ಉತ್ತರಾಖಂಡ್(ಡೆಹ್ರಾಡೂನ್): ಇದೊಂದು ಅಪರೂಪದ ಘಟನೆ. ಸುಮಾರು 22 ವರ್ಷಗಳ ಹಿಂದಿನ ಉತ್ತರಪ್ರದೇಶ ಬರೇಲಿಯ ಕೊಲೆ ಪ್ರಕರಣದ ಆರೋಪಿಯೊಬ್ಬ ಉತ್ತರಾಖಂಡ್ ಪೊಲೀಸ್ ಇಲಾಖೆಯಲ್ಲಿ 19 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.
ಈ ವಿಷಯ ಬಹಿರಂಗವಾಗಿದ್ದು ಬರೇಲಿ ಕೋರ್ಟ್ ಮುಖೇಶ್ ಕುಮಾರ್ ಎಂಬಾತನನ್ನು ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ ನಂತರ! ಮುಖೇಶ್ ಉತ್ತರಪ್ರದೇಶದ ಬರೇಲಿ ಕಂಟೋನ್ಮೆಂಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅಭಯ್ ಪುರ್ ನಿವಾಸಿಯಾಗಿದ್ದ.
ಈಗ ಪಂತ್ ನಗರ್ ಪೊಲೀಸ್ ಠಾಣೆಯಲ್ಲಿ ಮುಖೇಶ್ ಕುಮಾರ್ ವಿರುದ್ಧ ಮೋಸ ಮಾಡಿರುವ ಪ್ರಕರಣ ದಾಖಲಾಗಿದೆ. 2001ರಲ್ಲಿ ಉತ್ತರಾಖಂಡ್ ಪೊಲೀಸ್ ಇಲಾಖೆಗೆ ನೇಮಕಾತಿ ನಡೆಯುವ ವೇಳೆ ತಾನು ಉತ್ತರಾಖಂಡ್ ಉದಾಂ ಸಿಂಗ್ ನಗರ್ ನಿವಾಸಿ ಎಂದು ದಾಖಲೆ ತೋರಿಸಿ ಕಾನ್ಸಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದ ಎಂದು ವರದಿ ವಿವರಿಸಿದೆ.
2000ನೇ ಇಸವಿ ನವೆಂಬರ್ 9ರಂದು ಉತ್ತರಪ್ರದೇಶ ರಾಜ್ಯದ ಹಿಮಾಲಯ ಪರ್ವತ ಪ್ರಾಂತ್ಯವಾಗಿದ್ದ ಉತ್ತರಾಖಂಡ್ ಪ್ರಾಂತ್ಯವನ್ನು ಪ್ರತ್ಯೇಕಗೊಳಿಸಿ ಉತ್ತರಾಖಂಡ ರಾಜ್ಯವನ್ನು ರಚಿಸಲಾಗಿತ್ತು.
1997ರಲ್ಲಿ ಬರೇಲಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಮುಖೇಶ್ ಕುಮಾರ್ ಅಪರಾಧಿಯಾಗಿದ್ದು, ಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಬರೇಲಿ ನಿವಾಸಿ ನರೇಶ್ ಕುಮಾರ್ ಎಂಬವರು ಅಲ್ಮೋರಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ತಿಳಿಸಿದ್ದರು. ಈ ಬಗ್ಗೆ ಆಂತರಿಕ ತನಿಖೆ ನಡೆಸಿದಾಗ ದೂರಿನ ಅರ್ಜಿಯಲ್ಲಿದ್ದ ವಿಷಯ ಬೆಳಕಿಗೆ ಬಂದಿತ್ತು.
ಕೊಲೆ ಆರೋಪಿ ಮುಖೇಶ್ ಉತ್ತರಾಖಂಡ ಪೊಲೀಸ್ ಇಲಾಖೆಯಲ್ಲಿ 19 ವರ್ಷಗಳ ಕಾಲ ವಿವಿಧ ಭಾಗಗಳಲ್ಲಿ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದಾನೆ. ಪ್ರಕರಣದ ಬಗ್ಗೆ ತನಿಖೆ ನಂತರ ಕ್ರಮ ಕೈಗೊಳ್ಳುವುದಾಗಿ ಪಂತ್ ನಗರ್ ಠಾಣಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.