Advertisement

ಅಪರಾಧ ತಡೆಗೆ ಜನತೆ ಸಹಕರಿಸಲಿ

05:30 PM Apr 28, 2019 | Naveen |

ರಾಯಚೂರು: ನವೋದಯ ಕಾಲೇಜಿನ ವಿದ್ಯಾರ್ಥಿನಿ ಸಾವು ಪ್ರಕರಣ ನಿಜಕ್ಕೂ ತಲೆ ತಗ್ಗಿಸುವಂಥ ಕೃತ್ಯವಾಗಿದೆ. ಇಂಥ ಘಟನೆ ಮರುಕಳಿಸದಂತೆ ತಡೆಗಟ್ಟಲು ಇಲಾಖೆ ಜತೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಅಪರಾಧ ವಿಭಾಗದ ಎಡಿಜಿಪಿ ಡಾ| ಎಂ.ಎ.ಸಲೀಂ ಮನವಿ ಮಾಡಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿ ಮುಖಂಡರು, ವಿದ್ಯಾರ್ಥಿ ಹೋರಾಟಗಾರರು, ಸಂಘಟಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಅವರು ಸಂವಾದ ನಡೆಸಿದರು. ಇಂಥ ಕೃತ್ಯ ನಡೆಯಬಾರದಿತ್ತು. ಘಟನೆ ಬೆಳಕಿಗೆ ಬಂದು ಈ ಮಟ್ಟದ ತೀವ್ರತೆ ಪಡೆಯಲು ಜಿಲ್ಲೆಯ ಜನರ ಪಾತ್ರ ಬಹಳ ಮುಖ್ಯವಾಗಿದೆ. ಅನೇಕ ಸಂಘಟನೆಗಳು ಈಗಾಗಲೇ ಸಾಕಷ್ಟು ಹೋರಾಟ ಮಾಡಿ ಎಚ್ಚರಿಸಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಇಲಾಖೆ ಕೂಡ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಇಬ್ಬರು ಪೊಲೀಸರನ್ನು ಅಮಾನತು ಕೂಡ ಮಾಡಿದೆ ಎಂದು ವಿವರಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಗಳ ಮುಖಂಡರು, ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದೆ. ಕೂಡಲೇ ತನಿಖೆ ತೀವ್ರಗೊಳಿಸಿ ಅವರನ್ನೂ ಬಂಧಿಸಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ನಗರದಲ್ಲಿ ಮಹಿಳೆಯರಿಗೆ ಹೆಚ್ಚಿನ ಭದ್ರತೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಪೊಲೀಸರು ಪೆಟ್ರೋಲಿಂಗ್‌ ಮಾಡಬೇಕು, ಅಗತ್ಯ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ನ್ಯಾ| ವರ್ಮಾ ಸಮಿತಿ ಶಿಫಾರಸುಗಳನ್ನು ಜಾರಿ ಮಾಡಿ ಅದರ ಬಗ್ಗೆ ಜಾಗೃತಿ ಮೂಡಿಸಬೇಕು. ರಾಜ್ಯದಲ್ಲಿ ಎಂಎಲ್ಸಿ ಉಗ್ರಪ್ಪ ನೀಡಿದ ವರದಿ ಶಿಫಾರಸುಗಳನ್ನು ಜಾರಿ ಮಾಡಬೇಕು. ಎಲ್ಲ ಶಾಲಾ-ಕಾಲೇಜುಗಳಲ್ಲಿ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರನ್ನು ಒಳಗೊಂಡ ಲೈಂಗಿಕ ಕಿರುಕುಳ ವಿರೋಧ ಸಮಿತಿ ರಚಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ದೂರು ಮತ್ತು ಸಲಹಾ ಪೆಟ್ಟಿಗೆಗಳನ್ನು ಅಳವಡಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು. ಬಳ್ಳಾರಿ ವಲಯ ಐಜಿಪಿ ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ವಿವಿಧ ಸಂಘಟನೆ ಮುಖಂಡರಾದ ಚೇತನಾ ಬನಾರೆ, ಚನ್ನಬಸವ ಜಾನೇಕಲ್, ಶಿವಕುಮಾರ ಮ್ಯಾಗಳಮನಿ, ಲಕ್ಷ್ಮಣ ಮಂಡಲಗೇರಾ ಸೇರಿ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next