Advertisement

ಪರಿವರ್ತಿಸಿದ ಭೂಮಿ ಮತ್ತೆ ಕೃಷಿಗೆ

04:32 PM Jul 15, 2023 | Team Udayavani |

ಚಿಕ್ಕಬಳ್ಳಾಪುರ: ನಿಮ್ಮ ಅಮೂಲ್ಯವಾದ ಕೃಷಿ ಭೂಮಿಯನ್ನು ಇತರೆ ಉದ್ದೇಶಗಳಿಗೆ ಬಳಸಲು ನೀವು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಈಗಾಗಲೇ ಭೂ ಪರಿರ್ತವನೆ ಮಾಡಿಸಿಕೊಂಡಿದ್ದು, ಮತ್ತೆ ನೀವು ಅದೇ ಭೂಮಿಯನ್ನು ಕೃಷಿ ಉದ್ದೇಶಕ್ಕೆ ಪರಿವರ್ತಿಸಲು ಉದ್ದೇಶಿಸಿದ್ದೀರಾ..?

Advertisement

ಹಾಗಾದರೆ, ನೀವು ಒಮ್ಮೆ ಕೃಷಿ ಭೂಮಿಯನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ಭೂ ಪರಿವರ್ತನೆ ಮಾಡಿಸಿಕೊಂಡಿದ್ದರೂ ಕೂಡ ತಾವು ಮತ್ತೆ ನಿಮ್ಮ ಭೂ ಪರಿವರ್ತನೆಯ ಭೂಮಿಯನ್ನು ಕೃಷಿಯೇತರ ಉದ್ದೇಶದಿಂದ ಪುನಃ ಕೃಷಿ ಉದ್ದೇಶಕ್ಕೆ ಪರಿವರ್ತಿಸಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಹಂತದಲ್ಲಿ ಕ್ರಮ ವಹಿಸಲು ಗ್ರೀನ್‌ ಸಿಗ್ನಿಲ್‌ ಕೊಟ್ಟಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 95(2) ರಡಿ ಕಂದಾಯ ವಿಧಿಸಲಾಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯನ್ನು ಯಾವುದೇ ಆಧಿಬೋಗದಾರನು ಭೂಮಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಯಾವುದೇ ಉದ್ದೇಶಕ್ಕಾಗಿ ಬದಲಿಸಲು ಇಚ್ಛಿಸಿದ್ದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿದೆ.

ಆದರೆ, ಜಿಲ್ಲಾಧಿಕಾರಿಗಳ ಮೂಲಕ ಭೂ ಪರಿವರ್ತನಾ ಆದೇಶ ಪಡೆದು ಹಲವು ಕಾರಣಗಳಿಂದ ಅದರಲ್ಲೂ ಸುಳ್ಳು ದಾಖಲಾತಿ ನೀಡಿ ಭೂ ಪರಿವರ್ತನೆ ಮಾಡಿದ್ದರೆ ಅಥವಾ ಹಣಕಾಸಿನ ತೊಂದರೆಯಿಂದ ಕೃಷಿ ಭೂಮಿಯನ್ನು ಭೂ ಪರಿರ್ವತನೆಯಂತೆ ಅಭಿವೃದ್ಧಿ ಮಾಡಲು ತೊಂದರೆ ಆಗಿದಿದ್ದಲ್ಲಿ ಅಥವಾ ಪ್ರಸ್ತಾಪಿತ ಜಮೀನಿನ ಮೇಲೆ ನ್ಯಾಯಾಲಯದಲ್ಲಿ ವ್ಯಾಜ್ಯ ಚಾಲ್ತಿಯಲ್ಲಿದ್ದರೆ. ಅಥವಾ ಅನ್ಯ ಕಾರಣಗಳ ನಿಮಿತ್ತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗದ ಕಾರಣ ಹಾಗೂ ಹಣದ ಅಡಚಣೆ ಹಾಗೂ ಅನಿವಾರ್ಯ ಕಾರಣಗಳಿಂದ ಭೂ ಪರಿವರ್ತನೆ ಮುಂದುವರೆಸಲು ಸಾಧ್ಯವಿಲ್ಲ ಮತ್ತಿತರ ಕಾರಣಗಳನ್ನು ನೀಡಿ ಭೂ ಪರಿವರ್ತನಾ ಆದೇಶವನ್ನು ರದ್ದುಪಡಿಸಲು ಅಂದರೆ ಪುನಃ ಕೃಷಿ ಉದ್ದೇಶಕ್ಕೆ ಪರಿವರ್ತಿಸಲು ಕೋರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವು ಮನವಿಗಳು ಸರ್ಕಾರಕ್ಕೆ ಸಲ್ಲಿಕೆ ಹಿನ್ನೆಲೆಯಲ್ಲಿ ಭೂ ಮಾಪನ ಇಲಾಖೆ ಜಿಲ್ಲಾಧಿಕಾರಿಗಳ ಹಂತದಲ್ಲಿ ಒಮ್ಮೆ ಭೂ ಪರಿವರ್ತನೆ ಆದ ಭೂಮಿಯನ್ನು ಪುನಃ ಕೃಷಿ ಭೂಮಿಯಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಿದೆ.

ಸರ್ಕಾರದ ಆದೇಶದಲ್ಲಿ ಏನಿದೆ?: ಕರ್ನಾಟಕ ಭೂಕಂದಾಯ ಕಾಯಿದೆ 1964 ಕಲಂ 83 ರಲ್ಲಿ ಕಂದಾಯ ನಿರ್ಣಯದ ರೀತಿ ಬೇಸಾಯೇತರ ಕಂದಾಯ ಪರಿವರ್ತನೆ ಮತ್ತು ಕೆಲವು ಉದ್ದೇಶಗಳಿಗಾಗಿ ಭೂಮಿಯ ಮೇಲೆ ಬಳಕೆಯನ್ನು ನಿಷೇಧಿಸುವುದು ಎಂದು ಇದ್ದು, ಅದರಂತೆ ನಿಯಮಾನುಸಾರ ತಮ್ಮ ಹಂತದಲ್ಲಿಯೇ ಹಸ್ತಚಾಲಿತವಾಗಿ ಆದೇಶಿಸಬೇಕು.ನಂತರ ಜಿಲ್ಲಾಧಿಕಾರಿಗಳು ಭೂ ಕಂದಾಯ ನಿಗದಿಪಡಿಸಿ ಒಮ್ಮೆ ಅಂತಹ ಆದೇಶವನ್ನು ಜಾರಿಗೊಳಿಸಿದ ನಂತರ ಭೂಮಿ ಕೋರ್ಟ್‌ ಆರ್ಡರ್‌ ಮಾಡ್ನೂಲ್‌ನ್ನು ಬಳಸಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವನ್ನು ಪಹಣಿಯಲ್ಲಿ ಕಾಲೋಚಿತಗೊಳಿಸಬೇಕಿರುತ್ತದೆ ಎಂದು ರಾಜ್ಯ ಕಂದಾಯ ಇಲಾಖೆಯ ಭೂ ಮಾಪನ ಇಲಾಖೆ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಭೂ ಪರಿವರ್ತನಾ ತಂತ್ರಾಂಶದಲ್ಲಿ ಅವಕಾಶ: ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಆದೇಶವನ್ನು ರದ್ದುಗೊಳಿಸಿ ಪುನಃ ಕೃಷಿ ಉದ್ದೇಶಕ್ಕೆ ಪರಿವರ್ತಿಸಲು ಭೂ ಪರಿವರ್ತನಾ ತಂತ್ರಾಂಶದಲ್ಲಿ ತಾಂತ್ರಿಕ ಅವಕಾಶ ಕಲ್ಪಿಸಲಾಗುವುದು. ಸದರಿ ಭೂಮಿ ಇರುವಂತಹ ಪ್ರದೇಶದಲ್ಲಿನ ಸ್ಥಳೀಯ ಯೋಜನಾ ಪ್ರಾಧಿಕಾರದ ಕಾನೂನುಗಳು ಯಾವುವು ಅಡಚಣೆ ಯಾಗುವುದಿಲ್ಲ ಎಬುದನ್ನು ಸಕ್ಷಮ ಪ್ರಾಧಿಕಾರದಿಂದ ಖಾತ್ರಿಪಡಿಸಿಕೊಂಡು ಸದರಿ ವಿಷಯದ ಬಗ್ಗೆ ನಿಯಮಾನುಸಾರ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸೂಚಿಸಿದೆ.

Advertisement

ವಿವಿಧ ಜಿಲ್ಲೆಗಳಿಂದ ಸರ್ಕಾರಕ್ಕೆ ಮನವಿ: ಕೃಷಿಯೇತರ ಉದ್ದೇಶದಿಂದ ಪುನಃ ಕೃಷಿ ಉದ್ದೇಶಕ್ಕೆ ಪರಿವರ್ತಿಸುವ ಭೂ ಪರಿವರ್ತಿತ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕಂದಾಯ ಇಲಾಖೆಗೆ ರಾಜ್ಯದ ಮೈಸೂರು, ಬಾಗಲಕೋಟೆ, ಧಾರವಾಡ, ವಿಜಯನಗರ ಜಿಲ್ಲೆಗಳಿಂದ ಸಾಕಷ್ಟು ಮನವಿಗಳು ಸಲ್ಲಿಕೆ ಆಗಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಭೂ ಪರಿವರ್ತನೆ ಆಗಿ ಅಭಿವೃದ್ಧಿ ಹೊಂದಲು ಹಣಕಾಸಿನ ತೊಂದರೆ ಅಥವಾ‌ ನ್ಯಾಯಾಲಯದಲ್ಲಿ ವ್ಯಾಜ್ಯಗಳಿದ್ದಲ್ಲಿ ಅಥವಾ ಭೂ ಪರಿವರ್ತನೆಯಂತೆ ಅಭಿವೃದ್ಧಿ ಹೊಂದಲು ತೊಂದರೆ ಇರುವ ಭೂ ಪರಿವರ್ತನೆ ಜಮೀನುಗಳನ್ನು ಪುನಃ ಕೃಷಿ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದೆ. ● ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next