ಮೈಸೂರು: ಕೇರಳದ ವೈನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಪ್ರಭಾವ ಕೊಂಚ ಕಡಿಮೆಯಾಗಿರುವುದರಿಂದ ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಉಕ್ಕಿ ಹರಿಯುತ್ತಿದ್ದ ಕಪಿಲಾ ನದಿಯ ಪ್ರವಾಹ ತಗ್ಗಿದೆ. ಪ್ರವಾಹ ಬಾಧೆಗೆ ಒಳಗಾಗಿದ್ದ ನಂಜನಗೂಡು ತಾಲೂಕಿನಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಭಾನುವಾರ ಬೆಳಗ್ಗೆ ಕಬಿನಿ ಜಲಾಶಯಕ್ಕೆ 61449 ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, 62667 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿತ್ತು. ಕೆಆರ್‌ಎಸ್ ಜಲಾಶಯಕ್ಕೆ 115638 ಕ್ಯೂಸೆಕ್ ಒಳಹರಿವು ಬರುತ್ತಿದ್ದು, 107307 ಕ್ಯೂಸೆಕ್ ಹೊರ ಬಿಡಲಾಗುತ್ತಿತ್ತು.
ಹಾರಂಗಿ ಜಲಾಶಯಕ್ಕೆ 23313 ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, 22813 ಕ್ಯೂಸೆಕ್ ಹೊರ ಬಿಡಲಾಗುತ್ತಿತ್ತು. ಹೇಮಾವತಿ ಜಲಾಶಯಕ್ಕೆ 23218 ಕ್ಯೂಸೆಕ್ ಒಳ ಹರಿವು ಬಂದರೆ 20800 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು. ಒಟ್ಟಾರೆ ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಿಗೆ 223618 ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, 212587 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು,
ಮಧ್ಯಾಹ್ನದ ವೇಳೆಗೆ ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ತಗ್ಗಿದ್ದು, ಸದ್ಯ 48 ಸಾವಿರ ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, ಜಲಾಶಯದ ಮಟ್ಟವನ್ನು 2280 ಅಡಿಗಳಿಗೆ ಕಾದಿರಿಸಿಕೊಂಡು 45 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಕಬಿನಿ ಜಲಾಶಯ ಯೋಜನೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಶೇಷಗಿರಿ ತಿಳಿಸಿದ್ದಾರೆ.
ಅಧಿಕಾರಿಗಳೊಂದಿಗೆ ಭೇಟಿ: ಕಳೆದ ಕೆಲ ದಿನಗಳಿಂದ ಕೇರಳದ ವೈನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೇರಳದ ಗಡಿಯಲ್ಲಿ ಬರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಬರುವ ಎಚ್.ಡಿ.ಕೋಟೆ ತಾಲೂಕಿನ ಬಾವಲಿ, ಮಚ್ಚಾರು, ಬೀಚನಹಳ್ಳಿ ಭಾಗದಲ್ಲಿ ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿ, ಹಲವು ರಸ್ತೆಗಳು ಜಲಾವೃತವಾಗಿ, ವಿದ್ಯುತ್ ಕಡಿತಗೊಂಡು, ವಾಹನ ಸಂಚಾರವೂ ಇಲ್ಲದೇ ಜನಜೀವನ ಅಸ್ತವ್ಯಸ್ತವಾಗಿತ್ತು. ಹಾಡಿಗಳಲ್ಲಿ ವಾಸಿಸುವ ಗಿರಿಜನರು ಸಂಕಷ್ಟಕ್ಕೆ ಸಿಲುಕಿದ್ದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು , ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾಹನ ಸಂಚಾರಕ್ಕೆ ವ್ಯವಸ್ಥೆ: ಕಪಿಲಾ ನದಿ ಉಕ್ಕಿ ಹರಿದ ಪರಿಣಾಮ ಮಲ್ಲನಮೂಲೆ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದ ಪರಿಣಾಮ ಮೈಸೂರು-ನಂಜನಗೂಡು ಮಾರ್ಗ ಬದಲಾವಣೆ ಮಾಡಲಾಗಿತ್ತು. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಹದಿನಾರು ಕಾಲು ಮಂಟಪ, ಸ್ನಾನಘಟ್ಟಗಳು ಮುಳುಗಡೆಯಾಗಿದ್ದವು.
ಇದೀಗ ಜಲಾಶಯದಿಂದ ಹೊರ ಬಿಡುವ ನೀರಿನ ಪ್ರಮಾಣ ಕಡಿಮೆ ಮಾಡಿರುವುದರಿಂದ ಪ್ರವಾಹ ಕೊಂಚ ಕಡಿಮೆಯಾಗಿದ್ದು, ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರದ ಗದ್ದೆಗಳಿಗೆ ನೀರು ನುಗ್ಗಿದ್ದು, ಇನ್ನೂ ಭತ್ತದ ನಾಟಿ ಆಗಿಲ್ಲದಿರುವುದರಿಂದ ಯಾವುದೇ ಹಾನಿಯಾಗಿಲ್ಲ.
ಇನ್ನು ತಲಕಾಡಿಗೆ ಸಂಕರ್ಪ ಕಲ್ಪಿಸುವ ಹೆಮ್ಮಿಗೆ ಸೇತುವೆಯ ಮೇಲೂ ಕಪಿಲೆಯ ನೀರು ಹರಿಯುತ್ತಿದ್ದರಿಂದ ಸಂಪರ್ಕ ಕಡಿತಗೊಂಡಿತ್ತು. ಇದೀಗ ಸಹಜ ಸ್ಥಿತಿಗೆ ಬಂದಿದ್ದು ಸೇತುವೆಯ ಮೇಲೆ ಜನ, ವಾಹನ ಸಂಚಾರ ಆರಂಭವಾಗಿದೆ. ಸುತ್ತೂರು ಸೇತುವೆಯ ಮೇಲೂ ಸಂಚಾರ ಆರಂಭವಾಗಿದೆ.