Advertisement

ಕೇಂದ್ರದ ಚಿಂತನೆಗೆ ಯುವ ಸಂಸ್ಥೆಗಳ ಸಾಥ್‌

12:10 PM Sep 08, 2018 | |

ನರಿಮೊಗರು: ಸ್ವಚ್ಛ ಭಾರತ ಸಮ್ಮರ್‌ ಇಂಟರ್ನ್ಶಿಪ್‌ನ ಸ್ವಚ್ಛ ಕಾರ್ಯದಲ್ಲಿ ಪುತ್ತೂರು, ಸುಳ್ಯ ತಾಲೂಕಿನ ಅನೇಕ ಯುವಕ-ಯುವತಿ ಮಂಡಲಗಳು ಮೂರು ತಿಂಗಳಿನಿಂದ ನಿರಂತರವಾಗಿ ತೊಡಗಿಕೊಂಡಿದೆ. ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಇದರ ಮೂಲಕ ಸ್ವಚ್ಛ ಭಾರತ್‌ ಸಮ್ಮರ್‌ ಇಂಟರ್ನ್ಶಿಪ್‌ ಕಾರ್ಯಕ್ರಮದಡಿಯಲ್ಲಿ ನೋಂದಾವಣೆಗೊಂಡ ಯುವಕ-ಯುವತಿ ಹಾಗೂ ಮಹಿಳಾ ಮಂಡಲಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ತಮ್ಮೂರಿನ ಪರಿಸರ ಸಚ್ಛಗೊಳಿಸುವಲ್ಲಿ ಅವಿರತವಾಗಿ ದುಡಿದಿವೆ.

Advertisement

ಯುವಕ ಯುವತಿ ಮಂಡಲಗಳು ತಮ್ಮ ಪರಿಸರ, ಬಸ್‌ ನಿಲ್ದಾಣ, ಜಂಕ್ಷನ್‌, ಶ್ರದ್ಧಾಕೇಂದ್ರ, ಶಾಲಾ ಪರಿಸರ ಹೀಗೆ ಎಲ್ಲೆಡೆ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಂಡಿತ್ತು. ಸ್ವಚ್ಛತೆ ಕುರಿತಾದ ಮಾಹಿತಿ, ಜಾಗೃತಿ, ವಾಹನ ಜಾಥಾ, ಸ್ವಚ್ಛತಾ ಮೇಳ, ಬೀದಿ ನಾಟಕ, ಗೋಡೆ ಬರಹ, ಮನೆಮನೆಗೆ ತೆರಳಿ ಅರಿವು ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಸಾಧಿಸಿದೆ.

ಸ್ವಂತ ಖರ್ಚಲ್ಲೇ ಕೆಲಸ
ಪುತ್ತೂರು ಸುಳ್ಯ ಭಾಗದಲ್ಲಿ ಯುವಕ ಯುವತಿ ಮಂಡಲಗಳು ಮಾಡಿದ ಸ್ವಚ್ಛತಾ ಕಾರ್ಯ, ಶೌಚಾಲಯ ನಿರ್ಮಾಣಕ್ಕಾಗಿ ಒಂದು ವೇಳೆ ಸರಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಲ್ಲಿ ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ, ಯುವಕ ಮಂಡಲಗಳು ತಮ್ಮ ಸ್ವಂತ ಖರ್ಚಿನಿಂದಲೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ತೊಡಗಿಸಿಕೊಂಡಿರುವುದು ಮಾದರಿ ಕಾರ್ಯವಾಗಿದೆ.

ಸಹಯೋಗ
ತಾಲೂಕಿನ ಯುವಕ-ಯುವತಿ ಮಂಡಲಗಳ ನೋಂದಾವಣೆ ಮಾಡುವ ಜವಾಬ್ದಾರಿಯನ್ನು ತಾ| ಯುವಜನ ಒಕ್ಕೂಟ ವಹಿಸಿಕೊಂಡಿದೆ. ಯುವಕ-ಯುವತಿ ಮಂಡಲಗಳಿಗೆ ಸೂಕ್ತ ಮಾರ್ಗದರ್ಶನ, ಸಲಹೆ, ಪ್ರೋತ್ಸಾಹ ನೀಡುವುದು ಮಾತ್ರವಲ್ಲದೇ ಅತ್ಯುತ್ತಮ ಸಂಘಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.

ತಂಡಗಳು
ಪುತ್ತೂರು ತಾಲೂಕಿನ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ, ತುಡರ್‌ ಯುವಕ ಮಂಡಲ ಕಾವು, ವಿಶ್ವಜ್ಞ ಯುವಕ ಮಂಡಲ ಕಾಣಿಯೂರು, ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲ ಕಾಣಿಯೂರು, ಚಿಗುರು ಯುವಶಕ್ತಿ ಸೊರಕೆ-ಸರ್ವೆ, ಯುವ ಪ್ರೇರಣ ಕ್ರೀಡಾ ಮತ್ತು ಸೇವಾ ಸಂಘ ಪುತ್ತೂರು, ನೇತಾಜಿ ಯುವಕ ಮಂಡಲ ಕೂಡುರಸ್ತೆ, ಸವಣೂರು ಯುವಕ ಮಂಡಲ-ಸವಣೂರು, ಫ್ರೆಂಡ್ಸ್‌ ಕ್ಲಬ್‌ ಮುಕ್ವೆ-ನರಿಮೊಗರು, ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು-ಪುರುಷರಕಟ್ಟೆ, ನವೋದಯ ಮಹಿಳಾ ಮಂಡಲ ಬನ್ನೂರು, ಅರ್ಪಿತಾ ಯುವತಿ ಮಂಡಲ ಕುಮಾರಮಂಗಲ, ಕಣ್ವರ್ಷಿ ಯುವತಿ ಮಂಡಲ ಕಾಣಿಯೂರು ತಂಡಗಳು ಭಾಗಿಯಾಗಿವೆ. ಇನ್ನು ಸುಳ್ಯ ತಾಲೂಕಿನ ಗರುಡಾ ಯುವಕ ಮಂಡಲ ಚೊಕ್ಕಾಡಿ, ಕನಕಮಜಲು ಯುವಕ ಮಂಡಲ, ಮಿತ್ರಾ ಬಳಗ ಕಾಯರ್ತೋಡಿ, ಫ್ರೆಂಡ್ಸ್‌ ಕ್ಲಬ್‌ ಪೈಲಾರು ಈ ಸ್ವತ್ಛತ ಅಭಿಯಾನಕ್ಕೆ ಕೈಜೋಡಿಸಿದೆ.

Advertisement

ಬಹುಮಾನ
ಸ್ವಚ್ಛತಾ ಕಾರ್ಯದಲ್ಲಿ ಮುಂಚೂಣಿಯಾಗಿ ಗುರುತಿಸಿಕೊಂಡ ಯುವಕ-ಯುವತಿ ಮಂಡಲಗಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಿ ಕ್ರಮವಾಗಿ 30 ಸಾವಿರ ರೂ., 20 ಸಾವಿರ ರೂ., 10 ಸಾವಿರ ರೂ. ನೀಡಿ, ನೆಹರು ಯುವ ಕೇಂದ್ರದ ವತಿಯಿಂದ ಸಮ್ಮಾನಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾದ ತಂಡವು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿದ್ದು, ಅಲ್ಲಿ ಆಯ್ಕೆಯಾದಲ್ಲಿ ಪ್ರಥಮ ಸ್ಥಾನಕ್ಕಾಗಿ 50 ಸಾವಿರ ರೂ., ದ್ವಿತೀಯ ಸ್ಥಾನಕ್ಕಾಗಿ 30 ಸಾವಿರ ರೂ., ತೃತೀಯ ಸ್ಥಾನಕ್ಕಾಗಿ 20 ಸಾವಿರ ರೂ. ಪಡೆಯಲಿವೆ. ರಾಜ್ಯ ಮಟ್ಟದ ತಂಡಗಳು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಲಿದ್ದು, ಅಲ್ಲಿಯೂ ಆಯ್ಕೆಯಾದಲ್ಲಿ ಪ್ರಥಮವಾಗಿ 2 ಲಕ್ಷ ರೂ., ದ್ವಿತೀಯವಾಗಿ 1 ಲಕ್ಷ ರೂ., ತೃತೀಯ ತಂಡಕ್ಕೆ 50 ಸಾವಿರ ರೂಗಳನ್ನು ಬಹುಮಾನವಾಗಿ ಪಡೆಯಯಲಿವೆ. 

ಜಿಲ್ಲೆಯಿಂದ 64 ತಂಡಗಳು ನೋಂದಣಿ
ಜಿಲ್ಲೆಯಲ್ಲಿ ಒಟ್ಟು 64 ಯುವಕ ಯುವತಿ ಮಂಡಲಗಳು ಮತ್ತು ಸುಮಾರು 34 ಮಂದಿ ವೈಯಕ್ತಿಕವಾಗಿ ತಮ್ಮ ಹೆಸರನ್ನು ಎನ್‌ವೈಕೆಯಲ್ಲಿ ನೋಂದಾಯಿಸಿಕೊಂಡಿವೆ ಎಂದು ನೆಹರು ಯುವ ಕೇಂದ್ರ ಮಂಗಳೂರು ಇದರ ಸಮನ್ಯಯಾಧಿಕಾರಿ ಜೆಸಿಂತಾ ಡಿ’ಸೋಜಾ ಹೇಳಿದ್ದಾರೆ.

ಧನ ಖಾತೆಗೆ ಜಮೆ
ತಮ್ಮೂರಿನ ಪರಿಸರ ಸ್ವತ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಯುವಕ-ಯುವತಿ ಮಂಡಲಗಳ ಸಹಕಾರ ಶ್ಲಾಘನೀಯ. ಎನ್‌ ವೈಕೆಯಿಂದ ಸೀಮಿತ ಅನುದಾನ ಲಭ್ಯವಾದರೂ ಅದು ನೇರವಾಗಿ ಯುವಕ-ಯುವತಿ ಮಂಡಗಳ ಖಾತೆಗೆ ಜಮೆಯಾಗಲಿದೆ. ಎನ್‌ ವೈಕೆಯಿಂದ ಕ್ರೀಡಾ ಸಾಮಾಗ್ರಿ ದೊರೆತಲ್ಲಿ ನೋಂದಾವಣೆಗೊಂಡ ಯುವಕ-ಯುವತಿ ಮಂಡಲಗಳಿಗೆ ಹಂಚಲಾಗುವುದು.
 - ಸುರೇಶ್‌ ರೈ ಸೂಡಿಮುಳ್ಳು.
 ಅಧ್ಯಕ್ಷರು, ಜಿಲ್ಲಾ ಯುವಜನ ಒಕ್ಕೂಟ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next