ಮಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಹಿಂದೂಗಳನ್ನು ದಮನಿಸುವ ಕೆಲಸವನ್ನು ನಿರಂತರ ವಾಗಿ ಮಾಡುತ್ತಿದೆ. ಅದರ ಮುಂದುವರಿದ ಭಾಗವಾಗಿ ಹಿಂದೂ ಮಠ,ಜೈನ, ಬೌದ್ಧ, ಸಿಕ್ಖ್ ಪಂಥದ ಧಾರ್ಮಿಕಸಂಸ್ಥೆಗಳನ್ನು ಮುಜರಾಯಿ ಇಲಾ ಖೆಯ ವ್ಯಾಪ್ತಿಗೆ ಸೇರಿಸುವ ಹುನ್ನಾರ ನಡೆಸುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಆರೋಪಿಸಿದ್ದಾರೆ.
ವಿಹಿಂಪ ಕಚೇರಿ “ವಿಶ್ವಶ್ರೀ’ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿ ಮರ ಓಲೈಕೆಯಲ್ಲಿ ಸರಕಾರ ನಿರತವಾಗಿದೆ. ಅಲ್ಪಸಂಖ್ಯಾಕರ ಕ್ರಿಮಿನಲ್ ಕೇಸ್‌ಗಳನ್ನು ಹಿಂಪಡೆವ ಆದೇಶ ಬಳಿಕ ಇದೀಗ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಮಠ ಮಂದಿರಗಳಿಗೆ ಅಂಕುಶ ಹಾಕಲು ಮುಂದಾಗಿರುವುದು ಸರಕಾರದ ಹಿಂದೂ ವಿರೋಧಿ ಧೋರಣೆಯನ್ನು ತೋರಿಸುತ್ತಿದೆ ಎಂದರು.
ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ನಿಯಂತ್ರಣ ಹೇರುವ ಸರಕಾರವು, ಅಲ್ಪಸಂಖ್ಯಾಕರ ಧಾರ್ಮಿಕ ಕೇಂದ್ರಗಳ ಬಗ್ಗೆ ಮೃದು ಧೋರಣೆ ತಾಳುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾಕ, ಬಹುಸಂಖ್ಯಾಕ ಮಧ್ಯೆ ಬಿರುಕು ಮೂಡಿಸುವ ಪ್ರಯತ್ನ ಮಾಡುತ್ತಿದೆ. ದಾಸಶ್ರೇಷ್ಠರಾದ ಕನಕದಾಸ, ಪುರಂದರದಾಸ, ವಾದಿರಾಜರನ್ನು ಜಾತಿ ಗಳಿಗೆ ಸೀಮಿತಗೊಳಿಸಿ ಸಮುದಾಯಗಳ ಮಧ್ಯೆ ಒಡಕು ಸೃಷ್ಟಿಸುತ್ತಿದೆ ಎಂದರು.
ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಸುತ್ತೋಲೆ ಹಿಂದಕ್ಕೆ ಪಡೆದಿರುವುದು ಸ್ವಾಗತಾರ್ಹ ಕ್ರಮ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗ ದಳ ನಾಯಕರಾದ ಪ್ರವೀಣ್ ಕುತ್ತಾರ್, ಭುಜಂಗ ಕುಲಾಲ್ ಉಪಸ್ಥಿತರಿದ್ದರು.