Advertisement

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ

08:01 PM Jul 26, 2019 | Sriram |

ಉಡುಪಿ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಸಾಂಕ್ರಾಮಿಕ ರೋಗದ ಭೀತಿಯೂ ಹೆಚ್ಚಳಗೊಂಡಿದೆ. ಈ ನೆಲೆಯಲ್ಲಿ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಪಣ ತೊಟ್ಟಿದೆ. ಈ ಕಾರ್ಯ ಯಶಸ್ವಿಗೆ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವ ಅವಶ್ಯವಿದೆ.

Advertisement

ಅಧಿಕಾರಿಗಳಿಂದ ನಿರಂತರ ಹೋರಾಟ
ಆರೋಗ್ಯ ಇಲಾಖೆ, ನಗರ ಸಭೆ ಅಧಿಕಾರಿಗಳು ಮಲೇರಿಯಾ ಹಾಗೂ ಡೆಂಗ್ಯೂ ಪ್ರಕರಣಗಳು ಪತ್ತೆಯಾಗುವ ಪ್ರದೇಶಕ್ಕೆ ತೆರಳಿ ಕಟ್ಟಡ ಸ್ಥಳ, ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚು ಪ್ರಕರಣ ಕಂಡು ಬರುವ ಪ್ರದೇಶಗಳಿಗೆ ಸೊಳ್ಳೆ ಉತ್ಪತ್ತಿ ಸ್ಥಳ ಪತ್ತೆ ಅಲ್ಲಿ ಫಾಗಿಂಗ್‌ ಮಾಡಲಾಗುತ್ತಿದೆ.

ನಿಮ್ಮ ಪರಿಸರ ಸ್ವಚ್ಛಗೊಳಿಸಿ
ಸಾರ್ವಜನಿಕರು ತಮ್ಮ ಮನೆಯ ಅಕ್ಕಪಕ್ಕದಲ್ಲಿ ಗಲೀಜು ಇದ್ದರೂ, ಸ್ವಚ್ಛತೆಗೆ ಮುಂದಾಗದೆ ಪುರಸಭೆ, ಪಂಚಾಯತ್‌, ನಗರಸಭೆ ಸ್ವಚ್ಛತೆ ಮಾಡಲಿ ಎನ್ನುವ ಮನೋಭಾವದಿಂದ ಹೊರ ಬರಬೇಕು. ನಿಮ್ಮ ಪರಿಸರದ ಸ್ವಚ್ಛತೆಗೆ ಸ್ವತಃ ಮುಂದಾಗಬೇಕು.

ಸೊಳ್ಳೆ ನಿಯಂತ್ರಣಕ್ಕೆ ಮನೆ ಮದ್ದು
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸಂಜೆಯಾದರೆ ಸಾಕು ಸೊಳ್ಳೆಗಳು ಮನೆಗಳಿಗೆ ದಾಳಿಯಿಡುತ್ತದೆ. ಅಂತಹ ಸಂದರ್ಭ ಬೇವಿನ ಹೊಗೆ ಹಾಕಿದರೆ ಸೊಳ್ಳೆಗಳು ಸುಳಿಯುವುದಿಲ್ಲ. ಇದಕ್ಕಾಗಿ ಮನೆ ಸಮೀಪದಲ್ಲಿ ಬೇವಿನ ಗಿಡಗಳನ್ನು ನೆಡುವ ಅಗತ್ಯವಿದೆ. ನಿಂತ ನೀರಿನ ಮೇಲೆ ಸೀಮೆ ಎಣ್ಣೆ ಹಾಕಿದರೆ ಸೊಳ್ಳೆಗಳು ಉತ್ಪತ್ತಿಯಾಗುವುದಿಲ್ಲ.

84 ಡೆಂಗ್ಯೂ ಪ್ರಕರಣ
ಮಂಗಳೂರಿನಲ್ಲಿ ವ್ಯಾಪಕವಾಗಿ ಕಂಡು ಬರುತ್ತಿರುವ ಮಾರಕ ಡೆಂಗ್ಯೂ ಸದ್ಯ ಉಡುಪಿ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದೆ. ಆದರೂ ಯಾವಾಗ ಹೆಚ್ಚಾಗುತ್ತದೆ ಎಂದು ಹೇಳುವುದು ಕಷ್ಟ ಸಾಧ್ಯ. ಜನವರಿ ತಿಂಗಳಿನಿಂದ ಜು. 25ವರೆಗೆ ಒಟ್ಟು 97 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದೇ ಸಮಯಕ್ಕೆ ಕಳೆದ ವರ್ಷ ಅಂದರೆ 2018ರ ಜನವರಿಯಿಂದ ಜುಲೈ ವರೆಗೆ 124 ಪ್ರಕರಣಗಳು ಕಂಡುಬಂದಿದ್ದವು.

Advertisement

ನಗರಸಭೆ 35 ಸ್ವಯಂ ಸೇವಕರು
ಉಡುಪಿ ನಗರಭೆ ವ್ಯಾಪ್ತಿಯ 35 ವಾರ್ಡಗಳ ಪೈಕಿ ಕೇವಲ 11 ಡೆಂಗ್ಯು ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಹೆಚ್ಚು ವರಿಯಾಗಿ 35 ಸ್ವಯಂ ಆರೋಗ್ಯ ಸೇವಕರನ್ನು ನೇಮಕ ಮಾಡಲಾಗಿದ್ದು, ಅವರು ಸೊಳ್ಳೆ ಉತ್ಪತ್ತಿಯ ತಾಣ ನಾಶದ ಜೊತೆ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ವಾರಂಬಳ್ಳಿ: ಡೆಂಗ್ಯೂ ಅಧಿಕ
ಈ ವರ್ಷ ಪತ್ತೆಯಾದ 97 ಪ್ರಕರಣಗಳ ಪೈಕಿ 30 ಪ್ರಕರಣಗಳು ಬ್ರಹ್ಮಾವರದ ವಾರಂಬಳ್ಳಿ ಗ್ರಾಮವೊಂದರಲ್ಲೇ ಕಂಡುಬಂದಿವೆ. ವಾರಂಬಳ್ಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇಲ್ಲಿನ ವಸತಿ ಪ್ರದೇಶಗಳಲ್ಲಿ ಸಾಕಷ್ಟು ನೀರು ನಿಲ್ಲಿಸುವ ಪರಿಣಾಮ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಈ ಪ್ರದೇಶದಲ್ಲಿ ಫಾಗಿಂಗ್‌ ಮಾಡಲಾಗಿದ್ದು, ಸೊಳ್ಳೆ ಉತ್ಪತ್ತಿ ಸ್ಥಳ ಪತ್ತೆ ಹಚ್ಚಿ ನಾಶ ಪಡಿಸುವ ಕಾರ್ಯ ನಡೆಸಲಾಗಿದೆ.

ರಕ್ಷಣಾ ವಿಧಾನ
ಡೆಂಗ್ಯೂನಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಪಾಯ ಹೆಚ್ಚು. ಹೀಗಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಸೊಳ್ಳೆ ನಿರೋಧಕ ಹಾಗೂ ಪರದೆಗಳನ್ನು ಬಳಸಿ ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಬಹುದು. ಮೈ ಮುಚ್ಚುವಂತೆ ಬಟ್ಟೆ ಧರಿಸಬೇಕು. ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು. ಸೊಳ್ಳೆ ಪರದೆ ಬಳಸಬೇಕು.

ದ್ರಾವಣ ಸಿಂಪಡನೆ
ಸೊಳ್ಳೆಗಳ ಲಾರ್ವಾ (ಮೊಟ್ಟೆ) ಪತ್ತೆಯಾದ ಪ್ರದೇಶಗಳಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳನ್ನು ತಡೆಗಟ್ಟಲು ನಿರಂತರವಾಗಿ ಶ್ರಮಿಸಲಾಗುತ್ತಿದೆ.
-ಡಾ| ಪ್ರಶಾಂತ್‌ ಭಟ್‌, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಉಡುಪಿ

ಸಮಸ್ಯೆ ಇದ್ದರೆ ನಮಗೆ ತಿಳಿಸಿ
ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಕೂಡ ಜಾಗೃತಿ ಮೂಡಿಸುವ ಜತೆಗೆ ನಗರವಾಸಿಗಳಿಗೆ ತಮ್ಮ ಸಮಸ್ಯೆ-ಪರಿಹಾರ ಮಾರ್ಗೋಪಾಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ವೇದಿಕೆ ನೀಡುತ್ತಿದೆ. ಆ ಮೂಲಕ ಜನರು ಕೂಡ ಡೆಂಗ್ಯೂ ಹಾಗೂ ಮಲೇರಿಯಾ ವ್ಯಾಪಕವಾಗುವುದನ್ನು ತಡೆಗಟ್ಟುವುದಕ್ಕೆ ತಮ್ಮ ಜವಾಬ್ದಾರಿ ಮೆರೆಯುವುದು ಆವಶ್ಯಕ. ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಆ ಬಗ್ಗೆ ಸೂಕ್ತ ವಿವರದೊಂದಿಗೆ ಫೋಟೋ ತೆಗೆದು ಕಳುಹಿಸಬಹುದು. ಅಲ್ಲದೆ ಕೆಳ ಹಂತದ ಅಧಿಕಾರಿಗಳಿಂದ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯದಿದ್ದರೂ ಆ ಬಗ್ಗೆ ಗಮನಕ್ಕೆ ತಂದರೆ ಉನ್ನತ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಲಾಗುವುದು.
9148594259

Advertisement

Udayavani is now on Telegram. Click here to join our channel and stay updated with the latest news.

Next