Advertisement
ಪ್ರೇಮಾನಂದ ಶೆಟ್ಟಿ ಅವರ ಮೇಯರ್ ಅಧಿಕಾರಾವಧಿ ಕಳೆದ ತಿಂಗಳು 2ನೇ ದಿನಾಂಕಕ್ಕೆ ಕೊನೆಗೊಂಡಿತ್ತು. ಆದರೆ ಕಾನೂನಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ಪ್ರೇಮಾನಂದ ಶೆಟ್ಟಿ ಅವರ ಮೇಯರ್ ಅಧಿಕಾರಾವಧಿಯನ್ನು ಸರಕಾರದ ಮುಂದಿನ ಆದೇಶ ಬರುವವರೆಗೆ ವಿಸ್ತರಣೆಗೊಳಿಸಲಾಗಿದೆ. ಸದ್ಯ 1 ತಿಂಗಳು ಕಳೆದರೂ ಮುಂದಿನ ಮೇಯರ್ ಚುನಾವಣೆ ಬಗ್ಗೆ ಇನ್ನೂ ಸರಕಾರದಿಂದ ಅಂತಿಮ ತೀರ್ಮಾನ/ಸೂಚನೆ ಬಂದಿಲ್ಲ.
Related Articles
Advertisement
ಪಾಲಿಕೆಯ ಅಧಿಕಾರಾವಧಿ 5 ವರ್ಷಗಳಾಗಿದ್ದು, ಮೇಯರ್ ಅವರ ಅಧಿಕಾರಾವಧಿ 1 ವರ್ಷವಾಗಿರುತ್ತದೆ. ಈ ಮಧ್ಯೆ ಯಾವುದೇ ಮೇಯರ್ ಅವರ ಅಧಿಕಾರಾವಧಿ ವಿಸ್ತರಣೆಯಾದರೆ ಕೊನೆಯ ಮೇಯರ್ ಅವರ ಅಧಿಕಾರ ಅವಧಿ ಕಡಿತಗೊಳ್ಳುತ್ತದೆ. ಪಾಲಿಕೆ ಪ್ರಸಕ್ತ ಆಡಳಿತಾವಧಿ 28-02-2020ಕ್ಕೆ ಆರಂಭವಾಗಿದ್ದು, 27-02-2025ರ ವರೆಗೆ ಇರಲಿದೆ. ಮೂರನೇ, ನಾಲ್ಕನೇ ಮೇಯರ್ ಅವಧಿ ಪೂರ್ಣ 1 ವರ್ಷ ದೊರಕಿದರೂ ಕೊನೆಯ ಮೇಯರ್ ಅವಧಿ ಮಾತ್ರ ಕಡಿತವಾಗಲಿದೆ.
ಅನಿಶ್ಚಿತತೆಗೆ ಕಾರಣವೇನು?
ಮಂಗಳೂರು ಪಾಲಿಕೆಯ 23ನೇ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಮೇಯರ್ ಸ್ಥಾನವನ್ನು ಸಾಮಾನ್ಯ (ಜಿ) ಹಾಗೂ ಉಪಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಎ ಮಹಿಳೆ (ಬಿಸಿಎಡ ಬ್ಲ್ಯು) ವರ್ಗಕ್ಕೆ ಮೀಸಲಿರಿಸಿದ್ದು, ಅದರಂತೆ ಚುನಾವಣೆ ಮಾ. 2ರಂದು ನಿಗದಿಯಾಗಿತ್ತು. ಆದರೆ ಮಹಾರಾಷ್ಟ್ರದ ರಾಹುಲ್ ರಮೇಶ್ ಅವರು ಸುಪ್ರಿಂಕೋರ್ಟ್‌ನಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ವೇಳೆ ನ್ಯಾಯಾಲಯವು ಸ್ಥಳೀಯ ಸಂಸ್ಥೆಯ ಮೀಸಲಾತಿ ವಿಚಾರವಾಗಿ ಬೊಟ್ಟು ಮಾಡಿ ಆದೇಶ ನೀಡಿದೆ. ಹೀಗಾಗಿ, “ನ್ಯಾಯಾಲಯದ ಈ ಆದೇಶದ ಬಗ್ಗೆ ಮಂಗಳೂರು ಪಾಲಿಕೆಯ 23ನೇ ಅವಧಿಯ ಮೇಯರ್, ಉಪ ಮೇಯರ್, 4 ಸ್ಥಾಯೀ ಸಮಿತಿ ಚುನಾವಣೆ ಮಾ. 2ರಂದು ನಿಗದಿಪಡಿಸಿರುವುದರಿಂದ ಈ ಚುನಾವಣೆಗೆ ಅನ್ವಯವಾಗುವುದೇ?’ ಎಂಬ ಬಗ್ಗೆ ದ.ಕ. ಜಿಲ್ಲಾಧಿಕಾರಿಯವರು ರಾಜ್ಯ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದರು. ಆದರೆ ಈವರೆಗೂ ಸರಕಾರದಿಂದ ಇದಕ್ಕೆ ಯಾವುದೇ ಸ್ಪಷ್ಟೀಕರಣ ಸ್ವೀಕೃತವಾಗಿಲ್ಲ. ಹಾಗಾಗಿ ಚುನಾವಣೆಯನ್ನು ಮುಂದೂಡಲಾಗಿತ್ತು.