Advertisement

ಯಥಾಸ್ಥಿತಿಯಲ್ಲಿ ಚಿಕಿತ್ಸೆ ಮುಂದುವರಿಕೆ

10:59 PM Dec 23, 2019 | Lakshmi GovindaRaj |

ಉಡುಪಿ: ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀ ವಿಶ್ವೇಶ ತೀರ್ಥರ ಆರೋಗ್ಯ ಗಂಭೀರವಾಗಿದ್ದು, ಸ್ಥಿರವಾಗಿ ಮುಂದುವರಿಯುತ್ತಿದೆ. ಇದೇ ವೇಳೆ ಬೆಂಗಳೂರು ಮಣಿಪಾಲ್‌ ಆಸ್ಪತ್ರೆಯ ಇಬ್ಬರು ತಜ್ಞ ವೈದ್ಯರು ಮಣಿಪಾಲದ ವೈದ್ಯರ ಜತೆ ಸಮಾಲೋಚನೆ ನಡೆಸಿದ್ದಾರೆ. ದಿಲ್ಲಿ ಏಮ್ಸ್‌ ವೈದ್ಯರು ಸಂಪರ್ಕದಲ್ಲಿದ್ದಾರೆಂದು ಆಸ್ಪತ್ರೆಯ ವೈದ್ಯರ ಪ್ರಕಟಣೆ ತಿಳಿಸಿದೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಕಿರಿಯ ಶ್ರೀಪಾದರು, ಭಾನುವಾರ ರಾತ್ರಿ ಎಕ್ಸ್‌ರೇ, ಸ್ಕ್ಯಾನ್‌ ಮಾಡಲಾಗಿದೆ. ಸೋಮವಾರ ರಾತ್ರಿ ಎಂಆರ್‌ಐ ಸ್ಕ್ಯಾನ್‌ ಮಾಡುತ್ತಾರೆ. ಇದರ ಫ‌ಲಿತಾಂಶದ ಆಧಾರದಲ್ಲಿ ಚಿಕಿತ್ಸಾ ವಿಧಾನವನ್ನು ಬದಲಾಯಿಸಬಹುದು. ವೆಂಟಿಲೇಟರ್‌ನಲ್ಲಿರುವುದರಿಂದ ಮಂಪರು ಬರುವಂತೆ ನೋಡಿಕೊಳ್ಳುತ್ತಾರೆ ಎಂದರು.

ಆಸ್ಪತ್ರೆಗೆ ಸೋಮವಾರವೂ ಗಣ್ಯರ ದಂಡು ಆಗಮಿಸಿದೆ. ಕೇಂದ್ರದ ಮಾಜಿ ಸಚಿವೆ, ಶ್ರೀಗಳ ಶಿಷ್ಯೆ ಉಮಾಭಾರತಿಯವರು ಸಂಜೆ ಭೇಟಿ ನೀಡಿ ಕಿರಿಯ ಶ್ರೀಗಳು, ವೈದ್ಯರ ಜತೆ ಚರ್ಚಿಸಿದರು. ದಿಲ್ಲಿಯ ವೈದ್ಯರೊಂದಿಗೆ ಇಲ್ಲಿನ ವೈದ್ಯರ ಅಭಿಪ್ರಾಯಗಳನ್ನು ಪಡೆದರು. ಸುದ್ದಿಗಾರರ ಜತೆ ಮಾತನಾಡಿದ ಉಮಾಭಾರತಿ, 30 ವರ್ಷಗಳ ಹಿಂದೆ ನಾನು ಶ್ರೀಗಳಿಂದ ಸನ್ಯಾಸವನ್ನು ಪಡೆದೆ.

ನಾನು ಶಿಷ್ಯಳಾದರೂ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಬಲುದೊಡ್ಡ ಸಮಾಜ ಸುಧಾರಕರು. ದೇಶಾದ್ಯಂತ ದೊಡ್ಡ ಭಕ್ತ ವರ್ಗವನ್ನು ಹೊಂದಿದ್ದಾರೆ. ಪ್ರಧಾನಿ, ಕೇಂದ್ರ ಆರೋಗ್ಯ ಸಚಿವರು ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ರದ್ದಾದ ಸಿದ್ದು ಭೇಟಿ: ಮಾಜಿ ಸಿಎಂ ಸಿದ್ದರಾಮಯ್ಯ ಸಂಜೆ ಭೇಟಿ ನೀಡುವುದೆಂದು ನಿರ್ಧಾರವಾಗಿದ್ದರೂ ಕೊನೇ ಘಳಿಗೆಯಲ್ಲಿ ಉಡುಪಿ ಪ್ರವಾಸವನ್ನು ರದ್ದುಗೊಳಿಸಿ ಮಂಗಳೂರಿನಿಂದ ಬೆಂಗಳೂರಿಗೆ ವಾಪಸಾದರು.

Advertisement

ಬಸವಣ್ಣನವರಲ್ಲಿ ಪಾಟೀಲ್‌ ಪ್ರಾರ್ಥನೆ: ಶ್ರೀಗಳು ನೂರು ವರ್ಷ ಬಾಳಿ ಬದುಕಬೇಕು. ಅವರ ಸೇವೆ ಅನನ್ಯವಾದುದು. ದೇಶ, ಸಮಾಜಕ್ಕೆ ಅವರ ಮಾರ್ಗದರ್ಶನ ಅಗತ್ಯ. ನಮ್ಮ ನಡುವೆ ವೈಚಾರಿಕ ಭಿನ್ನಾಭಿಪ್ರಾಯವಿದ್ದರೂ ನಾವು ಸಮಾನಾಭಿಪ್ರಾಯಕ್ಕೂ ಬಂದಿದ್ದೆವು.

ಬಸವಣ್ಣನವರಲ್ಲಿ ಶ್ರೀಗಳಿಗಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮದ ಪ್ರತಿಪಾದಕ ಎಂ.ಬಿ. ಪಾಟೀಲ್‌ ಸುದ್ದಿಗಾರರಿಗೆ ತಿಳಿಸಿದರು. ವಿಜಯಪುರದಲ್ಲಿ ತಾವು ಶ್ರೀಗಳವನ್ನು ಭೇಟಿ ಮಾಡಿದ್ದನ್ನು ಶ್ರೀಗಳ ಆಪ್ತರೊಂದಿಗೆ ಪಾಟೀಲ್‌ ನೆನಪಿಸಿಕೊಂಡು, ಸಮಾಜ ಏಕತೆಗಾಗಿ ಶ್ರೀಗಳು ದೊಡ್ಡ ಕೊಡುಗೆ ನೀಡಿದ್ದಾರೆಂದರು.

ಬಿಷಪ್‌ ಭೇಟಿ: ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ ರೆ|ಫಾ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅವರು ಶ್ರೀಗಳ ಆರೋಗ್ಯವನ್ನು ವಿಚಾರಿಸಿದರು. ನಮಗೆ ಏಳು ವರ್ಷಗಳಿಂದ ಶ್ರೀಗಳ ಸಂಪರ್ಕವಿದೆ. ಅವರು ಶೀಘ್ರ ಗುಣಮುಖರಾಗಿ ಕೃಷ್ಣನ ಪೂಜೆ ಮಾಡುವಂತಾಗಬೇಕು ಎಂದು ಹಾರೈಸಿದರು.

ಪೇಜಾವರ ಶ್ರೀ ಆರೋಗ್ಯ ಸುಧಾರಣೆ: ಕಾರಜೋಳ
ಬಾಗಲಕೋಟೆ: ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಯಾಗುತ್ತಿದ್ದು, ಶೀಘ್ರ ಗುಣಮುಖರಾಗಿ ಇನ್ನೂ 100 ವರ್ಷ ಭಗವಂತನ ಸೇವೆಯಲ್ಲಿರಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾರೈಸಿದರು. ಸುದ್ದಿಗಾರರ ಜತೆ ಮಾತನಾಡಿ, ಶ್ರೀಗಳ ಆರೋಗ್ಯದಲ್ಲಿ ಶೇ.30 ಸುಧಾರಿಸಿದೆ. ಸೋಮವಾರ ಬೆಂಗಳೂರಿನಿಂದ ಇಬ್ಬರು ವಿಶೇಷ ವೈದ್ಯರು ತೆರಳಿದ್ದಾರೆ. ಅವರ ಆರೋಗ್ಯದ ಕುರಿತು ವೈದ್ಯರು ಹೆಚ್ಚಿನ ನಿಗಾ ಇಟ್ಟಿದ್ದಾರೆ. ಪೇಜಾವರ ಶ್ರೀಗಳ ಆರೋಗ್ಯ ಬೇಗ ಗುಣಮುಖವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next