Advertisement

ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಮುಂದುವರಿದ ಅನಿರ್ದಿಷ್ಟ ಧರಣಿ

02:57 PM Dec 22, 2018 | |

ಮುದ್ದೇಬಿಹಾಳ: ಪಟ್ಟಣದಲ್ಲಿ ನಡೆಯುತ್ತಿರುವ ಹುನಗುಂದ-ಮ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿ ಅಗಲೀಕರಣ ಬೇಡಿಕೆ ಮುಂದಿಟ್ಟು ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರ 20 ದಿನ ಪೂರೈಸಿದೆ.

Advertisement

ಈ ಮಧ್ಯೆ ಶುಕ್ರವಾರ ಕಾಮಗಾರಿ ನಿರ್ವಹಿಸುತ್ತಿರುವ ಅಶೋಕಾ ಬಿಲ್ಡಕಾನ್‌ನ ಸಿಬ್ಬಂದಿ, ಕೆಲಸಗಾರರು ಮತ್ತು ಅಂಜುಮನ್‌ ಕಾಂಪ್ಲೆಕ್ಸ್‌ ಬಳಿ ಇರುವ ಕೆಲ ಅಂಗಡಿಕಾರರ ಮಧ್ಯೆ ರಸ್ತೆ ಅಗಲದ ಅಳತೆಗೆ ಸಂಬಂಧಿಸಿದಂತೆ ವಾಗ್ವಾದ ನಡೆದು ಆ ಭಾಗದಲ್ಲಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ನಡೆಯಿತು.

ಹೋರಾಟಗಾರರ ಬೇಡಿಕೆಯಂತೆ ಈಗಾಗಲೇ ಒಂದು ಬದಿ ರಸ್ತೆಯನ್ನು ಅಗಲೀಕರಣಗೊಳಿಸುವ ಕಾರ್ಯ ನಡೆದಿದೆ. ಇದಕ್ಕಾಗಿ ರಸ್ತೆ ಕೊನೆ ಭಾಗದಲ್ಲಿ ಪುರಸಭೆ ನಿರ್ಮಿಸಿದ್ದ ಚರಂಡಿ ಸ್ಥಳದಲ್ಲೇ ಹೊಸದಾಗಿ ಚರಂಡಿ ನಿರ್ಮಿಸುವ ಕಾರ್ಯವೂ ಪ್ರಗತಿಯಲ್ಲಿದೆ. ರಸ್ತೆಯ ಇನ್ನೊಂದು ಬದಿ ಅಂಜುಮನ್‌ ಕಾಂಪ್ಲೆಕ್ಸ್‌ ಹತ್ತಿರ ಶುಕ್ರವಾರ ರಸ್ತೆ ಅಗಲೀಕರಣ ಕಾಮಗಾರಿಗೋಸ್ಕರ ಚರಂಡಿ ನಿರ್ಮಿಸಲು ಕೆಲಸಗಾರರು ಮುಂದಾದಾಗ ಕೆಲವು ಅಂಗಡಿಕಾರರು ತಕರಾರು ತೆಗೆದು ರಸ್ತೆಯ ವಿಬಿಸಿ ಪ್ರೌಢಶಾಲೆ ಎದುರಿನ ಭಾಗದಲ್ಲಿ ಕಡಿಮೆ ಅಗಲ, ಅಂಜುಮನ್‌ ಕಾಂಪ್ಲೆಕ್ಸ್‌ ಭಾಗದಲ್ಲಿ ಹೆಚ್ಚು ಅಗಲ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು.

ಕೆಲಸಗಾರರು ರಸ್ತೆ ಅಳತೆ ಮಾಡಿದಾಗ ಎರಡೂ ಕಡೆ ರಸ್ತೆಯ ಅಳತೆ ಒಂದೇ ಆಗಿತ್ತು. ಆದರೂ ತಕರಾರು ಮುಂದುವರಿಸಿದ
ಕೆಲವರು ಮೂಲ ಯೋಜನೆಯಲ್ಲಿ ಎಷ್ಟು ಅಗಲದ ರಸ್ತೆ ಇದೆಯೋ ಅಷ್ಟೇ ರಸ್ತೆ ಮಾಡಿ, ಹೆಚ್ಚಿಗೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಬೇಸತ್ತ ಕೆಲಸಗಾರರು ಕಾಮಗಾರಿ ಸ್ಥಗಿತಗೊಳಿಸಿ ಸ್ಥಳದಿಂದ ನಿರ್ಗಮಿಸಿದರು. ಹೀಗಾಗಿ ರಸ್ತೆ ಅಗಲೀಕರಣ ಕಾಮಗಾರಿ ನನೆಗುದಿಗೆ ಬೀಳುವ ಸಂಶಯ ತಲೆದೋರಿದಂತಾಗಿದೆ.

20ನೇ ದಿನದಲ್ಲಿ ಧರಣಿ: ಏತನ್ಮಧ್ಯೆ ಧರಣಿಗೆ ಸಂಘಟನೆಗಳ ಬೆಂಬಲ ಹೆಚ್ಚತೊಡಗಿದೆ. ಬುಧವಾರ ಹಡಪದ ಅಪ್ಪಣ್ಣ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದೂ ಅಲ್ಲದೆ ಹೆದ್ದಾರಿ ಅಗಲೀಕರಣ ಬೇಡಿಕೆ ಈಡೇರಿಕೆ ವಿಳಂಬಗೊಂಡಲ್ಲಿ ಉಗ್ರ ಹೋರಾಟ ನಡೆಸಲೂ ತಾವು ಹಿಂದೇಟು ಹಾಕುವುದಿಲ್ಲ ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.

Advertisement

ಸಂಘದ ಅಧ್ಯಕ್ಷ ಬಸವರಾಜ ಅಬ್ಬಿಹಾಳ ಬೆಂಬಲ ಸೂಚಿಸಿ ಮಾತನಾಡಿದರು. ಭೀಮರಾಯ ಬಳವಾಟ, ಶಂಕ್ರುಹಡಪದ, ಶಿವಕುಮಾರ ಬಿದರಕುಂದಿ, ಶಾಂತು ತಾರನಾಳ, ಶಿವು ಹಡಪದ, ಬಸವರಾಜ ಹಡಪದ, ಸಂಗಮೇಶ ಹಡಪದ, ಬಸವರಾಜ ಹಡಪದ ಬಂಗಾರಗುಂಡ, ಬಸವರಾಜ ಗಡೇದ ಪಾಲ್ಗೊಂಡಿದ್ದರು. ಗುರುವಾರ ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕಾಧ್ಯಕ್ಷ ರಾಜೂಗೌಡ ತುಂಬಗಿ, ಸಮಾಜಸೇವಕ ಶ್ರೀನಿವಾಸ ಗಡೇದ, ಮೌನೇಶ ಪತ್ತಾರ ಮತ್ತಿತರರು ಪಾಲ್ಗೊಂಡಿದ್ದರು.

ಶುಕ್ರವಾರದ ಧರಣಿಯಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಸಿದ್ದರಾಜ ಹೊಳಿ, ಪರಮೇಶ ಮಾತಿನ ವಕೀಲರು, ಬಸವರಾಜ ನಂದಿಕೇಶ್ವರಮಠ, ಮಹಾಂತಗೌಡ ಬಿರಾದಾರ, ಮೌನೇಶ ಸೋನಾರ, ಅಯ್ಯೂಬ್‌ ಮೋಮಿನ, ಶ್ರೀನಿವಾಸ ಹಂಡರಗಲ್ಲ, ಹಸನಲಿ ಬಾಗವಾನ, ಜಾವಿದ ಮೋಮಿನ್‌ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next