ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಅವರ ವಿರೋಧಿ ಬಣದ ನಾಯಕರ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಉಪ ಚುನಾವಣೆಯಲ್ಲಿ ಆ ನಾಯಕರು ಪಕ್ಷದ ಅಭ್ಯರ್ಥಿಗಳ ಪರ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿ ಸಿಕೊಳ್ಳದೇ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಹೈಕಮಾಂಡ್‌ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರು ಸಲ್ಲಿಸಿರುವ ನಡುವೆಯೇ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿ ಹಾಲಿ ಹಾಗೂ ಮಾಜಿ ಸಂಸ ದರು ಮತ್ತು ರಾಜ್ಯ ಸಭಾ ಸದಸ್ಯರು ಹಾಗೂ ಮಾಜಿ ಸಚಿವರನ್ನು ಸ್ಟಾರ್ ಪ್ರಚಾ ರಕರ ಪಟ್ಟಿಯಲ್ಲಿ ಸೇರಿಸು ವಂತೆ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಅನುಮತಿ ಪಡೆದಿರುವ 40 ಜನ ಸ್ಟಾರ್ ಪ್ರಚಾರ ಕರ ಪಟ್ಟಿಯಲ್ಲಿ ಪ್ರಮುಖವಾಗಿ ಬಿ.ಕೆ. ಹರಿಪ್ರಸಾದ್ ಹೆಸರು ಕೈ ಬಿಟ್ಟಿರುವ ಬಗ್ಗೆ ಅವರ ಬೆಂಬಲಿಗ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ. ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ವಿಚಾರದಲ್ಲಿ ಹರಿಪ್ರಸಾದ್ ಅವರು ಕೆ.ಎಚ್.ಮುನಿಯಪ್ಪ ಅವರೊಂದಿಗೆ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿ ಸಭೆಯಿಂದ ಹೊರ ನಡೆದಿದ್ದರು. ಅಲ್ಲದೇ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ದ್ದೀರಿ ನೀವೇ ಗೆಲ್ಲಿಸಿಕೊಂಡು ಬನ್ನಿ ಎಂದು ಸಿದ್ದರಾಮ ಯ್ಯ ಅವರಿಗೆ ಹೇಳಿ ಉಪ ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಈ ನಡುವೆ ಉಪ ಚುನಾವಣೆಗೆ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಗೆ ಬಿ.ಕೆ. ಹರಿಪ್ರಸಾದ್ ಸೇರಿ ಸಂಸದ ಡಿ.ಕೆ.ಸುರೇಶ್, ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್, ನಾಸೀರ್ ಹುಸೇನ್, ಎಲ್.ಹನು ಮಂತಯ್ಯ, ಮಾಜಿ ಸಂಸದರಾದ ಮುದ್ದಹನುಮೇ ಗೌಡ, ಬಿ.ಎಚ್. ಚಂದ್ರಪ್ಪ, ಬಿ.ವಿ.ನಾಯ್ಕ, ಮಾಜಿ ಸಚಿವರಾದ ಮೋಟಮ್ಮ, ಎಚ್.ಆಂಜನೇಯ, ರಾಣಿ ಸತೀಶ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ಜಲಜಾ ನಾಯ್ಕ ಅವರನ್ನು ಸೇರಿಸುವಂತೆ ಕೆ.ಎಚ್.ಮುನಿಯಪ್ಪ ಸೋನಿಯಾ ಗಾಂಧಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
40 ಜನರಿಗೆ ಮಾತ್ರ ಅವಕಾಶ: ಚುನಾವಣಾ ಆಯೋಗದ ನಿಮಯಗಳ ಪ್ರಕಾರ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಪಾಲ್ಗೊಳ್ಳಲು ಪ್ರತಿ ಪಕ್ಷದಿಂದ 40 ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈಗಾಗಲೇ ಕಾಂಗ್ರೆಸ್‌ನಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಸೇರಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಅಧಿಕೃತವಾಗಿ ಚುನಾವಣಾ ಆಯೋಗ ದಿಂದ ಅನುಮತಿ ಪಡೆದು ಬಿಡುಗಡೆ ಮಾಡಲಾಗಿದೆ. ಆದರೆ, ಕಾಂಗ್ರೆಸ್ ನಾಯಕರ ನಡುವಿನ ಆಂತರಿಕ ಗೊಂದಲದಿಂದ ಹಿರಿಯ ನಾಯಕರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಬಿಟ್ಟಿರುವುದೂ ನಾಯಕರ ನಡುವಿನ ಮುನಿಸು ಮತ್ತಷ್ಟು ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ.
ಅದೇ ಕಾರಣಕ್ಕೆ ಮುನಿಯಪ್ಪ ಅವರು ಹೊಸದಾಗಿ 12 ಜನ ಹಿರಿಯ ನಾಯಕರ ಹೆಸರನ್ನು ಸೋನಿಯಾ ಗಾಂಧಿಯವರಿಗೆ ಕಳುಹಿಸಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಹೊಸದಾಗಿ ಹೆಸರು ಸೇರ್ಪಡೆ ಮಾಡಬೇಕಾದರೆ ಹಾಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ 40 ಜನರಲ್ಲಿ ಕೆಲವರನ್ನು ಕೈ ಬಿಟ್ಟು ಹೊಸ ಸ್ಟಾರ್ ಪ್ರಚಾರಕರ ಸೇರ್ಪಡೆಗೆ ಆಯೋಗಕ್ಕೆ ಮನವಿ ಮಾಡಬೇಕಾಗುತ್ತದೆ. ಆದರೆ, ಹಾಲಿ ಇರುವ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಯಾರ ಹೆಸರು ಕೈ ಬಿಟ್ಟರೂ ಮತ್ತೂಂದು ರೀತಿಯ ಗೊಂದಲ ಸೃಷ್ಟಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಪತ್ರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತಾ ಎನ್ನುವುದೂ ಕುತೂಹಲಕ್ಕೆ ಕಾರಣವಾಗಿದೆ.
ಸ್ಟಾರ್ ಪ್ರಚಾರಕರಿಗೆ ಇರುವ ಅವಕಾಶ: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರಾಗಿ ನೇಮಕಗೊಂಡರೆ ಅವರು ಚುನಾವಣೆ ನಡೆಯುವ ಯಾವುದೇ ಕ್ಷೇತ್ರದಲ್ಲಿಯೂ ಮುಕ್ತವಾಗಿ ಪ್ರಚಾರ ನಡೆಸಲು ಅವಕಾಶ ದೊರೆಯುತ್ತದೆ. ಅಲ್ಲದೇ ಚುನಾವಣಾ ಆಯೋಗದಿಂದ ಸ್ಟಾರ್ ಪ್ರಚಾರಕರು ಎಂದು ಅನುಮತಿ ಪತ್ರ ದೊರೆಯುವುದರಿಂದ ಅವರ ವಾಹನಗಳನ್ನು ಅನಗತ್ಯವಾಗಿ ತಪಾಸಣೆ ಮಾಡುವಂತಿಲ್ಲ. ಅಲ್ಲದೇ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದ ಸಂದರ್ಭದಲ್ಲಿ ವೇದಿಕೆ ಮೇಲೆ ಕೂಡಲು ಅವಕಾಶ ನೀಡಲಾಗುತ್ತದೆ.