆ ಸದಸ್ಯನಾಗಿದ್ದಾನೋ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ವಿಷ್ಣುವರ್ಧನ್ ಸ್ಪಷ್ಟಪಡಿಸಿದರು.
ಭೇದಿಸಿದ ತಂಡ
ಮಸೀದಿಗೆ ಕಲ್ಲೆಸತ ಹಾಗೂ ರಿಕ್ಷಾ ಚಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಮೂರೇ ದಿನದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಡಿವೈಎಸ್‌ಪಿ ಕುಮಾರಸ್ವಾಮಿ ನೇತೃತ್ವದಲ್ಲಿ 5 ತಂಡ ಹಾಗೂ ಕಲ್ಲೆಸೆತ ಪ್ರಕರಣ ಸಂಬಂಧ 3 ತಂಡ ರಚಿಸಲಾಗಿತ್ತು. ಎಸ್‌ಪಿ ಕೆ. ಟಿ. ಬಾಲಕೃಷ್ಣ ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಮಣಿಪಾಲ ವೃತ್ತ ನಿರೀಕ್ಷಕ ಸುದರ್ಶನ್, ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಕೆ. ಶ್ರೀಕಾಂತ್, ಪಿಎಸ್‌ಐ ಮಧು ಟಿ. ಎಸ್., ನಗರ ಠಾಣೆ ಪಿಎಸ್‌ಐ ಅನಂತ ಪದ್ಮನಾಭ, ಸಂಚಾರ ಠಾಣಾ ಪಿಎಸ್‌ಐ ವೆಂಕಟೇಶ್, ಎಎಸ್‌ಐ ರೊಸಾರಿಯೋ ಡಿ’ಸೋಜಾ ಹಾಗೂ ಸಿಬಂದಿ ಉಮೇಶ್, ಇಮ್ರಾನ್, ಮಹಾಬಲೇಶ್ವರ, ರವಿಚಂದ್ರ, ಸುರೇಶ್, ರಾಮು ಹೆಗ್ಡೆ, ರಾಘವೇಂದ್ರ, ಚಂದ್ರ ಶೆಟ್ಟಿ, ಸಂತೋಷ್ ಕುಂದರ್, ಪ್ರವೀಣ್, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ, ರಾಘವೇಂದ್ರ, ಶಿವಾನಂದ, ನಿತಿನ್ ತಂಡ ಕಾರ್ಯನಿರ್ವಹಿಸಿತು. ಆರೋಪಿಯ ಹಿನ್ನೆಲೆ
ಬಂಧಿತ ಆರೋಪಿ ಅಂಕಿತ್ ಮೂಲತಃ ಉಳ್ಳಾಲದ ಕುಂಪಲ ದವನಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ಉಡುಪಿಯಲ್ಲಿ ಅಕ್ಕನ ಮನೆಯಲ್ಲಿ ವಾಸಿವಾಗಿದ್ದ. ಭಾವನ ಜತೆ ಇಂಟೀರಿಯರ್ ಡಿಸೈನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ಈ ಹಿಂದೆ ಉಳ್ಳಾಲ ಠಾಣೆಯಲ್ಲಿ 3-4 ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಇದೆ. ಉಳ್ಳಾಲದ ಕುಂಪಲದಲ್ಲೂ ಮಸೀದಿಗೆ ಕಲ್ಲು ಎಸೆದ ಬಗ್ಗೆ ಪ್ರಕರಣ ದಾಖಲಾಗಿತ್ತು.