Advertisement

ಕಾಪು ತಾಲೂಕಿನಾದ್ಯಂತ ನಿರಂತರ ಮಳೆ; ಕಡಲ್ಕೊರೆತದ ಭೀತಿ

10:24 PM Jul 19, 2019 | Sriram |

ಕಾಪು: ಕಾಪು ತಾಲೂಕಿನಾದ್ಯಂತ ಆಷಾಢದ ಮಳೆ ಜೋರಾಗಿದ್ದು, ಶುಕ್ರವಾರ ನಿರಂತರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಕಡಲ್ಕೊರೆತದ ಭೀತಿ ಎದುರಾಗಿದೆ.

Advertisement

ತಾಲೂಕಿನಾದ್ಯಂತ ಶುಕ್ರವಾರ ಬೆಳಗ್ಗಿನಿಂದಲೇ ನಿರಂತರ ಮಳೆಯಾಗುತ್ತಿದ್ದು ಈ ಮಳೆಗಾಲದಲ್ಲಿ ಪ್ರಥಮ ಬಾರಿಗೆ ಪೂರ್ಣಾವಧಿಯ ಮಳೆಗಾಲದ ಅನುಭವ ಉಂಟಾಗಿದೆ.

ಸುಗಮ ಸಂಚಾರಕ್ಕೆ ಅಡಚಣೆ
ನಿರಂತರ ಮಳೆಯಿಂದಾಗಿ ಹೆದ್ದಾರಿ ರಸ್ತೆಗಳು, ಲೋಕೋಪಯೋಗಿ ರಸ್ತೆಗಳು, ಗ್ರಾಮೀಣ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತಡೆಯುಂಟಾಗಿದೆ. ಜಡಿ ಮಳೆಯಿಂದಾಗಿ ಹೆದ್ದಾರಿ ಪ್ರಯಾಣಕ್ಕೂ ತೊಂದರೆ ಯುಂಟಾಗಿದ್ದು ಕೆಲವೆಡೆ ವಾಹನ ಸವಾರರು ಮಳೆ ನಿಲ್ಲುವವರೆಗೆ ಹೆದ್ದಾರಿ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ, ಮಳೆಯಿಂದ ರಕ್ಷಣೆ ಪಡೆಯುತ್ತಿರುವುದು ಕಂಡು ಬಂದಿದೆ.

ಕೃಷಿ ಕೆಲಸಕ್ಕೆ ತೊಂದರೆ
ಮಳೆಯ ಅಭಾವದಿಂದಾಗಿ ಒಂದೂವರೆ ತಿಂಗಳು ವಿಳಂಬವಾಗಿ ಕೃಷಿ ಕಾರ್ಯಗಳು ಪ್ರಾರಂಭಗೊಂಡಿದ್ದು,  ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಕೃಷಿ ಕೆಲಸಗಳಿಗೆ ತೊಂದರೆಯುಂಟಾಗಿದೆ. ಬೆಳಗ್ಗೆ ಎಂದಿನಂತೆ ಗದ್ದೆಗೆ ಇಳಿದಿದ್ದ ಕೃಷಿ ಕೂಲಿಯಾಳುಗಳು ನಿರಂತರ ಮಳೆ ಸುರಿದ ಕಾರಣ ಅರ್ಧಕ್ಕೆ ನೇಜಿ ನಾಟಿ ಕಾರ್ಯವನ್ನು ಸ್ಥಗಿತಗೊಳಿಸುವಂತಾಗಿದೆ.

ಕಾಪು ವಾರದ ಸಂತೆಗೂ ತಟ್ಟಿದ ಮಳೆ ಬಿಸಿ
ಆಕಸ್ಮಿಕವಾಗಿ ದಿನಪೂರ್ತಿ ಸುರಿದ ಮಳೆ ಕಾಪುವಿನಲ್ಲಿ ಪ್ರತೀ ಶುಕ್ರವಾರ ನಡೆಯುವ ವಾರದ ಸಂತೆಗೆ ತಡೆಯುಂಟು ಮಾಡಿತು. ಬೆಳಗ್ಗಿನಿಂದಲೇ ನಿರಂತರ ಮಳೆ ಸುರಿದ ಪರಿಣಾಮ ಸಂತೆಗೆ ಬರುವ ಗ್ರಾಹಕರ ಪ್ರಮಾಣ ಕುಂಟಿತಗೊಂಡಿದ್ದು, ಸಂತೆ ವ್ಯಾಪಾರಿಗಳು ತಮ್ಮ ತರಕಾರಿ ಸಾಮಗ್ರಿಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಬೇಕಾಯಿತು.

Advertisement

ಕಡಲ್ಕೊರೆತದ ಭೀತಿ
ಮಳೆ ಹೆಚ್ಚಾಗುತ್ತಿದ್ದಂತೆಯೇ ಕಾಪು ಕರಾವಳಿಯಲ್ಲಿ ಮತ್ತೆ ಕಡಲ್ಕೊರೆತದ ಭೀತಿ ಎದುರಾಗಿದೆ. ಕಾಪು ಪಡುಗ್ರಾಮದ ತೊಟ್ಟಂ, ಕೈಪುಂಜಾಲು, ಪೊಲಿಪು, ಮೂಳೂರು, ಎರ್ಮಾಳಿನಲ್ಲಿ ಕಡಲಬ್ಬರ ಹೆಚ್ಚಾಗಿದ್ದು ಮಳೆ ಮುಂದುವರಿದರೆ ಕಡ್ಕೊರೆತ ಮತ್ತಷ್ಟು ಹೆಚ್ಚಾಗುವ ಭೀತಿಯಿದೆ. ಕಾಪು ತಾಲೂಕಿನ ಕಡಲ್ಕೊರೆತದ ಪ್ರದೇಶಗಳಿಗೆ ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next