Advertisement

ಪಾಕ್‌ಗೆ ನಿರಂತರ ಶಾಕ್‌

12:30 AM Feb 19, 2019 | Team Udayavani |

ಪುಲ್ವಾಮಾ ದಾಳಿ ಬಳಿಕ ಭಾರತವು ಪಾಕಿಸ್ಥಾನಕ್ಕೆ ಆಘಾತದ ಮೇಲೆ ಆಘಾತ ನೀಡುತ್ತಾ ಬಿಸಿ ಮುಟ್ಟಿಸುತ್ತಿದೆ. ಈ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆಯೆಂಬಂತೆ, ಸೋಮವಾರ ಭಾರತ ಮತ್ತು ಪಾಕ್‌ ನಡುವಿನ ಬಸ್‌ ಸಂಚಾರವನ್ನೂ ರದ್ದು ಮಾಡಲಾಗಿದೆ. ಜಮ್ಮು-ಕಾಶ್ಮೀರದ ಪೂಂಛ…ನಿಂದ ಪಾಕ್‌ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ “ಶಾಂತಿ ಬಸ್‌’ ಸಂಚಾರವನ್ನು ರದ್ದು ಮಾಡಿರುವುದಾಗಿ ಪೂಂಛ… ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಹುಲ್‌ ಯಾದವ್‌ ಸೋಮವಾರ ಘೋಷಿಸಿದ್ದಾರೆ.

Advertisement

ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಗತಿಯನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಜಮ್ಮು-ಕಾಶ್ಮೀರ ಹಾಗೂ ಪಿಒಕೆ ನಡುವಿನ ಪ್ರಯಾಣ ಮತ್ತು ವ್ಯಾಪಾರಕ್ಕೆ ತಡೆ ಹೇರುವಂತೆ ಕೇಂದ್ರ ಗೃಹ ಸಚಿವಾಲಯದಿಂದ ಸೂಚನೆ ಬಂದಿತ್ತು ಎಂದು ಮೂಲಗಳು ತಿಳಿಸಿದೆ. ಪುಲ್ವಾಮಾ ದಾಳಿಯ ಬೆನ್ನಲ್ಲೇ ಪಾಕಿಸ್ಥಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಮತ್ತು ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ವಾಪಸ್‌ ಪಡೆದ ಬೆನ್ನಲ್ಲೇ ಸರಕಾರದಿಂದ ಈ ನಿರ್ಧಾರ ಹೊರಬಿದ್ದಿದೆ. ಅಲ್ಲದೆ ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸುವ ಯತ್ನವನ್ನೂ ಭಾರತ ಮುಂದುವರಿಸಿದೆ.

ಪೂಂಛ… ಜಿಲ್ಲೆಯ ಚಕನ್‌-ದಾ-ಬಾಗ್‌ ಮತ್ತು ಪಿಒಕೆ ನಡುವಿನ ಬಸ್‌ ಸಂಚಾರ  ಮಾಜಿ ಸಿಎಂ ಮುಫ್ತಿ ಮೊಹಮ್ಮದ್‌ ಸಯೀದ್‌  ಕನಸಿನ ಕೂಸಾಗಿತ್ತು. ಜಮ್ಮು-ಕಾಶ್ಮೀರ  ಪಿಒಕೆ ನಡುವಿನ ವಿಭಜಿತ ಕುಟುಂಬಗಳ ಸಂಬಂಧ,  ವ್ಯಾಪಾರ ಉಳಿಸಿಕೊಳ್ಳಲು 2006ರ ಜೂ.20ರಂದು ಈ ಬಸ್‌ ಸೇವೆ ಆರಂಭಿಸಲಾಗಿತ್ತು. ಇದನ್ನು ಎರಡೂ ದೇಶಗಳ ನಡುವಿನ ವಿಶ್ವಾಸ ವೃದ್ಧಿಸುವ ಕ್ರಮ ಎಂದೂ ಬಣ್ಣಿಸಲಾಗಿತ್ತು.

ಸ್ವದೇಶಕ್ಕೆ ದೌಡಾಯಿಸಿದ ಹೈಕಮಿಷನರ್‌
ಮಹತ್ವದ ಬೆಳವಣಿಗೆಯಲ್ಲಿ ಹೊಸದಿಲ್ಲಿಯಲ್ಲಿರುವ ತನ್ನ ಹೈಕಮಿಷನರ್‌ ಸೊಹೈಲ್‌ ಮೊಹಮ್ಮದ್‌ರನ್ನು ಪಾಕ್‌ ಸರಕಾರ ಸ್ವದೇಶಕ್ಕೆ ಕರೆಯಿಸಿಕೊಂಡಿದೆ. ಪುಲ್ವಾಮ ಘಟನೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಇಲಾಖೆ ಸೊಹೈಲ್‌ರನ್ನು ಕರೆಯಿಸಿಕೊಂಡು ಪ್ರಬಲ ಆಕ್ಷೇಪ ವ್ಯಕ್ತಪಡಿಸಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಈ ಬಗ್ಗೆ ಪಾಕ್‌ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್‌ ಫೈಸಲ್‌ ಟ್ವೀಟ್‌ ಮಾಡಿದ್ದಾರೆ. 

ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಲು ಮೋದಿ ಸರಕಾರಕ್ಕೆ ಇನ್ನೆಷ್ಟು ದಿನ ಬೇಕು? ಪ್ರತಿದಿನವೂ ಯೋಧರ ಸಾವಿನ ಸುದ್ದಿ ಕೇಳುತ್ತಲೇ ಇದ್ದೇವೆ. ಬಿಜೆಪಿ ನಾಯಕರು ಅವರ ಅಂತ್ಯಸಂಸ್ಕಾರಗಳಿಗೆ ಹೋಗಿ ಬರುತ್ತಲೇ ಇದ್ದಾರೆ. ಪ್ರತೀಕಾರದ ನಿರ್ಧಾರ ಯಾವಾಗ?
 ಅಖೀಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ನಾಯಕ

Advertisement

ಪುಲ್ವಾಮಾ ಘಟನೆಯ ನಂತರವೂ ಯೋಧರ ಆತ್ಮಸ್ಥೈರ್ಯ ಗಟ್ಟಿಯಾಗಿದೆ. ಮುಂಬರುವ ದಿನಗಳಲ್ಲಿ ಉಗ್ರರನ್ನು ನಿಗ್ರಹಿಸುವ ವಿಚಾರದಲ್ಲಿ ಅವರು ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ. 
 ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ಪ್ರಮುಖ ರಾಜಕೀಯ ಪಕ್ಷಗಳೇ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿ, ಕಾಶ್ಮೀರಿಗರನ್ನು ದಾರಿ ತಪ್ಪಿಸುತ್ತಿವೆ. ಮೊದಲು ಎನ್‌ಸಿ ಮತ್ತು ಪಿಡಿಪಿಗೆ ಸೇರಿದ ಅಂಥ ನಾಯಕರ ವಿರುದ್ಧ ತನಿಖೆಯಾಗಬೇಕು.
 ಕವೀಂದರ್‌ ಗುಪ್ತಾ, ಬಿಜೆಪಿ ನಾಯಕ

ಯಾವುದೇ ರಾಜಕೀಯ “ಅಲೆ’ ಈವರೆಗೆ ಕಾಶ್ಮೀರ ವಿವಾದವನ್ನು ಇತ್ಯರ್ಥಪಡಿಸಿಲ್ಲ ಅಥವಾ ನಮ್ಮ ಯೋಧರ ಸಾವನ್ನು ತಡೆದಿಲ್ಲ. ಇದು ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕ್‌ ಮೇಲೆ ದಾಳಿ ನಡೆಸಬೇಕಾದ ಸಮಯವೇ ಹೊರತು, ರಾಜಕೀಯ ಶತ್ರುಗಳ ವಿರುದ್ಧ  ಸರ್ಜಿಕಲ್‌ ದಾಳಿ ನಡೆಸುವ ಸಮಯವಲ್ಲ.
 ಉದ್ಧವ್‌ ಠಾಕ್ರೆ , ಶಿವಸೇನೆ ಮುಖ್ಯಸ್ಥ 

ಪುಲ್ವಾಮಾದಲ್ಲಿ ಮಡಿದ ನಮ್ಮ 41 ಯೋಧರ ಸಾವಿಗೆ ಪ್ರತೀಕಾರವಾಗಿ ಪಾಕಿಸ್ಥಾನದ 82 ಯೋಧರ ಹತ್ಯೆಗೈಯ್ಯ ಬೇಕು. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಅಲ್ಲಿಯ ಮಿಲಿಟರಿಯ ಒಂದು ಉತ್ಪನ್ನವೇ. ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. 
ಕ್ಯಾ. ಅಮರೀಂದರ್‌ ಸಿಂಗ್‌, ಪಂಜಾಬ್‌ ಮುಖ್ಯಮಂತ್ರಿ

ಭಯೋತ್ಪಾದನೆ ವಿರುದ್ಧ ಸಮರ ಸಾರುವ ವಿಚಾರದಲ್ಲಿ ವಿಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವಕ್ಕೆ ಸಮಾನ ಯಾರೂ ಇಲ್ಲ. 
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next