ಕೋಲಾರ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನಿಂದ ಪ್ರತಿಭಟನೆ ನಡೆಯಿತು.
ಅರ್ಜಿ ವಿಲೇವಾರಿ ಮಾಡಿ: ಸಂಘಟನೆ ಜಿಲ್ಲಾ ಅಧ್ಯಕ್ಷ ಗಾಂಧಿನಗರ ನಾರಾಯ ಣಸ್ವಾಮಿ ಮಾತನಾಡಿ, ನಿರಂತರವಾಗಿ ಏರುತ್ತಿರುವ ಕಟ್ಟಡ ಸಾಮಗ್ರಿಗಳ ಬೆಲೆ ನಿಯಂತ್ರಿಸುವ ಜತೆಗೆ ಕಟ್ಟಡ ಸಾಮಗ್ರಿ ಮೇಲೆವಿಧಿಸಲಾಗುತ್ತಿರುವ ಜಿಎಸ್ ಟಿ ಕಡಿತಗೊಳಿಸಿ ನೋಂದಣಿಯಾದ ಕಟ್ಟಡ ಕಾರ್ಮಿ ಕರಿಗೆ ಕಾಮಗಾರಿಗಳಲ್ಲಿ ಪ್ರಥಮ ಆದ್ಯತೆ ನೀಡಬೇಕು. ನೊಂದಣಿ ಮತ್ತು ಸೌಲಭ್ಯಗಳ ಅರ್ಜಿ ನಿಗದಿಪಡಿಸಿದ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡಿ ನಿಜವಾದ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬೇಕು ಎಂದರು.
ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಭೀಮ ರಾಜ್ ಮಾತನಾಡಿ, ಕಟ್ಟಡ ಕಾರ್ಮಿಕರಿಗೆತಕ್ಷಣ ನೋಂದಣಿ ಮಾಡಬೇಕು. ಫಲಾನುಭವಿಗಳಿಗೆ ಒಂದು ತಿಂಗಳ ಒಳಗಾಗಿ ಹಣ ವರ್ಗಾವಣೆ ಮಾಡ ಬೇಕು. ನಿಜವಾದ ಕಟ್ಟಡ ಕಾರ್ಮಿಕರ ಅರ್ಜಿ ಮರು ಪರಿಶೀಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿವಿಧ ಬೇಡಿಕೆ: ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ಶ್ರೀನಿವಾಸಪುರ ತಾಲೂಕಿಗೆ ಪ್ರತ್ಯೇಕ ಕಚೇರಿ ಮಂಜೂರು ಮಾಡಬೇಕು. ವೈದ್ಯಕೀಯ ಸಹಾಯಧನ ಹೆಚ್ಚಿಸಿ ಬಾಕಿ ಇರುವ ವೈದ್ಯಕೀಯ ಅರ್ಜಿ ಇತ್ಯರ್ಥಪಡಿಸಬೇಕು. ಕಾರ್ಮಿಕರ ಸಹಜ ಮರಣ ಪರಿಹಾರದ ಮೊತ್ತ ಕೂಡಲೇ 2 ಲಕ್ಷಕ್ಕೆ ಹೆಚ್ಚಿಸಬೇಕು, ಅಪಘಾತ ಮರಣ ಪರಿಹಾರದ ಮೊತ್ತವನ್ನು 10 ಲಕ್ಷ ರೂ.ಗೆ ಹೆಚ್ಚಿಸಬೇಕು, ಸಕ್ರಮಗೊ ಳಿಸಲಾದ ಅನಧಿಕೃತ ಕಟ್ಟಡಗಳಿಂದ ಸೆಸ್ ಸಂಗ್ರಹಕ್ಕೆ ಕ್ರಮವಹಿಸಬೇಕು, ಕಾರ್ಮಿಕ ಮಂಡಳಿ ಹಾಗೂ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು. ರೇಷನ್ ಕಿಟ್, ಟೂಲ್ ಕಿಟ್, ಸುರûಾ ಕಿಟ್, ಬೂಸ್ಟರ್ ಕಿಟ್ ಖರೀದಿಯಲ್ಲಿನ ಅಕ್ರಮ ಕುರಿತು ತನಿಖೆಗೆ ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಉಪಾಧ್ಯಕ್ಷೆ ಆಶಾ, ಸಹಕಾರ್ಯದರ್ಶಿ ಪಿ.ಆರ್.ನವೀನ್, ಮುಖಂಡರಾದ ಯಲ್ಲಪ್ಪ, ಮುನಿವೆಂಕಟಪ್ಪ, ಮಂಜುನಾಥ್, ನಾರಾಯಣಪ್ಪ, ಆರೋಗ್ಯನಾಥನ್, ಉಮೇಶ್, ನಾರಾಯಣಸ್ವಾಮಿ, ಭಾಗ್ಯಮ್ಮ, ರಮೇಶ್, ಸಲ್ಮಾ, ರಾಮಚಂದ್ರಪ್ಪ, ಅಂಬರೀಶ್, ನಾಗರಾಜ್ ಮತ್ತಿತರರಿದ್ದರು.