ಬೆಂಗಳೂರು: ರಾಜಧಾನಿ ಬೆಂಗಳೂರು, ಹೊನ್ನಾಳಿ, ರಾಣೆಬೆನ್ನೂರು, ಹೊಸಕೋಟೆ ಸೇರಿ ರಾಜ್ಯದ ವಿವಿಧೆಡೆ ಭಾನುವಾರವೂ ಮಳೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಭಾನುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಯಲಹಂಕದಲ್ಲಿ ರಾಜ್ಯದಲ್ಲಿಯೇ ಅಧಿಕ 4 ಸೆಂ.ಮೀ.ಮಳೆ ಸುರಿಯಿತು. ಇದೇ ವೇಳೆ, ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 44 ಡಿ.ಸೆ.ತಾಪಮಾನ ದಾಖಲಾಯಿತು.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಅರೇಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲು ಬಡಿದು ವಿರೂಪಾಕ್ಷಪ್ಪ (45) ಎಂಬುವರು ಮೃತಪಟ್ಟಿದ್ದಾರೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ತಮ್ಮ ಹಸು, ಕುರಿಗಳನ್ನು ಮೇಯಿಸುತ್ತಿದ್ದಾಗ ಸಿಡಿಲು ಬಡಿಯಿತು. ಇದೇ ವೇಳೆ, ರಾಣಿಬೆನ್ನೂರು ತಾಲೂಕಿನ ಗಂಗಾಪುರದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಚಿದಾನಂದಪ್ಪ ಕೃಷ್ಣಪ್ಪ ಹಳೇಗೌಡ್ರ (48)ಎಂಬುವರು ಮೃತಪಟ್ಟಿದ್ದಾರೆ.
ಈ ಮಧ್ಯೆ, ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಸತೀಶ್ (35) ಎಂಬುವರು ಮೃತಪಟ್ಟಿದ್ದಾರೆ. ಅಬ್ಬರದ ಗಾಳಿ ಸಹಿತ ಸುರಿದ ಮಳೆಗೆ ಕಾಕ್ಸ್ ಟೌನ್‌ನ ರಾಮಚಂದ್ರಪ್ಪ ಗಾರ್ಡನ್‌ನಲ್ಲಿ ತೆಂಗಿನ ಮರದ ರೆಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದಿತ್ತು. ರಾತ್ರಿ 11.30ರ ಸುಮಾರಿಗೆ ಸತೀಶ್, ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಇದೇ ವೇಳೆ, ಗಂಟೆಗೆ 40 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿಯ ಆರ್ಭಟಕ್ಕೆ ನಗರದ ವಿವಿಧೆಡೆ 56 ಬೃಹದಾಕಾರದ ಮರಗಳು ಹಾಗೂ 596 ಕೊಂಬೆಗಳು ನೆಲಕಚ್ಚಿವೆ. ಪರಿಣಾಮ ಹತ್ತಾರು ವಾಹನಗಳು ಜಖಂಗೊಂಡಿದ್ದು, ಕೆಲವರು ಗಾಯಗೊಂಡಿದ್ದಾರೆ. ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಬೃಹತ್ ಮರಗಳು ಉರುಳಿದರಿಂದ ರಾತ್ರಿಯಿಡಿ ವಿದ್ಯುತ್ ಇಲ್ಲದೆ ಜನರು ತೀವ್ರ ತೊಂದರೆ ಅನುಭವಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ವಿಜಯಪುರ ಸುತ್ತಮುತ್ತ ಆಲಿಕಲ್ಲು ಸಹಿತ ಬಿರುಗಾಳಿ ಮಳೆಯಾಗಿದ್ದು, ದ್ರಾಕ್ಷಿ ತೋಟಗಳು ಹಾನಿಗೊಳಗಾಗಿವೆ. ಒಂದೇ ದಿನ ರಾತ್ರಿ ಸುಮಾರು 63 ಮಿ.ಮೀ.ನಷ್ಟು ಮಳೆಯಾಗಿದೆ. ಹೊಸಕೋಟೆ ತಾಲೂಕಿನ ಆಲಿಕಲ್ಲು ಸಹಿತ ಮಳೆಯಾಗಿದ್ದು, ವಿವಿಧೆಡೆ ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ.
ಈ ಮಧ್ಯೆ, ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ, ಕರಾವಳಿಯ ಒಂದೆರಡು ಕಡೆಗಳಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಲಿದ್ದರೆ, ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.