ಬೆಂಗಳೂರು: ನಾಲ್ಕು ತಿಂಗಳ ಹಿಂದೆ ಯಷ್ಟೇ ವಿವಾಹವಾಗಿದ್ದ ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮ ನಿಯಮಿತದ (ಕವಿಕಾ) ಗುತ್ತಿಗೆ ನೌಕರ ನಾಯಂಡಹಳ್ಳಿ ಮೇಲ್ಸೇತುವೆಯಿಂದ ಜಿಗಿದು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜ್ಞಾನ ಭಾರತಿ ವ್ಯಾಪ್ತಿಯ ಸೊಣ್ಣೇನಹಳ್ಳಿ ನಿವಾಸಿ ನವೀನ್ (30) ಆತ್ಮಹತ್ಯೆಗೆ ಶರಣಾದವ. ನವೀನ್ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 4 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಶುಕ್ರವಾರ ಬೆಳಗ್ಗೆ 8.30ಕ್ಕೆ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಸ್ಕೂಟರ್ ತೆಗೆದುಕೊಂಡು ನಾಯಂಡಹಳ್ಳಿ ಮೇಲ್ಸೇತು ವೆಯ ಬಳಿ ಬಂದಿದ್ದರು. ಮೇಲ್ಸೇತುವೆ ಯಲ್ಲೇ ಸ್ಕೂಟರ್ ನಿಲುಗಡೆ ಮಾಡಿ ಅಲ್ಲಿಂದ ಏಕಾಏಕಿ ಕೆಳಗೆ ಜಿಗಿದಿದ್ದಾರೆ.
ಸ್ಥಳೀಯರು ಕೊಟ್ಟ ಮಾಹಿತಿ ಆಧರಿಸಿ ಬ್ಯಾಟರಾಯನಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಆ್ಯಂಬುಲೆನ್ಸ್ ಮೂಲಕ ನವೀನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ವೇಳೆ ವೈದ್ಯರು ನವೀನ್ ಅವರನ್ನು ಪರಿಶೀಲಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ: ನವೀನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಂಜಿನಿಯರಿಂಗ್ ಓದಿದ್ದ ನವೀನ್, ಹೆಂಡತಿ ಜೊತೆ ಚೆನ್ನಾಗಿಯೇ ಇದ್ದರು. ಇದ್ದಕ್ಕಿದ್ದಂತೆ ಆತ್ಮ ಹತ್ಯೆ ಮಾಡಿಕೊಂಡಿರುವುದು ಅನುಮಾ ನಕ್ಕೆ ಎಡೆಮಾಡಿಕೊಟ್ಟಿದೆ. ನವೀನ್ ತುಂಬಾ ಒಳ್ಳೆಯ ಹುಡುಗ. ನಮ್ಮ ಫ್ಯಾಕ್ಟರಿಗೆ 3-4 ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ. ಶುಕ್ರವಾರ ಬೆಳಗ್ಗೆ ಫ್ಯಾಕ್ಟರಿಗೆ ಬಂದಿರಲಿಲ್ಲ. ಏನಾಯಿತು ಎಂದು ನವೀನ್‌ಗೆ ಫೋನ್ ಮಾಡಿದಾಗ ಪೊಲೀಸರು ಕಾಲ್ ರಿಸೀವ್ ಮಾಡಿ ವಿಷಯ ತಿಳಿಸಿದರು. ಎಲ್ಲರ ಜೊತೆಗೂ ಚೆನ್ನಾಗಿಯೇ ಇದ್ದ ಎಂದು ಕರ್ನಾಟಕ ವಿದ್ಯುತ್ ಕಾರ್ಖಾನೆಯ ಡೆಪ್ಯುಟಿ ಮ್ಯಾನೇಜರ್ ಬೇಸರ ವ್ಯಕ್ತಪಡಿಸಿದ್ದಾರೆ.