ಕಾನ್ಪುರ : ನ.25ರಿಂದ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಉತ್ತರಪ್ರದೇಶದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಆಡುವ ಭಾರತೀಯ ಕ್ರಿಕೆಟಿಗರಿಗೆ ಹಲಾಲ್ ಮಾಡಿದ ಮಾಂಸವನ್ನೇ ನೀಡಬೇಕು ಎಂದು ಬಿಸಿಸಿಐ ಆದೇಶಿಸಿದೆ. ಇದರಿಂದ ಭಾರೀ ವಿವಾದ ಸೃಷ್ಟಿಯಾಗಿದೆ.
ಸ್ವತಃ ಬಿಜೆಪಿ ವಕ್ತಾರ ಗೌರವ್ ಗೋಯೆಲ್ ಇದನ್ನು ವಿರೋಧಿಸಿ, ತಕ್ಷಣ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಬಿಸಿಸಿಐನ ಯಾವುದೇ ಪದಾಧಿಕಾರಿಗಳು ಪ್ರತಿಕ್ರಿಯಿಸಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಕ್ರಿಕೆಟಿಗರು ತಮಗಿಷ್ಟ ಬಂದ ಯಾವುದೇ ಆಹಾರವನ್ನು ತಿನ್ನಲು ಸ್ವತಂತ್ರರು. ಆದರೆ ಹಲಾಲ್ ಮಾಡಿದ ಮಾಂಸವನ್ನೇ ತಿನ್ನಬೇಕು ಎಂದು ಆದೇಶಿಸಲು ಬಿಸಿಸಿಐ ಯಾರು? ಇದು ಕಾನೂನುಬಾಹಿರ, ಹೀಗೆ ನಡೆಯಲು ನಾವು ಬಿಡುವುದಿಲ್ಲ ಎಂದು ಗೌರವ್ ಕಿಡಿಕಾರಿದ್ದಾರೆ. ಮೂಲಗಳ ಪ್ರಕಾರ ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿ ಡಯೆಟ್ ಉದ್ದೇಶದಿಂದ ಈ ರೀತಿಯ ಆಹಾರಕ್ರಮವನ್ನು ಸಿದ್ಧಪಡಿಸಿದ್ದಾರೆ. ಸಾಮಾನ್ಯವಾಗಿ ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವುದಿಲ್ಲ, ಮುಸ್ಲಿಮರು ತಿನ್ನುತ್ತಾರೆ.
ಹಲಾಲ್‌ಗೆ ವಿರೋಧವೇಕೆ?: ಹಲಾಲ್ ಎನ್ನುವುದು ಇಸ್ಲಾಂನಲ್ಲಿ ಅನುಸರಿಸುವ ಪದ್ಧತಿ. ಪ್ರಾಣಿಯನ್ನು ಕೊಲ್ಲುವ ಮುನ್ನ ನಿರ್ದಿಷ್ಟ ಜಾಗದಲ್ಲಿ ರಕ್ತನಾಳಗಳಿಗೆ ಚುಚ್ಚ ಲಾಗುತ್ತದೆ. ಹೀಗೆ ಮಾಡುವು ದರಿಂದ ರಕ್ತ ಹೊರಹರಿ ಯುತ್ತದೆ. ನಂತರ ಉಳಿಯುವ ಮಾಂಸವನ್ನು ಅಡುಗೆಗೆ ಬಳಸಲಾಗುತ್ತದೆ. ಇದರ ಪರಿಣಾಮ ಪ್ರಾಣಿ ನಿಧಾನವಾಗಿ ನರಳಿ, ನರಳಿ ಪ್ರಾಣಬಿಡುತ್ತದೆ.
ಇದನ್ನು ಹಲವು ಸಂಘಟನೆಗಳು ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿವೆ. ಗೋ, ಹಂದಿಮಾಂಸಕ್ಕೆ ನಿಷೇಧ ಹೊಸತಲ್ಲ: ಹಲಾಲ್ ಮಾಡಿದ ಮಾಂಸವನ್ನೇ ನೀಡಬೇಕೆಂದು ಹೇಳಿರುವುದು ಹೊಸ ಸುದ್ದಿಯಾಗಿದ್ದರೂ, ಗೋಮಾಂಸ ಮತ್ತು ಹಂದಿಮಾಂಸವನ್ನು ನೀಡದಿರುವುದು ಹೊಸ ಸುದ್ದಿಯೇನಲ್ಲ ಎಂದು ಮಾಜಿ ಕ್ರಿಕೆಟಿಗರೊಬ್ಬರು ಹೇಳಿದ್ದಾರೆ.
ಭಾರತೀಯ ತಂಡದ ಅಧಿಕೃತ ಪ್ರವಾಸದಲ್ಲಿ ಕಡೆಯಪಕ್ಷ ಭಾರತದಲ್ಲಂತೂ ಈ ಎರಡು ಪ್ರಾಣಿಗಳ ಮಾಂಸವನ್ನು ನೀಡುತ್ತಿರಲಿಲ್ಲ, ಇದರಲ್ಲೇನು ಹೊಸತಿಲ್ಲ ಎಂದು ಖಚಿತಪಡಿಸಿದ್ದಾರೆ. ಆದರೆ ಹಲಾಲ್ ಮಾಡಿದ ಮಾಂಸವನ್ನೇ ನೀಡಬೇಕೆಂದು ಹೇಳಿರುವುದು ಸಾಮಾಜಿಕ ಜಾಲತಾಣ ಗಳಲ್ಲೂ ಟೀಕೆಗಳಿಗೆ ಕಾರಣವಾಗಿದೆ. ಈ ಪ್ರಕರಣವನ್ನು ಬಿಸಿಸಿಐ ಹೇಗೆ ನಿಭಾಯಿ ಸುತ್ತದೆ ಎನ್ನುವುದು ಸದ್ಯದ ಕುತೂಹಲ.