Advertisement

ಕಾಂಕ್ರೀಟ್‌ಗೆ ಕರಾರು; ಆದರೆ ಆಗಿದ್ದು ಡಾಮರು ಕಾಮಗಾರಿ

12:53 AM Feb 21, 2020 | Sriram |

ಗಂಗೊಳ್ಳಿ: ಕಡಲ್ಕೊರೆತ ತಡೆಗಾಗಿ ಗಂಗೊಳ್ಳಿಯಲ್ಲಿ ಕೈಗೊಂಡ ಬ್ರೇಕ್‌ ವಾಟರ್‌ ಕಾಮಗಾರಿಯಿಂದಾಗಿ ಇಲ್ಲಿನ ಮೀನುಗಾರಿಕಾ ಬಂದರಿನ ಒಳ ರಸ್ತೆಗಳಿಗೆ ಅಪಾರ ಹಾನಿಯಾಗಿದ್ದು, ಇದನ್ನು ಕಾಂಕ್ರೀಟಿಕರಣ ಮಾಡಿಕೊಡುವುದಾಗಿ ಡಿಸಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕರಾರು ಆಗಿದ್ದರೂ, ಈಗ ಕಳಪೆ ಡಾಮರೀಕರಣ ಮಾಡಿ ಗುತ್ತಿಗೆದಾರರು ಕೈ ತೊಳೆದುಕೊಂಡಿದ್ದಾರೆ ಎನ್ನುವ ಆರೋಪ ಮೀನುಗಾರರಿಂದ ವ್ಯಕ್ತವಾಗಿದೆ.

Advertisement

ಗಂಗೊಳ್ಳಿಯಲ್ಲಿನ ಬ್ರೇಕ್‌ ವಾಟರ್‌ ಕಾಮಗಾರಿಗೆ ಬೇಕಾದ ಟೆಟ್ರಾಫೈಡ್‌ ಮತ್ತಿತರ ಘನ ಗಾತ್ರದ ಸರಕುಗಳ ಸಾಗಾಟ ವಾಹನಗಳಿಂದಾಗಿ ಬಂದರಿನೊಳಗಿನ ಎಲ್ಲ ರಸ್ತೆಗಳ ಡಾಮರೆಲ್ಲ ಕಿತ್ತು ಹೋಗಿದೆ. ಈ ಸಂಬಂಧ ಮೀನುಗಾರರು ಅನೇಕ ಸಮಯಗಳಿಂದ ಕರಾರರಿನಂತೆ ಕಾಂಕ್ರೀಟಿಕರಣ ಮಾಡಿಕೊಡಿ ಎನ್ನುವುದಾಗಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರಲ್ಲಿ ಬೇಡಿಕೆ ಇಡುತ್ತಲೇ ಬಂದಿದ್ದರೂ, ಆಗಿರಲಿಲ್ಲ.
ಅಂತೂ – ಇಂತೂ ಎರಡು ವಾರಗಳ ಹಿಂದೆ ಒಳ ರಸ್ತೆಗಳ ದುರಸ್ತಿಗೆ ಗುತ್ತಿಗೆ ಸಂಸ್ಥೆ ಮುಂದಾಗಿತ್ತು. ಈಗ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಮೀನುಗಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ರಸ್ತೆ ಕೇವಲ 9 ಅಡಿ ಅಗಲಿ ಇದೆ. ಕನಿಷ್ಠ 12 ಅಡಿ ಅಗಲೀಕರಣವಾಗಬೇಕು.

ಮುಖ್ಯ ರಸ್ತೆಗೂ ಹಾನಿ
ಬ್ರೇಕ್‌ ವಾಟರ್‌ ಕಾಮಗಾರಿಯಿಂದಾಗಿ ಕೇವಲ ಬಂದರಿನೊಳಗಿನ ಒಳ ರಸ್ತೆಗಳು ಮಾತ್ರವಲ್ಲದೆ, ಕುಂದಾಪುರ – ಗಂಗೊಳ್ಳಿ ಮುಖ್ಯ ರಸ್ತೆಗೂ ಹಾನಿಯಾಗಿದೆ. ಇದನ್ನು ಕೂಡ ಸರಿಮಾಡಿಕೊಡುವ ಜವಾಬ್ದಾರಿ ಗುತ್ತಿಗೆ ಸಂಸ್ಥೆಯವರದ್ದೆ ಆಗಿದೆ ಎನ್ನುವುದು ಮೀನುಗಾರರ ಆಗ್ರಹವಾಗಿದೆ.

ಕಳಪೆಯಲ್ಲ
ಈ ರಸ್ತೆಯಯು ಹಿಂದೆ ಹೇಗಿತ್ತೋ, ಹಾಗೇ ಮಾಡಿಕೊಟ್ಟಿದ್ದಾರೆ. ಗುತ್ತಿಗೆದಾರರೇ ಸ್ವತಃ ಕೈಯಿಂದ ಹಣ ಹಾಕಿ ಕಾಮಗಾರಿ ನಿರ್ವಹಿಸಿದ್ದಾರೆ. ಅವರಿಗೆ ಕೇಂದ್ರದಿಂದ ಇನ್ನೂ ಪೂರ್ಣ ಅನುದಾನ ಬಿಡುಗಡೆಯಾಗಿಲ್ಲ. ಇದು ಮುಂದಿನ 2-3 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಇದು ಕಳಪೆಯಲ್ಲ ಎನ್ನುವುದಾಗಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಇಂಜಿನಿಯರ್‌ ತಿಳಿಸಿದ್ದಾರೆ.

ಡಿಸಿ ಸಭೆಯಲ್ಲಿ ಏನು ತೀರ್ಮಾನ?
2015 ರಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಆಗಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸಮ್ಮುಖದಲ್ಲಿ ಅಧಿಕಾರಿಗಳು, ಮೀನುಗಾರರು, ಗುತ್ತಿಗೆ ಸಂಸ್ಥೆ ಅಧಿಕಾರಿಗಳ ಸಮ್ಮುಖದಲ್ಲಿ ಕುಂದು ಕೊರತೆ ಸಭೆ ನಡೆದಿತ್ತು. ಆ ಸಭೆಯಲ್ಲಿ ಒಂದೋ ಗುತ್ತಿಗೆ ಸಂಸ್ಥೆಯುವರು ಪ್ರತ್ಯೇಕ ರಸ್ತೆ ನಿರ್ಮಿಸಿ ಸರಕು ಸಾಗಾಟ ಮಾಡಬೇಕು ಎನ್ನುವ ಆಗ್ರಹ ಮೀನುಗಾರರಿಂದ ಕೇಳಿ ಬಂದಿತ್ತು. ಸಭೆಯಲ್ಲಿ ಆಗಿನ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಬಂದರಿನೊಳಗೆ ಹಾಳಾದ ರಸ್ತೆಯನ್ನು ಗುತ್ತಿಗೆದಾರರೇ ಕಾಮಗಾರಿ ಮುಗಿದ ಬಳಿಕ ಸಂಪೂರ್ಣ ಕಾಂಕ್ರೀಟಿಕರಣ ಮಾಡಬೇಕು ಎಂದು ಹೇಳಿದ್ದರು. ಇದಲ್ಲದೆ ಪರಿಸರ ರಕ್ಷಣೆಗಾಗಿ ಶೇ.5 ರಷ್ಟು ಅನುದಾನವನ್ನು ವಿನಿಯೋಗಿಸಬೇಕು ಎನ್ನುವುದು ಕೂಡ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

Advertisement

ಕಾಂಕ್ರೀಟಿಕರಣವೇ ಆಗಬೇಕು
ಈ ಹಿಂದೆ ಡಿಸಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಾಂಕ್ರೀಟಿಕರಣ ಆಗಬೇಕು ಎನ್ನುವ ತೀರ್ಮಾನ ಆಗಿತ್ತು. ಈ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಗಂಗೊಳ್ಳಿಯ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ಕೂಡ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಕರೆಯಿಸಿ ವಿವರಣೆ ಪಡೆಯಲಾಗುವುದು. ಕರಾರಿನಂತೆ ಕಾಂಕ್ರೀಟಿಕರಣವೇ ಆಗಬೇಕು.
ಗಣೇಶ್‌ ಕೆ.,
ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಉಡುಪಿ

ತೀರಾ ಕಳಪೆ ಕಾಮಗಾರಿ
ಈಗ ಮಾಡಿರುವ ಡಾಮರೀಕರಣ ಕಾಮಗಾರಿ ತೀರಾ ಕಳಪೆಯಾಗಿದೆ. ಇಂಜಿನಿಯರ್‌ಗಳೇ ಗುತ್ತಿಗೆ ಸಂಸ್ಥೆಯವರ ಪರ ವಹಿಸಿ ಮಾತನಾಡುತ್ತಿದ್ದಾರೆ. ಬ್ರೇಕ್‌ ವಾಟರ್‌ ಕಾಮಗಾರಿಯಿಂದಲೇ ನಮ್ಮ ಬಂದರಿನ ರಸ್ತೆಗಳಿಗೆ ಹಾನಿಯಾಗಿದ್ದು, ಆದರೆ ಈಗ ಅವರೇ ಸ್ವಂತ ಕೈಯಿಂದ ಹಣ ಹಾಕಿ ಕಾಮಗಾರಿ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಈ ಹಿಂದೆ ಕಾಂಕ್ರೀಟಿಕರಣ ಮಾಡಿಕೊಡಲು ಅವರಿಗೆ ಸೂಚಿಸಲಾಗಿತ್ತು. ಆದರೆ ಇವರು ಕೇವಲ ಡಾಮರೀಕರಣ ಮಾತ್ರ ಮಾಡಿದ್ದಾರೆ.
– ರವಿಶಂಕರ್‌ ಖಾರ್ವಿ, ಮೀನುಗಾರ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next