ಬೆಳಗಾವಿ : ಮತಾಂತರ ನಿಷೇಧ ಕಾಯಿದೆ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಬಿಗ್ ಫೈಟ್ ಆರಂಭವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕಾಯಿದೆ ವಾಪಾಸ್ ತೆಗೆದುಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈಗಾಗಲೇ ಮಂಡನೆಯಾಗಿರುವ ಈ ವಿಧೇಯಕದ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಚರ್ಚೆ ಆರಂಭವಾಗಲಿದೆ. ಆದರೆ ಉಭಯ ಸದನಗಳಲ್ಲಿ ವಿಧೇಯಕವನ್ನು ಮತಕ್ಕೆ ಹಾಕುವಂತೆ ಮಾಡಲು ಕಾಂಗ್ರೆಸ್ ತಂತ್ರ ರೂಪಿಸಿದ್ದು, ಜೆಡಿಎಸ್ ನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮುಂದಾಗಿದೆ.
ವಿಧಾನಸಭೆಯಲ್ಲಿ ವಿಧೇಯಕ ಒಪ್ಪಿಗೆ ಪಡೆದರೂ ವಿಧಾನ ಪರಿಷತ್ ನಲ್ಲಿ ಒಂದು ಸ್ಥಾನದ ಕೊರತೆಯಾಗಲಿದೆ. ಮೇಲ್ಮನೆಯಲ್ಲಿ ಬಿಜೆಪಿ36 ಸ್ಥಾನ ಹೊಂದಿದ್ದು, ಬಹುಮತಕ್ಕೆ 37 ಮತ ಅಗತ್ಯ. ಒಂದೊಮ್ಮೆ ಜೆಡಿಎಸ್ ಬೆಂಬಳಿಸಿದರೆ ಅಥವಾ ಸಭಾತ್ಯಾಗ ಮಾಡಿದರೆ ಮಾತ್ರ ಬಿಜೆಪಿ ಹಾದಿ ಸುಗಮವಾಗುತ್ತದೆ.
ಆದರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಕಾಯಿದೆಯನ್ನು ವಿರೋಧಿಸಿದ್ದಾರೆ. ಹೀಗಾಗಿ ವಿಧೇಯಕವನ್ನು ಮತಕ್ಕೆ ಹಾಕುವಂತೆ ಮಾಡಿ ಜೆಡಿಎಸ್ ಸದನದಲ್ಲೂ ವಿರೋಧಿಸುವಂತೆ ಮಾಡುವ ಮೂಲಕ ಇಕ್ಕಟ್ಟಿಗೆ ಸಿಲುಕಿಸುವುದು ಕಾಂಗ್ರೆಸ್ ತಂತ್ರ. ಒಂದೊಮ್ನೆ ಜೆಡಿಎಸ್ ಸಭಾತ್ಯಾಗ ಮಾಡಿದರೆ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿದಂತಾಗುತ್ತದೆ. ಈ ಮೂಲಕ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದ ವಿಚಾರಸಲ್ಲಿ ದ್ವಂದ್ವ ನಿಲುವು ತಾಳುತ್ತದೆ ಎಂದು ಸ್ಥಾಪಿಸುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.
ಕಲಾಪ ಆರಂಭಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯಿದೆ ಎರಡನ್ನು ವಾಪಾಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸಂಖ್ಯಾಬಲ ಇದೆ ಎಂದು ಏನು ಬೇಕಾದರೂ ಮಾಡುವುದು ಸಂವಿಧಾನ ವಿರೋಧವಾಗುತ್ತದೆ. ಮೇಲ್ಮನೆಯಲ್ಲಿ ನಮಗೆ ಬಹುಮತವಿದೆ. ಹೀಗಾಗಿ ಎರಡು ಕಡೆ ಮತಕ್ಕೆ ಹಾಕುವಂತೆ ಮಾಡುತ್ತೇವೆ. ಸಭಾತ್ಯಾಗ ಮಾಡುವುದೂ ಬಿಜೆಪಿಗೆ ಬೆಂಬಲ ಕೊಟ್ಟಂತೆ. ಹೊರಗಡೆ ವಿರೋಧಿಸಿದರೆ ಸಾಲದು ಎಂದು ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ.