ದಾವಣಗೆರೆ: ಗುತ್ತಿಗೆ ಪದ್ಧತಿ ರದ್ದತಿ, ಕೆಲಸ ಕಾಯಮಾತಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ನೇತೃತ್ವದಲ್ಲಿ ಹೊರ ಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ, ಜಿಲ್ಲಾ ಪಂಚಾಯತಿಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸುವ ಪ್ರಕ್ರಿಯೆಯನ್ನೇ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಲ್ಲೆಯ ವಿವಿಧ ಇಲಾಖೆಯಲ್ಲಿ 5-6 ಸಾವಿರ ಒಳಗೊಂಡಂತೆ ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಹೊರ ಗುತ್ತಿಗೆ ನೌಕರರು ಇದ್ದಾರೆ. ಕಳೆದ 10-15 ವರ್ಷಗಳಿಂದ ಕೆಲಸ ಮಾಡುತ್ತಿರುವ ಎಲ್ಲರನ್ನೂ ಕಾಯಂ ಗೊಳಿಸುವ ಮೂಲಕ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು. ಬಿಸಿಎಂ ಹಾಸ್ಟೆಲ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 4 ಸಾವಿರ ನೌಕರರನ್ನು ತೆಗೆದುಹಾಕಲಾಗಿದೆ. ಅವರನ್ನು ಕೆಲಸದಿಂದ ತೆಗೆದು ಹಾಕದೆ, ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಡಿ ಅಧಿಸೂಚಿಸಲಾದ ಅರ್ಹ ದಿನಗೂಲಿ ನೌಕರರಿಗೆ ಹೊಸ ಪಿಂಚಣಿ ಸೌಲಭ್ಯ, ತುಟ್ಟಿಭತ್ಯೆ ಮತ್ತು ಮನೆಬಾಡಿಗೆ ಭತ್ಯೆ, ಗಳಿಕೆ ರಜೆ ನಗದೀಕರಣ, ಅನುಕಂಪದ ಆಧಾರದ ನೌಕರಿ ಸೌಲಭ್ಯ ವಿಸ್ತರಣೆ, ದಿನಗೂಲಿಯಿಂದ ಕಾಯಗೊಂಡು ನಿವೃತ್ತರಾದವರಿಗೆ ಪಿಂಚಣಿ ಸೌಲಭ್ಯ ಒದಗಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಅಧ್ಯಕ್ಷ ಕೆ.ವಿ. ಚಂದ್ರಹಾಸ್, ಮರುಳಸಿದ್ದಪ್ಪ, ಅಂಜಿನಪ್ಪ, ಮಹೇಶ್, ಯಶವಂತ್, ಹಾಲಪ್ಪ ಇತರರು ಇದ್ದರು.