Advertisement

ಮುಂದುವರಿದ ಮಳೆ, ನಿಯಂತ್ರಣದಲ್ಲಿ ಸ್ಥಿತಿ 

08:48 PM Jul 28, 2023 | Pranav MS |

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಶುಕ್ರವಾರವೂ ಭಾರೀ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಗುರುವಾರದಿಂದ ಶುಕ್ರವಾರದವರೆಗೆ ಮಳೆಯಿಂದ ಆದ ಅನಾಹುತಗಳಲ್ಲಿ ನಾಲ್ವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ ವಾರವೂ ದೇಶಾದ್ಯಂತ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.

Advertisement

ವಿದ್ಯುತ್‌ ತಗುಲಿ ಬಾಲಕ ಸಾವು: ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಳೆ ನಡುವೆ ವಿದ್ಯುತ್‌ ತಂತಿ ತಗುಲಿ 16 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಥಾಣೆಯ ನ್ಯೂ ಶಿವಾಜಿನಗರ ಪ್ರದೇಶದಲ್ಲಿ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತರಿಗೆ ಶಾಶ್ವತ ಮನೆ: “ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಶಲ್‌ವಾಡಿಯಲ್ಲಿ ನಡೆದ ಭೂಕುಸಿತದಲ್ಲಿ ಬದುಕುಳಿದ ಸಂತ್ರಸ್ತರಿಗೆ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ(ಸಿಡ್ಕೊ)ದ ವತಿಯಿಂದ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಲಾಗುವುದು’ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ತಿಳಿಸಿದ್ದಾರೆ. ರಾಯಗಢದಲ್ಲಿ ಜು.19ರಂದು ನಡೆದ ಭೂಕುಸಿತದಲ್ಲಿ 27 ಮಂದಿ ಮೃತಪಟ್ಟಿದ್ದು, 57 ಮಂದಿ ಕಾಣೆಯಾಗಿದ್ದಾರೆ.

200 ಮಿ.ಮೀ. ಮಳೆ: ರಾಯಗಢ ಜಿಲ್ಲೆಯ ಐದು ತಾಲೂಕುಗಳಾದ ಉರಾನ್‌, ಅಲಿಬಾಗ್‌, ಪೆನ್‌, ಪನ್ವೇಲ್‌ ಮತ್ತು ಮುರುದ್‌ನಲ್ಲಿ ಗುರುವಾರದಿಂದ ಶುಕ್ರವಾರದವರೆಗೆ 24 ಗಂಟೆಗಳಲ್ಲಿ 200 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಕುಂಡಲಿಕಾ, ಅಂಬಾ ಮತ್ತು ಪಾತಾಳಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಗಳಲ್ಲಿ ರಕ್ಷಣೆ: ತೆಲಂಗಾಣದ ವಾರಂಗಲ್‌ನಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ಜಲಾವೃತವಾಗಿವೆ. ಮಳೆಯಲ್ಲಿ ಸಿಲುಕಿರುವ ಜನರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ಸಿಬ್ಬಂದಿ ದೋಣಿ ಬಳಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ರಾಜ್ಯದಲ್ಲಿ ತೀವ್ರ ಮಳೆ ಹಾಗೂ ಬೆಳೆ ಹಾನಿ ಕುರಿತು ಚರ್ಚಿಸಲು ಜು.31ರಂದು ಸಿಎಂ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಹಿಮಾಚಲದಲ್ಲಿ ತೀವ್ರ ಮಳೆ:
ಹಿಮಾಚಲ ಪ್ರದೇಶದಲ್ಲಿ ಶನಿವಾರದವರೆಗೆ ತೀವ್ರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇದರಿಂದ ಪ್ರವಾಹ, ಭೂಕುಸಿತ, ನದಿಯ ನೀರಿನ ಮಟ್ಟದಲ್ಲಿ ಏರಿಕೆ ಆಗಲಿದೆ. ಶುಕ್ರವಾರ ಭೋರಂಗ್‌ನಲ್ಲಿ 127 ಮಿ.ಮೀ., ಕತುವಾದಲ್ಲಿ 118 ಮಿ.ಮೀ. ಮಳೆಯಾಗಿದೆ ಎಂದು ತಿಳಿಸಿದೆ.

12 ಗಂಟೆ ಮರದಲ್ಲಿ ನೇತಾಡುತ್ತಿದ್ದವನ ರಕ್ಷಣೆ
ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಗಡಿಯ ವರನಾ ನದಿಯಲ್ಲಿ ಕೊಚ್ಚಿ ಹೋದ 50 ವರ್ಷದ ವ್ಯಕ್ತಿ, ಮರದ ಆಸರೆಯಿಂದ ಬದುಕಿದ್ದು, ಸುಮಾರು 12 ಗಂಟೆಗಳ ಕಾಲ ಮರದ ಕೊಂಬೆಯನ್ನು ಹಿಡಿದು ನೇತಾಡಿದ್ದಾರೆ. ಶುಕ್ರವಾರ ಬೆಳಗ್ಗೆ ಅವರನ್ನು ಕೊಲ್ಹಾಪುರ ವಿಪತ್ತು ನಿರ್ವಹಣಾ ಪಡೆ(ಕೆಡಿಆರ್‌ಎಫ್) ರಕ್ಷಿಸಿದೆ. ಅವರನ್ನು ಸಾಂಗ್ಲಿಯ ಲಖೇವಾಡಿ ಗ್ರಾಮದ ಭಜರಂಗ್‌ ಕಾಮ್ಕರ್‌ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next