Advertisement

ನಿರಂತರ ಕಾಮಗಾರಿ ಪ್ರಗತಿಯಲ್ಲಿದೆ!

07:50 AM Jul 12, 2019 | Team Udayavani |

ಬೆಂಗಳೂರು: ಇವು ದುರಸ್ತಿ ರಸ್ತೆಗಳು. ಇಲ್ಲಿ ಸದಾ ಒಂದರ ಹಿಂದೊಂದು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಇದರ ಬಿಸಿ ಆ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತಟ್ಟುತ್ತಿದೆ. ಸಂಚಾರದಟ್ಟಣೆ, ಅಪಘಾತಗಳ ಸರಣಿ, ವಾಯು ಮಾಲಿನ್ಯ ಇಲ್ಲಿ, ಉಳಿದ ರಸ್ತೆಗಳಿಗಿಂತ ಹೆಚ್ಚಾಗಿರುತ್ತದೆ.

Advertisement

ಸಜ್ಜನ ರಾವ್‌ ವೃತ್ತ, ಜೆ.ಸಿ ರಸ್ತೆ, ಆಂಜನೇಯಸ್ವಾಮಿ ಮತ್ತು ವಾಸವಿ ದೇವಸ್ಥಾನದ ರಸ್ತೆಗಳಲ್ಲಿ ವೈಟ್ ಟಾಪಿಂಗ್‌, ಕೇಬಲ್, ಒಳಚರಂಡಿ ಪೈಪ್‌ಲೈನ್‌ ಅಳವಡಿಕೆ ಸೇರಿ ‘ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಫ‌ಲಕಗಳು ಎದುರಾಗುತ್ತವೆ. ಇವೆಲ್ಲವೂ ಬಂದು ಸೇರುವುದು ಸಜ್ಜನ್‌ರಾವ್‌ ವೃತ್ತದ ರಸ್ತೆಗೆ. ಈ ಮಧ್ಯೆ ರಸ್ತೆಗಿಳಿದು ವಾಹನ ಸವಾರರನ್ನು ಆಮಂತ್ರಿಸುವ ವ್ಯಾಪಾರಿಗಳ ಕಿರಿಕಿರಿ ಬೇರೆ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಖುದ್ದು ಮುಖ್ಯಮಂತ್ರಿಗಳು ಈ ಮಾರ್ಗದಲ್ಲೇ ಹಾದುಹೋಗುತ್ತಾರೆ. ಒಮ್ಮೆ ರಸ್ತೆ ಬದಿ ಕಣ್ಣು ಹಾಯಿಸಿದರೆ, ಚಿತ್ರಣ ಬದಲಾಗಬಹುದು. ಆದರೆ, ಈ ಪ್ರಯತ್ನ ಇದುವರೆಗೆ ಆಗಿಲ್ಲ.

ಫ‌ುಟ್ಪಾತ್‌ ಮಾಯ: ಸಜ್ಜನ ರಾವ್‌ ಸರ್ಕಲ್ ರಸ್ತೆಯ ಕಾಮಗಾರಿಯನ್ನು ಕಳೆದ ವರ್ಷ ಪ್ರಾರಂಭಿಸಲಾಗಿತ್ತು. ಈ ಹಿಂದೆ ರಸ್ತೆಗಳಲ್ಲಿ ಹಲವು ಹಂತದ ಕಾಮಾಗಾರಿಗಳು ನಡೆದಿದ್ದವು. ವೈಟ್ ಟಾಪಿಂಗ್‌ ಮುಗಿದ ಮೇಲಾದರೂ ಪರಿಹಾರ ಸಿಗಲಿದೆ ಎಂದು ಜನ ನಿರೀಕ್ಷೆಯಲ್ಲಿದ್ದರು. ಆದರೆ, ಈ ಕಾಮಗಾರಿ ಪ್ರಾರಂಭವಾದ ನಂತರ, ಅಲ್ಲಿದ್ದ ಪಾದಚಾರಿ ಮಾರ್ಗವೂ ಮಾಯವಾಗಿದೆ.

ಅಂದಹಾಗೆ ಬಸಪ್ಪ ಸರ್ಕಲ್ನಿಂದ ಬನಶಂಕರಿ ಬಸ್‌ ನಿಲ್ದಾಣದವರೆಗೆ 4.55 ಕಿ.ಮೀ. ರಸ್ತೆಯ ಎರಡನೇ ಹಂತದ ವೈಟ್ ಟಾಪಿಂಗ್‌ನಲ್ಲಿ ಸಜ್ಜನ ರಾವ್‌ ವೃತ್ತದ ರಸ್ತೆ ಸಹ ಸೇರಿದೆ. ವೈಟ್ ಟಾಪಿಂಗ್‌ ಕಾಮಗಾರಿಗೆ ಒಂದು ಕಿ.ಮೀ.ಗೆ 7ರಿಂದ 8 ಕೋಟಿ ರೂ. ವೆಚ್ಚವಾಗುತ್ತದೆ. ಈ ರಸ್ತೆಗಳ ಎರಡೂ ಬದಿಯಲ್ಲಿ 1.2 ಅಥವಾ 1.5 ಮೀಟರ್‌ ಪಾದಚಾರಿ ಮಾರ್ಗವನ್ನು ಆಯಾ ರಸ್ತೆಗಳ ವಿಸ್ರ್ತೀಣಕ್ಕೆ ಅನುಗುಣವಾಗಿ ಬಿಡಲಾಗುತ್ತದೆ. ಸಜ್ಜನ ರಾವ್‌ ಸರ್ಕಲ್ನಲ್ಲಿ ಇದು ತದ್ವಿರುದ್ಧ. ಇಲ್ಲಿ ಪಾದಚಾರಿಗಳು ವಾಹನ ಸವಾರರೊಂದಿಗೆ ಪೈಪೋಟಿಗಿಳಿಯುತ್ತಾರೆ.

Advertisement

ಕಳೆದ ಒಂದು ವರ್ಷದಿಂದ ವೈಟ್ ಟಾಪಿಂಗ್‌ ಮತ್ತು ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿಗಳಿಗೆ ರಸ್ತೆಯನ್ನು ಅಗೆಯುವ, ಮುಚ್ಚುವ ಪ್ರಹಸನಗಳ ನಡುವೆ ಸಾರ್ವಜನಿಕರು ಹೈರಾಣಾಗುತ್ತಿ ದ್ದಾರೆ. ಪುರಭವನ, ಕೆ.ಆರ್‌.ಮಾರುಕಟ್ಟೆ, ಮೆಜೆಸ್ಟಿಕ್‌ ಮತ್ತು ಎಂ.ಜಿ. ರಸ್ತೆಗಳಿಗೆ ಹೋಗುವವರು ಬಹುತೇಕ ಇದೇ ಮಾರ್ಗವನ್ನು ಬಳಸುತ್ತಾರೆ. ಹೀಗಾಗಿ, ಕಾಮಗಾರಿ ಪ್ರಗತಿ ಮಂದಗತಿಯಲ್ಲಿ ಸಾಗುವುದರಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ವಾಹನ ಸರ್ವಿಸ್‌ ಸೆಂಟರ್‌ಗಳ ಕಾಟ:

ಸಜ್ಜನ ರಾವ್‌ ವೃತ್ತದಿಂದ ಬಸಪ್ಪ ವೃತ್ತದವರೆಗೆ ಮತ್ತು ವಾಸವಿ ದೇವಿ ದೇವಸ್ಥಾನ ಸೇರಿದಂತೆ ಸುತ್ತಲಿನ ರಸ್ತೆಗಳಲ್ಲಿ ಹಲವು ಸರ್ವಿಸ್‌ (ವಾಹನಗಳ) ಸೆಂಟರ್‌ಗಳಿವೆ. ಇಲ್ಲಿ ಕೆಲಸ ಮಾಡುವವರು ವಾಹನ ಸವಾರರನ್ನು ಅಡ್ದಗಟ್ಟಿ ‘ವಾಹನ ಸರ್ವೀಸ್‌ ಮಾಡಿಸಿಕೊಳ್ಳಿ’ ಎಂದು ದುಂಬಾಲು ಬೀಳುವುದು ಸಾಮಾನ್ಯವಾಗಿದೆ. ಹೀಗೆ ಸರ್ವಿಸ್‌ಗೆ ಪಡೆಯುವ ವಾಹನಗಳನ್ನು ಅದೇ ವೈಟ್ ಟಾಪಿಂಗ್‌ ರಸ್ತೆಗಳ ಮೇಲೆ ನಿಲ್ಲಿಸಲಾಗುತ್ತದೆ. ಇದು ಮತ್ತಷ್ಟು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಈ ರೀತಿ ನಿಯಮಬಾಹಿರವಾಗಿ ರಸ್ತೆಗಳಲ್ಲಿ ವಾಹನ ನಿಲ್ಲಿಸಿ, ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದರೂ ಪಾಲಿಕೆಯಾಗಲಿ, ಪೊಲೀಸರಾಗಲಿ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರಸ್ತೆ ವಿಶಾಲವಾಗಿದ್ದರೂ, ವಾಹನಗಳನ್ನು ನಿಲ್ಲಿಸಿರುವುದರಿಂದ ಈ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವವರು ಸರ್ಕಸ್‌ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಅಪಘಾತ ವಲಯವಾದ ರಸ್ತೆಗಳು:

ಈ ರಸ್ತೆಗಳಲ್ಲಿ ಒಂದಿಲ್ಲೊಂದು ಕಾಮಗಾರಿಗಳು ನಡೆಯುತ್ತಲೇ ಇರುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮೂರು ವರ್ಷಗಳಲ್ಲಿ ವಿ.ವಿ.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 15 ಮಂದಿ ಮೃತಪಟ್ಟಿದ್ದು, 115 ಜನ ಗಾಯಗೊಂಡಿದ್ದಾರೆ. ಅಸರ್ಮಪಕ ಕಾಮಗಾರಿ, ಕಿರಿದಾದ ರಸ್ತೆಗಳು ಅಪಘಾತಗಳಿಗೆ ಎಡೆಮಾಡಿಕೊಡುತ್ತಿವೆ. ವಿ.ವಿ.ಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿರುವ ಅಪಘಾತಗಳ ವಿವರ ಹೀಗಿದೆ.
ಇಲ್ಲಿ ಇನ್ನೂ ಕಾಮಗಾರಿ ಮುಗಿದಿಲ್ಲ:

ಜಯ ಚಾಮರಾಜೇಂದ್ರ ರಸ್ತೆ (ಜೆ.ಸಿ.ರಸ್ತೆ), ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆಗ ಳಲ್ಲಿ ವಿವಿಧ ಇಲಾಖೆಯ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿ ಕೈಗೆತ್ತಿಕೊಳ್ಳಲು ಇರಬೇಕಾದ ಮುಂಜಾಗ್ರತೆ ಕ್ರಮಗಳನ್ನು ಇಲಾಖೆಗಳು ತೆಗೆದುಕೊಂಡಿಲ್ಲ. ಕಾಮಗಾರಿ ವಿಳಂಬವಾಗುತ್ತಿರುವುದರ ಹಿಂದೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಕೊರತೆ ಇರುವುದು ಸ್ಪಷ್ಟವಾಗಿದೆ. ಜಲಮಂಡಳಿ ಮತ್ತು ಬಿಬಿಎಂಪಿ ಇಲಾಖೆಯ ಅಧಿಕಾರಿಗಳು ಒಂದೆಡೆ ಕುಳಿತು ಚರ್ಚಿಸಿದ್ದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು.
  • ಹಿತೇಶ್ ವೈ
Advertisement

Udayavani is now on Telegram. Click here to join our channel and stay updated with the latest news.

Next