ಗಂಗೊಳ್ಳಿ: ಕೋವಿಡ್ 19 ದಿಂದಾಗಿ ದೇಶವೇ ಲಾಕ್‌ಡೌನ್ ಆಗಿದ್ದರೂ, ಗಂಗೊಳ್ಳಿ ಗ್ರಾಮದಲ್ಲಿ ಮಾತ್ರ ಇಲ್ಲಿನ ಕಸ ವಿಲೇವಾರಿ ಘಟಕದಿಂದ ಮಾತ್ರ ನಿರಂತ ರವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.
ಗಂಗೊಳ್ಳಿ ಬಂದರು ಬಳಿಯಲ್ಲಿ ಕಾರ್ಯಾಚರಿಸುತ್ತಿರುವ ಎಸ್.ಎಲ್. ಆರ್.ಎಂ. ಘಟಕದಲ್ಲಿ ಕಾರ್ಯಕರ್ತರು ಲಾಕ್‌ಡೌನ್ ಇದ್ದರೂ, ಪ್ರತಿ ನಿತ್ಯವೂ ಸಾಮಾಜಿಕ ಅಂತರವಿಟ್ಟುಕೊಂಡು ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕಸ ವಿಲೇವಾರಿ ಘಟಕದ ಎಲ್ಲ ಕಾರ್ಯಕರ್ತರು ಕಸ ಸಂಗ್ರಹಣೆ, ವಿಲೇವಾರಿ, ವಿಂಗಡಣೆಯ ಕಾರ್ಯ ಮಾಡುತ್ತಿದ್ದಾರೆ.
ಕೋವಿಡ್ 19 ಸುರಕ್ಷತಾ ವಿಧಾನಗಳನ್ನು ಅನುಸರಿಸಿಕೊಂಡು, ಸ್ಯಾನಿಟೈಸರ್ ಬಳಕೆ, ಮುಖಕ್ಕೆ ಮಾಸ್ಕ್, ಕೈಗವಸುಗಳನ್ನು ಧರಿಸಿ ಕೆಲಸ ಮಾಡುತ್ತಿದ್ದಾರೆ. ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 13 ವಾರ್ಡ್‌ಗಳಿದ್ದು, ಪ್ರಸ್ತುತ ಎಲ್ಲ ವಾರ್ಡ್‌ಗಳಿಂದ ಕಸ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಗಂಗೊಳ್ಳಿ ಪೇಟೆ, ಮೇಲ್‌ಗಂಗೊಳ್ಳಿಯಿಂದ ಬಂದರುವರೆಗಿನ ಮುಖ್ಯ ರಸ್ತೆ ಹಾಗೂ ಮತ್ತೆರಡು ವಾರ್ಡ್ ಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಒಬ್ಬರು ಸೂಪರ್‌ವೈಸರ್ ಸೇರಿದಂತೆ ಒಟ್ಟು 5 ಮಂದಿ ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡಾ ಗ್ರಾಮದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಇಲ್ಲಿನ ಕಸ ವಿಲೇವಾರಿ ಘಟಕದ ಸಿಬಂದಿ ಅವಿರತವಾಗಿ ಶ್ರಮಿಸುತ್ತಿದ್ದು, ಇವರ ಈ ಜವಾಬ್ದಾರಿಯುತ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸ್ವಚ್ಛತೆಗೆ ಗರಿಷ್ಠ ಪ್ರಯತ್ನ
ಸದ್ಯ ಎಲ್ಲ ಮನೆಗಳಿಂದ ಕಸ ಸಂಗ್ರಹಿಸುವುದು ಕಷ್ಟ. ಆದರೂ ಇರುವಂತಹ ಸೀಮಿತ ಸಿಬಂದಿಯಿಂದ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಸದ್ಯ ಪೇಟೆ ಹಾಗೂ ಎರಡು ವಾರ್ಡ್‌ಗಳಿಂದ ಕಸ ಸಂಗ್ರಹಿಸಿ, ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿದೆ.
-ದಿನೇಶ್ ಶೇರುಗಾರ್,ಕಾರ್ಯದರ್ಶಿ,ಗಂಗೊಳ್ಳಿ ಗ್ರಾ.ಪಂ.