ವಿಜಯಪುರ: ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸೇರಿದಂತೆ ಪ್ರಮುಖ ಹುದ್ದೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಬಲೇಶ್ವರ ಪಟ್ಟಣದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನವೂ ಮುಂದುವರಿದಿದೆ. ರವಿವಾರ ನಿಜಶರಣ ಅಂಬಿಗರ ಚೌಡಯ್ಯ (ತಳವಾರ) ಸಮಾಜ ಜನರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಎಂ.ಬಿ. ಪಾಟೀಲ ಅವರು ಕೇವಲ ವ್ಯಕ್ತಿಯಲ್ಲ ಅವರೊಂದು ಶಕ್ತಿ. ವಿಜಯಪುರ ಜಿಲ್ಲೆಯನ್ನು ಬರಮುಕ್ತ ಜಿಲ್ಲೆಯನ್ನಾಗಿ ಪರಿವರ್ತಿಸಲು ಸುಮಾರು 14 ಲಕ್ಷ ಹೆಕ್ಟರ್ ಭೂಮಿಗೆ ವಿವಿಧ ನೀರಾವರಿ ಯೋಜನೆ ಸೌಲಭ್ಯ ಕಲ್ಪಿಸಿದ್ದಾರೆ. ಇದರೊಂದಿಗೆ ಬರಡು ಭೂಮಿಗೆ ನೀರು ಹರಿಸಿದ ಕರುನಾಡ ಭಗೀರಥನಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ನಮ್ಮ ವಿಜಯಪುರ ಜಿಲ್ಲೆಯು ಹಿಂದುಳಿದ ಜಿಲ್ಲೆಯಾಗಿದ್ದು, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ನಮ್ಮ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಎಂ.ಬಿ. ಪಾಟೀಲ ಅವರಿಗೆ ಡಿಸಿಎಂ ಸ್ಥಾನ ಸಹಿತ ಜಲ ಸಂಪನ್ಮೂಲ ಖಾತೆ ನೀಡಬೇಕು. ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಅನ್ಯಾಯ ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾವನ್ನು ರಾಜ್ಯಾದ್ಯಂತ ವಿಸ್ತರಿಸಬೇಕಾದೀತು ಎಂದು ಎಚ್ಚರಿಸಿದರು.
ಬಬಲೇಶ್ವರ ಗ್ರಾಮದ ಅಂಬಿಗರ ಸಮಾಜದ ಅಧ್ಯಕ್ಷ ಚಂದ್ರಕಾಂತ ತಟಗಾರ ಮಾತನಾಡಿ, ಎಂ.ಬಿ. ಪಾಟೀಲ ಜಾತ್ಯತೀತ ನಾಯಕರು, ರಾಜ್ಯದ ಪ್ರಭಾವಿ ಲಿಂಗಾಯತ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಸಮರ್ಥ ಕಾರ್ಯ ನಿಭಾಯಿಸಿದ್ದು, ಬಹುತೇಕ ನೀರಾವರಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಲೋಕಾರ್ಪಣೆ ಮಾಡಿದ್ದಾರೆ.
ಇದರೊಂದಿಗೆ ನೀರಾವರಿ ಇಲಾಖೆಯ ಪ್ರಗತಿ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದ್ದು, ಇತರೆ ರಾಜ್ಯಗಳು ಕರ್ನಾಟಕದತ್ತ ನೋಡುವಂತೆ ಮಾಡಿದ್ದಾರೆ. ಇಂಥ ದಕ್ಷ ನಾಯಕನಿಗೆ ಅನ್ಯಾಯ ಮಾಡದೇ ಅರ್ಹ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗಂಡಾಂತರ ಕಾದಿದೆ ಎಂದು ಎಚ್ಚರಿಸಿದರು.
ಮುತ್ತಪ್ಪ ತಳವಾರ, ತುಕಾರಾಮ ತಳವಾರ, ಹನುಮಂತ ತಳವಾರ, ನಾಗಪ್ಪ ತಳವಾರ, ಶಿವಾನಂದ ತಳವಾರ, ಶರಣಪ್ಪ ಜಿಮ್ಮನಗೋಳ, ಬಸಪ್ಪ ತಳವಾರ, ರಾಮಪ್ಪ ತಳವಾರ, ಬಿ.ಜಿ.ಬಿರಾದಾರ, ಬಬಲೇಶ್ವರ, ಪರಶುರಾಮ ಪಡಗಾರ, ಸುರೇಶಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಡಾ| ಪ್ರಕಾಶಗೌಡ ಬಿರಾದಾರ, ಹನುಮಂತಗೌಡ
ಬಿರಾದಾರ, ಗುರಪ್ಪ ಕೋಲಾರ, ಶರಣಗೌಡ ಬಿರಾದಾರ, ಜಗದೀಶ ಕನ್ನೂರ, ಯಲ್ಲಪ್ಪಗೌಡ ಬಿರಾದಾರ, ಸಂಗಮೇಶ ಕೋಲಕಾರ ಇದ್ದರು.