ಉಡುಪಿ: ರಾಜ್ಯದಲ್ಲಿ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರವೇ ಉದ್ಯಮದಾರರ ಮನೆಬಾಗಿಲಿಗೆ ಬರಲಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ| ಮುರುಗೇಶ್ ನಿರಾಣಿ ಹೇಳಿದರು.
ಉಡುಪಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಕಚೇರಿಗೆ ಸೋಮವಾರ ಭೇಟಿ ನೀಡಿ ಜಿಲ್ಲೆಯ ಉದ್ದಿಮೆದಾರರೊಂದಿಗೆ ಅವರು ಸಂವಾದ ನಡೆಸಿದರು.
ಉಡುಪಿ ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮತ್ತು ಕೈಗಾರಿಕೆಗಳ ಬೆಳವಣಿಗೆಗೆ ಪೂರಕ ವ್ಯವಸ್ಥೆಗಳನ್ನು ಒದಗಿಸುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ನಡೆಯುವ ಕೈಗಾರಿಕಾ ಅದಾಲತ್ ಮತ್ತು ನವೆಂಬರ್‌ನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯ ಉದ್ದಿಮೆದಾರರು ಇದರಲ್ಲಿ ಭಾಗವಹಿಸಿ ಸಂಪೂರ್ಣ ಪ್ರಯೋಜನ ಪಡೆಯಬೇಕು. ಕೈಗಾರಿಕೆಗಳ ಅಭಿವೃದ್ಧಿಗೆ ಸರಕಾರದಿಂದ ನೀಡುವ ಸಾಲ ಮತ್ತು ಸಬ್ಸಿಡಿ ಸೌಲಭ್ಯಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುವಂತೆ ತಿಳಿಸಿದರು.
ಮಂಗಳೂರು-ಉಡುಪಿ ಭಾಗದ ಕೈಗಾರಿಕೋದ್ಯಮಿಗಳ ಅನುಕೂಲಕ್ಕಾಗಿ ಬಳುRಂಜೆಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಹಾಗೂ ಕೋಟದಲ್ಲಿ 250 ಎಕರೆ ಕೈಗಾರಿಕಾ ವಲಯವನ್ನು ಸ್ಥಾಪಿಸಲಾಗುವುದು. ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೈಗಾರಿಕಾ ತೆರಿಗೆಯ ಶೇ.40ರಷ್ಟು ಮೊತ್ತವನ್ನು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುವುದು. ಮಹಿಳಾ ಕೈಗಾರಿಕೋದ್ಯಮಿಗಳಿಗೂ ಪ್ರೋತ್ಸಾಹ ನೀಡಲಾಗುವುದು ಎಂದರು.
ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕಿ ಡಾ| ವಿಜಯೇಂದ್ರ ವಸಂತ್, ಪವರ್ ಸಂಸ್ಥೆ ಅಧ್ಯಕ್ಷೆ ಪೂನಂ ಶೆಟ್ಟಿ, ಸಣ್ಣ ಕೈಗಾ ರಿ ಕೆ ಗಳ ಸಂಘದ ಜಿಲ್ಲಾ ಧ್ಯಕ್ಷ ಪ್ರಶಾಂತ್ ಬಾಳಿಗ, ಮಣಿಪಾಲ ಟೆಕ್ನಾಲಜಿಸ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್ ಪೈ ಹಾಗೂ ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣ
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾರಾಹಿ ಯೋಜನೆ ಮುಗಿದ ಬಳಿಕ 10ರಿಂದ 12 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಸಲಾಗುವುದು. 60 ಕೆಎಲ್‌ಪಿಡಿ ಎಥೆನಾಲ್‌ಗೆ ಇದು ಅನುಕೂಲವಾಗಲಿದೆ ಎಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಸಚಿವರು ಇದಕ್ಕೆ ಬೇಕಿರುವ ಆರ್ಥಿಕ ನೆರವು ನೀಡಲಾಗುವುದು. ಎಥೆನಾಲ್ ನಿಯಮಾವಳಿ ಪ್ರಕಾರ ಶೇ. 100 ಸಾಲ ಸೌಲಭ್ಯ ನೀಡಲಾಗುವುದು. ಈ ಮೂಲಕ ಸಕ್ಕರೆ ಕಾರ್ಖಾನೆಯನ್ನು ಪುನಃನಿರ್ಮಿಸಲಾಗುವುದು ಎಂದರು.