ಶ್ರೀನಗರ: ಕಾಶ್ಮೀರದ ಗುರೇಜ್ ವಲಯದಲ್ಲಿ ಸಂಭವಿಸಿದ ಎರಡು ಭಾರಿ ಹಿಮಪಾತಗಳಿಂದ ಮೃತ ಯೋಧರ ಸಂಖ್ಯೆ 11ಕ್ಕೇರಿದೆ. ಗುರುವಾರ ಬೆಳಿಗ್ಗೆಯಿಂದ ನಾಲ್ಕು ಶವಗಳು ಸೇರಿದಂತೆ ಈವರೆಗೆ 11 ಕಳೇಬರಗಳನ್ನು ಹಿಮದಡಿಯಿಂದ ಹೊರತೆಗೆಯಲಾಗಿದೆ. ಇನ್ನೂ ನಾಲ್ವರು ಯೋಧರು ಕಾಣೆಯಾಗಿದ್ದಾರೆಂದು ಅಂದಾಜಿಸಲಾಗಿದ್ದು, ಎಲ್ಲೆಡೆ ತೀವ್ರ ಹಿಮ ಬೀಳುತ್ತಿರುವ ಕಾರಣ ಕಾಣೆಯಾದವರ ಸರಿಯಾದ ಸಂಖ್ಯೆ ಹೇಳಲು ಸಾಧ್ಯವಿಲ್ಲ ಎಂದು ಸೇನೆಯ ಮೂಲಗಳು ತಿಳಿಸಿವೆ.
ಗಡಿ ನಿಯಂತ್ರಣ ರೇಖೆ ಬಳಿಯ ಬಂಡಿಪೊರ ಜಿಲ್ಲೆಯ ಗುರೇಜ್ ವಲಯದಲ್ಲಿರುವ ಸೈನಿಕ ಶಿಬಿರದ ಮೇಲೆ ಬುಧವಾರ ಸಂಜೆ ಭಾರಿ ಹಿಮಪಾತ ಸಂಭವಿಸಿತ್ತು. ಶಿಬಿರದಲ್ಲಿದ್ದ ಹಲವು ಸೈನಿಕರು ಹಿಮದಡಿ ಸಿಲುಕಿದ್ದರು. ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈವರೆಗೆ ಓರ್ವ ಜೂನಿಯರ್ ಕಮಿಶನ್ ಅಧಿಕಾರಿ ಸೇರಿದಂತೆ ಏಳು ಸೈನಿಕರನ್ನು ರಕ್ಷಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಬೀಳುತ್ತಿರುವ ಹಿಮ ಮಳೆ ಹಾಗೂ ಪ್ರತಿಕೂಲ ವಾತಾವರಣವು ರಕ್ಷಣಾ ಕಾರ್ಯಾಚರಣೆಯ ವೇಗಕ್ಕೆ ತಡೆಯೊಡ್ಡಿದೆ.
ಗಂಡೇರ್ಬಲ್ ಜಿಲ್ಲೆಯ ಸೋನಾಮಾರ್ಗ್ ನಲ್ಲಿನ ಶಿಬಿರದ ಮೇಲೆ ಬುಧವಾರ ಸಂಜೆ ಸಂಭವಿಸಿದ ಹಿಮಪಾತದಲ್ಲಿ ಓರ್ವ ಮೇಜರ್ ಸೇರಿದಂತೆ ಮೂವರು ಸೈನಿಕರು ಮೃತಪಟ್ಟಿದ್ದರು. ಬಂಡಿಪೊರ ಜಿಲ್ಲೆಯಲ್ಲಿ ಒಂದೇ ಕುಟುಂಬದ ಎಲ್ಲಾ ನಾಲ್ವರು ಹಿಮದಡಿ ಸಿಲುಕಿ ಮತಪಟ್ಟಿದ್ದರು.
ವಾಹನ ಕಾಣೆ: ಈ ಮಧ್ಯೆ ಬುಧವಾರ ರಾತ್ರಿ ಗುರೇಜ್ ವಲಯದ ಶಿಬಿರದತ್ತ ತೆರಳುತ್ತಿದ್ದ ಸೇನಾ ವಾಹನವೊಂದು ಕಾಣೆಯಾಗಿದೆ. ಎರಡು ದಿನಗಳಿಂದ ಈ ಪ್ರದೇಶದಲ್ಲಿ ಪದೇ ಪದೆ ಹಿಮಪಾತ ಸಂಭವಿಸುತ್ತಿದೆ.
ಕಾಶ್ಮೀರದ ಹಿಮಾಚ್ಛಾದಿತ ಕಣಿವೆ ಭಾಗದಲ್ಲಿ ಅತ್ಯಂತ ಅಪಾಯಕರ ಹಿಮಪಾತ ಸಂಭವನೀಯತೆ ಇದೆ ಎಂದು ಸರಕಾರ ಈಗಾಗಲೇ ಎಚ್ಚರಿಕೆ ನೀಡಿದೆ. ಕಣಿವೆ ರಾಜ್ಯದಲ್ಲಿ ನಿರಂತರ ಮೂರು ದಿನಗಳಿಂದ ಹಿಮ ಮಳೆಯಾಗುತ್ತಲೇ ಇದ್ದು, ಅಪಾಯಕಾರಿ ಮಟ್ಟ ಹೆಚ್ಚುತ್ತಿದೆ.