Advertisement

ಅಕ್ರಮ ಗಣಿ, ಮರಳುಗಾರಿಕೆ ನಿಯಂತ್ರಿಸಿ: ಸಿ.ಸಿ. ಪಾಟೀಲ್‌

01:52 AM Jan 07, 2021 | Team Udayavani |

ಕಾರ್ಕಳ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಅಕ್ರಮ ಗಣಿ ಮತ್ತು ಮರಳುಗಾರಿಕೆ ನಿಯಂತ್ರಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಕಾರ್ಕಳದ ತಾ.ಪಂ ಸಭಾಂಗಣದಲ್ಲಿ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿ
ಶೀಲನಾ ಸಭೆಯಲ್ಲಿ ಮಾತನಾಡಿದರು.

Advertisement

ಅಕ್ರಮ ಗಣಿಗಾರಿಕೆ ಮತ್ತು ಮರಳುಗಾರಿಕೆ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗಣಿಗಳಿಗೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅನುಮತಿ ನೀಡಬೇಕು.ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 24 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ನೀಡಿದ್ದು, ಇದುವರೆಗೆ 16.29 ಕೋಟಿ ರೂ. ಸಂಗ್ರಹಿಸಿ ಶೇ. 67 ರಷ್ಟು ಪ್ರಗತಿ ಸಾಧಿಸಿದೆ. ಮಾರ್ಚ್‌ ಅಂತ್ಯದ ವೇಳೆಗೆ ಸಂಪೂರ್ಣ ಗುರಿ ಸಾಧಿಸುವಂತೆ ಸಚಿವರು ಸೂಚಿಸಿದರು.

ಮರಳುಗಾರಿಕೆ ಅಕ್ರಮ ತಡೆಗಟ್ಟಲು ಮರಳು ತೆಗೆಯುವ ದೋಣಿಗಳ ಮತ್ತು ಸಾಗಾಟದ ಲಾರಿಗಳ ಜಿಪಿಎಸ್‌ ಪೂರಕವಾಗಿ ಜೋಡಣೆ ಮಾಡುವುದರ ಮೂಲಕ ಅಕ್ರಮ ತಡೆಯುವಂತೆ ಶಾಸಕ ರಘುಪತಿ ಭಟ್‌ ತಿಳಿಸಿದರು.

ಹೊಸ ಮರಳು ನೀತಿಯಂತೆ ಮೊದಲನೇ, 2ನೇ ಮತ್ತು 3ನೇ ಶ್ರೇಣಿಯಲ್ಲಿ ಗುರುತಿಸಲಾಗಿರುವ 34 ನಿಕ್ಷೇಪಗಳಲ್ಲಿ ಮರಳು ತೆಗೆಯಲು ಆಶಯ ಪತ್ರ ನೀಡಿರುವ ಗ್ರಾ. ಪಂ.ಗಳ ವ್ಯಾಪ್ತಿಯಲ್ಲಿ ಸ್ಥಳೀಯರ ಮತ್ತು ಸರಕಾರಿ ಯೋಜನೆಗಳ ಉಪಯೋಗಕ್ಕೆ ಮರಳು ತೆಗೆಯಲು ಅನುಮತಿ ನೀಡುವಂತೆ ಸಚಿವರು ಸೂಚಿಸಿದರು.

ಕೆಂಪು ಕಲ್ಲು ತೊಂದರೆ ನಿವಾರಿಸಿ
ಕಾರ್ಕಳ ತಾ|ಗೆ ಬೆಳ್ತಂಗಡಿ ಮತ್ತು ಮೂಡುಬಿದಿರೆಯಿಂದ ಅಂತರ್‌ ಜಿಲ್ಲಾ ಮರಳು ಸಾಗಾಟದ ವಾಹನಗಳ ಓಡಾಟಕ್ಕೆ ಅನುಮತಿ ನೀಡಿದಲ್ಲಿ ತಾಲೂಕಿಗೆ ಹೆಚ್ಚಿನ ಮರಳು ಪೂರೈಕೆ ಯಾಗಲಿದೆ. ಅಲ್ಲದೇ ತಾಲೂಕಿನಲ್ಲಿನ ಸಾಂಪ್ರದಾಯಿಕ ಕಲ್ಲಿನ ಕೆತ್ತನೆ ಕೆಲಸಗಾರರಿಗೆ ಅಗತ್ಯವಿರುವ ಕಲ್ಲುಗಳನ್ನು ಪಡೆಯಲು ತೊಂದರೆ ಯಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಶಾಸಕ ಸುನೀಲ್‌ ಕುಮಾರ್‌ ಮನವಿ ಮಾಡಿದರು.

Advertisement

ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಮರಳು ಸಮಸ್ಯೆಯನ್ನು ಬಗೆಹರಿಸಿದ್ದು, ಪ್ರಸ್ತುತ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 8,41,710 ಮೆಟ್ರಿಕ್‌ ಟನ್‌ ಮರಳು ಗುರುತಿಸಲಾಗಿದ್ದು, ಕೆಸಿಝಡ್‌ಎಂಎ ಯಿಂದ ಅನುಮತಿಯಿರುವ 7,13,090 ಮೆ.ಟನ್‌ ಮರಳಿನಲ್ಲಿ 3,55,000 ಮೆ.ಟನ್‌ ವಿತರಿಸಲಾಗಿದೆ. ಇದಕ್ಕಾಗಿ 168 ಮಂದಿಗೆ ಪರವಾನಗಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

ತಾ. ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ, ಉದಯ ಕೋಟ್ಯಾನ್‌, ಕುಂದಾಪುರ ಡಿಎಫ್ಒ ಆಶೀಶ್‌ ರೆಡ್ಡಿ, ಉಪ ವಿಭಾಗಾಧಿಕಾರಿ ರಾಜು, ತಹಶೀಲ್ದಾರ್‌ಗಳಾದ ಪುರಂಧರ, ಕಿರಣ್‌ ಗೌರಯ್ಯ, ತಾ.ಪಂ. ಇಒ ಮೇ| ಹರ್ಷ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಸಂದೀಪ್‌ ಮತ್ತಿತರರು ಉಪಸ್ಥಿತರಿದ್ದರು.

“ದೂರುಗಳಿಗೆ ತತ್‌ಕ್ಷಣ ಪ್ರತಿಸ್ಪಂದನೆ’
ಮಂಗಳೂರು ತನ್ನ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರು, ಸಮಸ್ಯೆ ಮತ್ತು ಲೋಪ ದೋಷಗಳನ್ನು ತನ್ನ ಗಮನಕ್ಕೆ ತಂದರೆ 24 ಗಂಟೆಗಳೊಳಗೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ್‌ ಹೇಳಿದರು. ಅವರು ಬುಧವಾರ ಕೊಡಿಯಾಲ್‌ಬೈಲ್‌ನ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮನವಿ ಸಲ್ಲಿಕೆ
ಪುತೂರು ಎಪಿಎಂಸಿ ಅಧ್ಯಕ್ಷ ಹಾಗೂ ನಾನ್‌ ಸಿಆರ್‌ಝಡ್‌ ಮರಳು ಗುತ್ತಿಗೆದಾರರ ಸಂಘದ ಅಧ್ಯಕ್ಷ ದಿನೇಶ್‌ ಮೆದು, ಪಕ್ಷದ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್‌ ರೈ ಕೆಡೆಂಜಿ, ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ಪ್ರವೀಣ್‌ ಆಳ್ವ, ಸುರೇಶ್‌ ಕುಂಡಡ್ಕ, ಸುಪ್ರೀತ್‌ ರೈ ಅವರನ್ನು ಒಳಗೊಂಡ ನಿಯೋಗ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆ ಸಮಸ್ಯೆ ನಿವಾರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿದ ಸಚಿವರು, ಸಮಸ್ಯೆಗಳು ಕಾನೂನಿನ ಚೌಕಟ್ಟಿನಲ್ಲಿದ್ದರೆ ಕೂಡಲೇ ಬಗೆ ಹರಿಸಲು ಪ್ರಯತ್ನಿಸುತ್ತೇನೆ ಎಂದು ಭನರವಸೆ ನೀಡಿದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ ಕಣ್ಣೂರು, ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್‌ ಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ತ ನಾಯಕ್‌ ಅವರು ಉಪಸ್ಥಿತರಿದ್ದರು.

“ಹೊಸ ಮರಳು ನೀತಿ ಜಾರಿಗೆ ಪ್ರಯತ್ನ ‘
ಕರಾವಳಿಗೆ ಪ್ರತ್ಯೇಕ ಮರಳು ನೀತಿಗೆ ಸಂಬಂಧಿಸಿ ಜ. 7ರಂದು ಮಂಗಳೂರಿನಲ್ಲಿ ಕರಾವಳಿ ಶಾಸಕರ, ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದೆ. ಕರಾವಳಿ ಭಾಗದ ಮರಳು ಸಮಸ್ಯೆ ಬಗೆಹರಿಸುವ ಕುರಿತು ಚರ್ಚಿಸಿ, ಸವಿಸ್ತಾರವಾದ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಸಚಿವ ಸಿ.ಸಿ ಪಾಟೀಲ್‌ ಹೇಳಿದರು. ಮರಳಿಗೆ ಸಂಬಂಧಿಸಿ 10 ಸಾವಿರ ಮೆಟ್ರಿಕ್‌ ಟನ್‌ಗಿಂತ ಮೇಲ್ಪಟ್ಟು 21 ಬ್ಲಾಕ್‌ಗಳನ್ನು ಈಗಾಗಲೆ ಗುರುತಿಸಿದ್ದೇವೆ. ಟೆಂಡರ್‌ ಕೂಡ ಕರೆಯಲಾಗಿದೆ. ಸರಕಾರ ಆಡಳಿತಕ್ಕೆ ಬಂದ ಮೇಲೆ 8.55 ಲಕ್ಷ ಮೆಟ್ರಿಕ್‌ ಟನ್‌ ಮರಳನ್ನು ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಸಂಗ್ರಹಿಸಿ ಮಾರಾಟಕ್ಕೆ ಅನುಮತಿ ನೀಡಿದ್ದೇವೆ ಎಂದು ಹೇಳಿದರು.

ನಾನ್‌ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಹೊರತು ಪಡಿಸಿ 34 ಗ್ರಾ.ಪಂ. ಗಳಲ್ಲಿ ಫ‌ಲಾನುಭವಿಗಳಿಗೆ ನೇರ ಮರಳು ತೆಗೆಯಲು ಮತ್ತು 21 ಮರಳು ಬ್ಲಾಕ್‌ಗಳಲ್ಲಿ ಎಂಎಂಎನ್‌ ಮೂಲಕ ತೆಗೆಯಲು ಅವಕಾಶ ನೀಡಲಾಗಿದೆ. ಇದರಿಂದ ಪಂಚಾಯತ್‌ಗೆ ರಾಜಧನವೂ ಸಂಗ್ರಹವಾಗುತ್ತದೆಯಲ್ಲದೇ ಆರ್ಥಿಕವಾಗಿಯೂ ಲಾಭವಾಗುತ್ತದೆ ಎಂದರು.

ಉಡುಪಿ ಜಿಲ್ಲೆಯಲ್ಲಿ 37 ಕ್ರಶರ್‌ ಮಾಲಕರು ಪ್ರತಿ 5 ವರ್ಷಕ್ಕೊಮ್ಮೆ ಲೈಸೆನ್ಸ್‌ ನವೀಕರಣಗೊಳಿಸುವ ನಿಯಮವಿತ್ತು. ಈ ಅವಧಿಯನ್ನು 20 ವರ್ಷಕ್ಕೆ ಏರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next