ಹುಣಸೂರು: ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತಕ್ಕಲು ಹಾಡಿಯಲ್ಲಿ ಗದ್ದಿಗೆ ಪ್ರಾಂತ್ಯದ ಆದಿವಾಸಿ ಹಾಡಿಗಳ ಅರಣ್ಯ ಹಕ್ಕುಸಮಿತಿ ಹಾಗೂ ಹಾಡಿ ಅಭಿವೃದ್ದಿ ಸಮಿತಿ ಸದಸ್ಯರುಗಳೊಡನೆ ಡೀಡ್ ಸಂಸ್ಥೆಯ ಡಾ.ಎಸ್.ಶ್ರೀಕಾಂತ್ ನೇತೃತ್ವದಲ್ಲಿ ಹೈಕೋರ್ಟ್ ಸಮಿತಿಯ ಪುನರ್ವಸತಿ ಶಿಫಾರಸ್ಸುಗಳ ಕುರಿತು ಆದಿವಾಸಿಗಳೊಂದಿಗೆ ಸಂವಾದ ನಡೆಯಿತು.
ತೆಕ್ಕಲು ಹಾಡಿಯ ಮುಖ್ಯಸ್ಥ ಶಿವಣ್ಣರ ಅಧ್ಯಕ್ಷತೆಯಲ್ಲಿ ನಡೆದ ಸಂವಾದದಲ್ಲಿ ಹೈಕೋರ್ಟ್ ಸಮಿತಿ ವರದಿಯಲ್ಲಿ ಕೈಬಿಟ್ಟು ಹೋಗಿರುವ ತಕ್ಕಲುಹಾಡಿ, ಮಾದಯ್ಯನಕಟ್ಟೆ ಹಾಡಿ ಹಾಗೂ ಸೋನಹಳ್ಳಿಹಾಡಿಗಳ 150 ಕುಟುಂಬಗಳನ್ನು ಹೈಕೋರ್ಟ್ ಪುನರ್ವಸತಿ ಸಮಿತಿಯ ಪಟ್ಟಿಗೆ ಹಾಡಿ ಗ್ರಾಮಸಭೆಗಳಿಂದ ಪ್ರಾಂತೀಯ ವಿಭಾಗಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಆದಾರದ ಮೇಲೆ ಸೇರಿಸಬೇಕೆಂದು ಸರಕಾರವನ್ನು ಕೋರಬೇಕೆಂದು ನಿರ್ಣಯಿಸಿದರು.
ತಕ್ಕಲುಹಾಡಿ ಹಾಗೂ ಮಾದಯ್ಯನಕಟ್ಟೆ ಹಾಡಿಯ 106ಆದಿವಾಸಿ ಕುಟುಂಬಗಳ ಸ್ವಾಧೀನದಲ್ಲಿರುವ 150 ಎಕರೆ ಕೃಷಿಭೂಮಿಗೆ ಸಾಗುವಳಿಪತ್ರ ನೀಡಬೇಕು, ಈ ಹಾಡಿಗಳಿಗೆ ಸಮುದಾಯ ಭವನ, ಅಂಗನವಾಡಿ ಕಟ್ಟಡ ಹಾಗೂ 70 ವಾಸದ ಮನೆಗಳು, ಒಂದು ಆಶ್ರಮಶಾಲೆ ಮಂಜೂರು ಮಾಡಲು ಸಭೆ ಆಗ್ರಹಿಸಿದೆ. ಈ ಪ್ರದೇಶದ ಆದಿವಾಸಿ ಕುಟುಂಬಗಳ ಶೈಕ್ಷಣಿಕ ಪ್ರಗತಿಗೆ ಆಶ್ರಮ ಶಾಲೆ ಅನಿವಾರ್ಯತೆ ಬಗ್ಗೆ ಚರ್ಚಿಸಲಾಯಿತು.
ಡೀಡ್ ನಿರ್ದೇಶಕ ಡಾ.ಶ್ರಿಕಾಂತ್ ಹೈಕೋರ್ಟ್ ಸಮಿತಿಯ ಪುನರ್ವಸತಿ ಕುರಿತ 24 ಶಿಫಾರಸ್ಸುಗಳನ್ನು ಸಭೆಗೆ ವಿವರಿಸಿ, ಜಾರಿಯಾಗುವಂತೆ ಹಾಡಿಯ ಅರಣ್ಯ ಹಕ್ಕುಸಮಿತಿಗಳು ಹಾಗೂ ಅಭಿವೃದ್ದಿ ಮಂಡಳಿಗಳು ಜಂಟಿಯಾಗಿ ಸರ್ಕಾರವನ್ನು ಒತ್ತಾಯಿಸಬೇಕೆಂದರು. ಸಂಯೋಜಕ ಪ್ರಕಾಶ್ ಗ್ರಾಮಸಭೆಯಿಂದ ನಾಮಕರಣಗೊಂಡಿರುವ ಹಾಡಿಯ ಮುಂದಾಳುಗಳು ತಮ್ಮ ಹಾಡಿಗಳಲ್ಲಿ ಸೌಲಭ್ಯ ಪಡೆದುಕೊಳ್ಳಲು ಮುಂದಾಳತ್ವವಹಿಸಿಕೊಳ್ಳಬೇಕೆಂದರು. ಮಕ್ಕಳು ಹಕ್ಕುಗಳು ಮತ್ತು ಶಿಕ್ಷಣದ ಪ್ರಾಮುಖ್ಯತೆ ಕುರಿತು ಮಕ್ಕಳ ಹಕ್ಕುಗಳ ಕಾರ್ಯಕರ್ತ ಅನಂತ್ ಮಾತಾನಾಡಿದರು.
ಬುಡಕಟ್ಟು ಕೃಷಿಕರ ಸಂಘದ ಅದ್ಯಕ್ಷ ಪಿ.ಕೆ.ರಾಮು ಮಾತನಾಡಿ ಅಧಿಕಾರಿಗಳು ಸಭೆಗೆ ಕರೆದರೂ ಹಾಜರಾಗಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲಾ,ಪರಿಸ್ಥಿತಿ ಹೀಗಿರುವಾಗ ಅರಣ್ಯಹಕ್ಕು ಸಮಿತಿಗಳು ಹಾಗೂ ಹಾಡಿ ಅಭಿವೃದ್ದಿಮಂಡಳಿಗಳು ಕನಿಷ್ಟ ಕಚೇರಿಗಳಿಗೆ ಭೇಟಿ ನೀಡಿ, ಪಡೆದುಕೊಳ್ಳುವ ಪರಿಪಾಠ ಮೈಗೂಡಿಸಿಕೊಳ್ಳಬೇಕೆಂದರು. ಸಂಘದ ಕಾರ್ಯದರ್ಶಿ ಜಯಪ್ಪ ಆದಿವಾಸಿಗಳು ನಮಗೆ ಸಂವಿದಾನಬದ್ದವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಲು ಶಿಕ್ಷಣವನ್ನೇ ದೊಡ್ಡ ಅಸ್ತçವಾಗಿ ಬಳಸಿಕೊಳ್ಳಬೇಕೆಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ವಿಠಲನಾಣಚ್ಚಿ ಮಾತನಾಡಿ ಆದಿವಾಸಿ ಪಾರ್ಲಿಮೆಂಟ್‌ನ ಮನವಿಪತ್ರವನ್ನು ಪರಿಶೀಲಿಸಲು ಹಾಗೂ ಕಾಡಿನಿಂದ ಹೊರಹಾಕಿರುವ ಕುಟುಂಬಗಳಿಗೆ ನೀಡಬೇಕಾದ ಪುನರ್ವಸತಿ ವಿಳಂಬದ ಕಾರಣಗಳನ್ನು ಅರಿಯಲು ಹೆಚ್.ಡಿ.ಕೋಟೆ ನ್ಯಾಯಾಲಯದ ನ್ಯಾಯಾಧೀಶರು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಪ್ರಕ್ರಿಯೆ ಮುಗಿದ ಮೇಲೆ ಹೈಕೋರ್ಟ್ಗೆ ವರದಿ ಸಲ್ಲಿಸುವ ಸಾದ್ಯತೆಗಳಿವೆ ಎಂದರು. ಆದಿವಾಸಿ ಮಹಿಳಾ ಪ್ರತಿನಿಧಿ ಬೊಮ್ಮಿಯವರು ಸಂವಾದ ನಿರೂಪಿಸಿದರು.