ಕಿಕ್ಕೇರಿ: ಸಂತಸವೆಷ್ಟು ಇದೆಯೋ ಅದರಷ್ಟೆ ಕೋವಿಡ್ ಭಯವಿದ್ದು ಅವಶ್ಯವಿದ್ದಾಗ ಮಾತ್ರ ಹೊರಗಡೆ ಬನ್ನಿ ಎಂದು ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
ಸಮೀಪದ ಮೂಡನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಕೋವಿಡ್ ಹೆಮ್ಮಾರಿ ನಗರ, ಹಳ್ಳಿ ಎನ್ನದೆ ಎಲ್ಲರನ್ನು ಬಿಡದೆ ಕಾಡುತ್ತಿದೆ. ಭಯ ಬೇಡ. ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ. ಮನೆಯಲ್ಲಿದ್ದು ಶುಚಿ, ರುಚಿ ಆಹಾರ ಸೇವಿಸಿ. ನಿಮ್ಮೊಂದಿಗೆ ನಾನಿದ್ದು, ತವರಿನ ಮಗನಾದ ಯಡಿಯೂರಪ್ಪ ಮಾದರಿ ತಾಲೂಕು ಮಾಡಲು ಪಣತೊಟ್ಟಿದ್ದಾರೆಂದರು.
ಎಚ್.ಡಿ.ರೇವಣ್ಣ ಒಂದು ಕಣ್ಣಿಗೆ ಬೆಣ್ಣೆ, ಮತ್ತೂಂದಕ್ಕೆ ಸುಣ್ಣ ಬಳಿದರು. ಯಡಿಯೂರಪ್ಪ ಕೈಬಿಡದೆ 70ಕೋಟಿ ರೂ. ಅನುದಾನ ಬೇಕು ಎಂದೆ. ಸಾವಿರ ಕೋಟಿ ರೂ. ಅನುದಾನ ಕೊಡುವೆ. ಬಿಜೆಪಿಗೆ ಬಾ ಎಂದು ಕರೆದರು. ಹ್ಯಾಟ್ರಿಕ್ ಗೆಲವು ಜನತೆ ಕೊಟ್ಟರೆ, ಯಡಿಯೂರಪ್ಪನವರು ಮೂರು ಖಾತೆ ಕೊಟ್ಟು ಸಚಿವರನ್ನಾಗಿ ಮಾಡಿದರು ಎಂದು ಭಾವ ಪರವಶರಾದರು.
ತಾಲೂಕಿಗೆ 35ವರ್ಷಗಳ ನಂತರ ಸಚಿವ ಸ್ಥಾನ ಸಿಕ್ಕಿದೆ. ತಾಲೂಕು ತನಗೆ ಜನ್ಮಭೂಮಿ. ರಸ್ತೆ ಅಭಿವೃದ್ಧಿಗಾಗಿ 33ಕೋಟಿ ರೂ. ಕೆರೆಕಟ್ಟೆ ತುಂಬಿಸಲು 23ಕೋಟಿ ರೂ. ದೇಗುಲ ಅಭಿವೃದ್ಧಿಗಾಗಿ 45ಕೋಟಿ ರೂ. ಹೇಮಾವತಿ ನಾಲುವೆ ಅಭಿವೃದ್ಧಿಗಾಗಿ ಒಟ್ಟು 95ಕೋಟಿ ರೂ. ಗಳನ್ನು ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ. ಮನೆ ಮನೆಗೆ ನೀರು ಕೊಡಲು ಸಿದ್ಧನಿದ್ದು ರೈತಾಪಿ ಜನತೆ ಯಾವುದಕ್ಕೂ ಹೆದರದಿರಿ ಎಂದರು.
ಪ್ರಥಮ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಸಚಿವರಿಗೆ ಮಹಿಳೆಯರು ಆರತಿ ಬೆಳಗಿದರೆ, ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿ ಸನ್ಮಾನಿಸಿದರು. ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್‌ಮುಲ್ ಮಾಜಿ ನಿರ್ದೇಶಕ ಶೀಳನೆರೆ ಅಂಬರೀಷ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ ಕುಮಾರ್, ಜಿಲ್ಲಾ ಕಾರ್ಯದರ್ಶಿ ಬೂಕಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಪರಮೇಶ್, ರೈತಮೋರ್ಚಾ ತಾಲೂಕು ಅಧ್ಯಕ್ಷ ಶಿವರಾಮೇ ಗೌಡ, ತಾಪಂ ಉಪಾಧ್ಯಕ್ಷ ರವಿ, ನಾಗೇಂದ್ರ, ವಿವಿಧ ಇಲಾಖಾಧಿಕಾರಿಗಳು ಇದ್ದರು.