ರಾಯಚೂರು: ಸರ್ಕಾರದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಹರಡದಂತೆ ತಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್-19ರ ವಸ್ತುಸ್ಥಿತಿ ಹಾಗೂ ಲಸಿಕಾಕರಣದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಅದಕ್ಕೂ ಮುಂಚೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ಅವರು ಜಿಲ್ಲೆಯಲ್ಲಿ ಕೋವಿಡ್ 19 ಮೂರನೇ ಅಲೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡಬೇಕು. ಕೋವಿಡ್ ನಿಯಂತ್ರಣದ ಸರಳ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಗಳ ಬಳಕೆ ಕಡ್ಡಾಯಗೊಳಿಸಬೇಕು. ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆ ಯರು ಮನೆಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ತಪ್ಪದೇ ವಿಚಾರಿಸಿ, ಹೆಚ್ಚಿನೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್‌ಗಳ ವ್ಯವಸ್ಥೆ, ವೆಂಟಿಲೇಟರ್, ಆಕ್ಸಿಜನ್‌ನ ಲಭ್ಯತೆ ಇರುವ ಹಾಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ ಕೊರೊನಾ ಚಿಕಿತ್ಸೆಗೆ ಪೂರಕವಾಗಿರುವ ಔಷಧಗಳು, ಪಿಪಿಇ ಕಿಟ್, ಮಾಸ್ಕ್, ಟೆಸ್ಟಿಂಗ್ ಕಿಟ್ ಸೇರಿದಂತೆ ಮತ್ತಿತರ ಅಗತ್ಯ ಪರಿಕರ ದಾಸ್ತಾನುಗಳ ಬಗ್ಗೆ ಯಾವುದೇ ಕೊರತೆಯಾಗಬಾರದು ಸೂಚಿಸಿದರು.
ನಗರ ಶಾಸಕ ಡಾ| ಶಿವರಾಜ್ ಪಾಟೀಲ್ ಮಾತನಾಡಿದರು. ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಮಾನ್ವಿಯ ತಾಲೂಕಿನ ವ್ಯಾಪ್ತಿಯ ತುಂಗಭದ್ರಾ ನದಿ ಆ ದಡದಿಂದಆಂಧ್ರದಜನಬರುತ್ತಿದ್ದು,ಅಲ್ಲಿ ಚೆಕ್ ಪೋಸ್ಟ್ ಅಗತ್ಯವಿದೆ. ಆಂಬ್ಯುಲೆನ್ಸ್ ನೀಡಿದ್ದು, ಚಾಲಕರಿಲ್ಲ ಎಂದರು. ಕೂಡಲೇ ಚೆಕ್ ಪೋಸ್ಟ್ ಸ್ಥಾಪಿಸಲು ಕ್ರಮ ವಹಿಸಲು ಎಡಿಸಿ ಕೆ.ಆರ್ ದುರಗೇಶರಿಗೆ ಸಚಿವರು ಸೂಚಿಸಿದರು. ಸಂಸದ ರಾಜಾ ಅಮರೇಶ್ವರ ನಾಯಕ, ದೇವದುರ್ಗ ಕ್ಷೇತ್ರದ ಶಾಸಕ ಶಿವನಗೌಡ ನಾಯಕ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಜಿಪಂ ಸಿಇಒ ನೂರ್ ಜಹಾರ್ ಖಾನಂ, ಎಸ್‌ಪಿ ನಿಖೀಲ್ ಬಿ, ಎಸಿ ರಜನಿಕಾಂತ್ ಸೇರಿ ಇತರರಿದ್ದರು.