ಬೀದಿನಾಟಕ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಲ್ಲಿ ಸಹಕಾರಿಯಾಗಿದೆ. ಏಕೆಂದರೆ ಇಲ್ಲಿ ನಟರೇ ಪ್ರೇಕ್ಷಕರು ಹಾಗೂ ನೋಡಲು ಬಂದ ಪ್ರೇಕ್ಷಕರಲ್ಲಿ ಯಾರೊಬ್ಬನೂ ನಟನಾಗಬಹುದು. ಬೀದಿ ನಾಟಕದ ವಸ್ತು ಅವನಿಗೆ ತುಂಬಾ ಹತ್ತಿರವಾಗಿರಬಹುದು ಅಥವಾ ಅವನದ್ದೇ ಆಗಿರಬಹುದು.
ಬೀದಿ ನಾಟಕಗಳಿಂದ ಪರಿಣಾಮಕಾರಿ ಸಂದೇಶ ನೀಡಲು ಸಾಧ್ಯವಾಗುತ್ತದೆ. ಬಣ್ಣ, ಸಂಗೀತ, ಧ್ವನಿವರ್ಧಕ ಇತ್ಯಾದಿ ಪೂರಕ ಪರಿಕರಗಳ ಹೊರತಾಗಿಯೂ ಬೀದಿನಾಟಕ ಒಂದು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿ ಬೆಳೆದುಬಂದಿದೆ. ಸ್ವಾತಂತ್ರ್ಯಪೂರ್ವದಲ್ಲಿ ಭಾರತೀಯರಲ್ಲಿ ದೇಶಾಭಿಮಾನ ಹಾಗೂ ಸ್ವಾತಂತ್ರ್ಯದ ಹಂಬಲ ಮೈಗೂಡಿಸುವಲ್ಲಿ ಬೀದಿನಾಟಕಗಳು ಪ್ರಮುಖ ಪಾತ್ರ ವಹಿಸಿದವು ಎನ್ನಲಾಗುತ್ತದೆ. ರಂಗಮಂಚ, ಪರದೆ ಇತ್ಯಾದಿಗಳ ಅವಶ್ಯಕತೆ ಇಲ್ಲದಿರುವುದರಿಂದ ಪೋಲೀಸರ ಕಣ್ತಪ್ಪಿಸಿ ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹಬ್ಬಿಸಲು ನಾಟಕದ ಈ ಪ್ರಕಾರ ನೆರವಾಯ್ತು. ಅಂದು ಪುನರ್ಜನ್ಮ ಪಡೆದ ಬೀದಿನಾಟಕ ಮುಂದೆಯೂ ಉಳಿದು ಬೆಳೆದು ಸಮಾಜಕ್ಕೆ ಉತ್ತಮ ಸಂದೇಶ ಕೊಡುವಲ್ಲಿ ಸಹಕಾರಿಯಾಗಿದೆ. ಏಕೆಂದರೆ ಇಲ್ಲಿ ನಟರೇ ಪ್ರೇಕ್ಷಕರು ಹಾಗೂ ನೋಡಲು ಬಂದ ಪ್ರೇಕ್ಷಕರಲ್ಲಿ ಯಾರೊಬ್ಬನೂ ನಟನಾಗಬಹುದು. ಬೀದಿ ನಾಟಕದ ವಸ್ತು ಅವನಿಗೆ ತುಂಬಾ ಹತ್ತಿರವಾಗಿರಬಹುದು ಅಥವಾ ಅವನದ್ದೇ ಆಗಿರಬಹುದು.
ಈ ಕಾರಣಕ್ಕಾಗಿಯೇ ಸುಮನಸಾ ಕೊಡವೂರು ಇವರು ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬೀದಿನಾಟಕ ಸ್ಪರ್ಧೆ ಯಶಸ್ವಿಯಾಯಿತು. ಮೊದಲ ತಂಡ ಅಭಿನಯಿಸಿದ ಬೀದಿ ನಾಟಕದಲ್ಲಿ ಸಾಂಕೇತಿಕವಾಗಿ ಬಣ್ಣ ಹಚ್ಚಿಕೊಂಡ ವಿದ್ಯಾರ್ಥಿಗಳು ಹೆಣ್ಣಿನ ಶೋಷಣೆ ಬಗ್ಗೆ ವಿವಿಧ ಆಯಾಮಗಳನ್ನು ಪ್ರದರ್ಶಿಸಿ, ಇಂದಿನ ಆಧುನಿಕ ಯುಗದಲ್ಲೂ ಮನೆಯಿಂದ ಹೊರಗೆ ಹೊರಟ ಹೆಣ್ಣು ಸುರಕ್ಷಿತವಾಗಿ ಮನೆಗೆ ಹಿಂತಿರುಗುವ ಖಾತರಿಯಿಲ್ಲ ಎನ್ನುವುದನ್ನು ನವಿರಾಗಿ ಸಾದರಪಡಿಸಿದರು. ಸಾರ್ವಜನಿಕವಾಗಿ ಸ್ತ್ರೀ ಸ್ವಾತಂತ್ರ್ಯ ಹಾಗೂ ಮಹಿಳಾ ರಕ್ಷಣೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಪುಢಾರಿಗಳು, ಸಮಾಜ ಲಂಪಟರು ಆಂತರಿಕವಾಗಿ ಸ್ತ್ರೀ ಶೋಷಣೆಯ ಖಳ ನಾಯಕರೆಂಬ ಗೋಮುಖ ವ್ಯಾಘ್ರರು ಎನ್ನುವುದನ್ನು ನಿರೂಪಿಸಿ ಮೆಚ್ಚುಗೆ ಗಳಿಸಿದರು. ಇನ್ನೊಂದು ತಂಡ ಪೊಳ್ಳು ಜಾತ್ಯತೀತವಾದ, ಕೋಮುವಾದ ದೇಶದ ಅತಿ ದೊಡ್ಡ ಶತ್ರುಗಳೆಂದು ನಿರೂಪಿಸಿತು. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿ-ಜಾತಿಗಳ ವಿರುದ್ಧ, ಧರ್ಮ ವಿಂಗಡಣೆ ಹಾಗೂ ಪಕ್ಷಪಾತ ಧೋರಣೆಗಳಿಂದ ಜನರ ನಡುವೆ ವಿಷಬೀಜ ಬಿತ್ತಿ ಅದರ ಲಾಭ ಪಡೆದು ಓಟಿನ ಲೆಕ್ಕಾಚಾರ ಹಾಕುವ ಗೋಸುಂಬೆಗಳ ಮುಖವಾಡ ಕಳಚುವ ಪ್ರಯತ್ನ ಮಾಡಿತು.
ಮಗದೊಂದು ತಂಡ ಬೀದಿನಾಟಕದ ಮೂಲಕ ಮೂಢನಂಬಿಕೆಗಳ ವಿರುದ್ಧ ಯುದ್ಧ ಸಾರಿತು. ಕುಡುಕ ಗಂಡನ ದಬ್ಟಾಳಿಕೆಯಿಂದ ನೊಂದ ಹೆಂಡತಿ, ಅನಾರೋಗ್ಯ ಪೀಡಿತಳಾದ ಮಗಳ ಚಿಕಿತ್ಸೆಗೆ ಪರದಾಡುತ್ತಿರುವ ಕರುಳು ಹಿಂಡುವ ದೃಶ್ಯ, ಸ್ತ್ರೀ ಶೋಷಣೆಯ ಮತ್ತೂಂದು ಮುಖವನ್ನು ತೆರೆದಿಟ್ಟಿತು.
ಸಾಸಿವೆ ಡಬ್ಬದಲ್ಲಿ ಅಡಗಿಸಿಟ್ಟ ದುಗ್ಗಾಣಿಯನ್ನೂ ಕಸಿದೊಯ್ದು ಕುಡಿದು ಬಂದು ತನ್ನ ಕುಡಿತದ ಪ್ರಾಯೋಜಕರ ಮೇಲೆಯೂ ಕ್ರೌರ್ಯ ಪ್ರದರ್ಶಿಸುವ ಪತಿ, ಆಪದಾºಂಧವನಂತೆ ಬಂದು ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸುವ ಸಂಬಂಧಿಯನ್ನು ಅಪಾರ್ಥ ಮಾಡಿಕೊಂಡು ಗಲಾಟೆ ಮಾಡುವ, ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಕಲ್ಪಿಸುವ ಗಂಡನೊಡನೆ ಹೆಣಗಾಡುವ ಸತಿ, ಮಗಳನ್ನು ಆಸ್ಪತ್ರೆಗೆ ಸೇರಿಸುವ ಬದಲು ಮಂತ್ರವಾದಿಯನ್ನು ಕರೆಸಿ ಮಾಟ-ಮಂತ್ರಕ್ಕಾಗಿ ಹಣ ವ್ಯಯಿಸುವ ಮೂಢನಂಬಿಕೆ ಮುಂತಾದವು ಹಳ್ಳಿ ಜೀವನದ ಅನಾಗರಿಕತೆಯನ್ನು ಪ್ರದರ್ಶಿಸಿತು. ಹೀಗೆ ಸಾಮಾಜಿಕ ಜೀವನದ ವಿವಿಧ ಆಗು-ಹೋಗುಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಎಲ್ಲಾ ತಂಡದವರ ಒಕ್ಕೊರಲ ಹಕ್ಕೊತ್ತಾಯ ಒಂದೇ ಆಗಿತ್ತು- ಅದುವೇ ಪರಿವರ್ತನೆ ಬೇಕು-ಬದಲಾಗಬೇಕು ಭಾರತ- ಪರಿವರ್ತನೆ ಜಗದ ನಿಯಮ.
ಜನನಿ ಭಾಸ್ಕರ ಕೊಡವೂರು