Advertisement

ಕೊಡಗು, ಕರಾವಳಿಯಲ್ಲಿ ಮುಂದುವರಿದ ಮಳೆ

12:29 AM Jul 24, 2019 | Team Udayavani |

ಬೆಂಗಳೂರು: ಕೊಡಗು, ಕರಾವಳಿ, ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಮಂಗಳವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಯಿತು. ಭಟ್ಕಳದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 23 ಸೆಂ.ಮೀ.ಮಳೆ ಸುರಿಯಿತು.

Advertisement

ಕೊಡಗು ಜಿಲ್ಲೆಯಲ್ಲಿ ಐದು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಜು.24ರವರೆಗೆ ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಮುಂದುವರಿಸಲಾಗಿದೆ. ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಉಡುಪಿ ಜಿಲ್ಲೆಯ ಕೆಲವೆಡೆ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಭೀತಿ ಮೂಡಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಬುಧವಾರವೂ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ. ಮೂಡನಿಡಂಬೂರಿನ ನಾಲ್ಕು ಮನೆಯವರು ನೆರೆಯ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಹಲವೆಡೆ ಮರ, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ-ಸಂಪಾಜೆ ನಡುವಿನ ಮದೆನಾಡು ಬಳಿ ಗುಡ್ಡದ ಮಣ್ಣು ರಸ್ತೆಗೆ ಕುಸಿದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದ ಬಾರಿ ಭೂಕುಸಿತಕ್ಕೆ ಸಿಲುಕಿದ್ದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಮಳೆಯ ಜತೆ ಸುಮಾರು 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಕೂಡ ಜೋರಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಗುರುವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಉತ್ತಮ ಮಳೆಯಾಗಲಿದೆ. ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.

Advertisement

ಬಂಡೆಕಲ್ಲು ತೆರವು ಕಾರ್ಯ ಬಹುತೇಕ ಪೂರ್ಣ
ಸುಬ್ರಹ್ಮಣ: ಶಿರಾಡಿ ಘಾಟಿ ರೈಲು ಮಾರ್ಗದಲ್ಲಿ ಸತತ ನಾಲ್ಕು ದಿನಗಳಿಂದ ನಡೆಯುತ್ತಿರುವ ಬಂಡೆಕಲ್ಲು ತೆರವು ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಶೇ.90ರಷ್ಟು ತೆರವು ಕಾಮಗಾರಿ ಪೂರ್ಣಗೊಂಡಿದ್ದು, ಮತ್ತೆ ಭೂಕುಸಿತ ಸಂಭವಿಸದೆ ಇದ್ದಲ್ಲಿ ಬುಧವಾರ ರಾತ್ರಿಯಿಂದ ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದಲ್ಲಿ ರೈಲು ಓಡಾಟ ಪುನರಾರಂಭವಾಗುವ ಸಾಧ್ಯತೆಯಿದೆ.

ಸುಬ್ರಹ್ಮಣ್ಯ ರಸ್ತೆ-ಸಕಲೇಶಪುರ ಮಧ್ಯೆ ಸಿರಿಬಾಗಿಲಿನ ಮಣಿಬಂಡದಲ್ಲಿ ಹಳಿಯ ಮೇಲೆ ಉರುಳಲು ಸಿದ್ಧವಾಗಿದ್ದ ಬಂಡೆಕಲ್ಲನ್ನು ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ಸಂಜೆ ವೇಳೆಗೆ ಅಂತಿಮ ಹಂತಕ್ಕೆ ತಲುಪಿದೆ. ಇಲಾಖೆಯ ತಾಂತ್ರಿಕ ಅಧಿಕಾರಿಗಳು ಹಳಿ ಪರಿಶೀಲನೆ ನಡೆಸಿ ರೈಲು ಸಂಚಾರಕ್ಕೆ ಮಾರ್ಗ ಯೋಗ್ಯವಾಗಿದೆಯೆ ಎಂದು ಖಚಿತ ಪಡಿಸಲಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು ಬುಧವಾರ ಸಂಜೆಯೊಳಗೆ ಮುಗಿಯುವ ಸಾಧ್ಯತೆಯಿದೆ. ಆರಂಭದಲ್ಲಿ ಗೂಡ್ಸ್‌ ರೈಲನ್ನು ಪ್ರಾಯೋಗಿಕವಾಗಿ ಓಡಾಟ ನಡೆಸಿ, ಬಳಿಕ ಪ್ರಯಾಣಿಕ ರೈಲನ್ನು ಬಿಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next