Advertisement

Rain ಕರಾವಳಿಯಾದ್ಯಂತ ಮುಂದುವರಿದ ಮಳೆ

11:29 PM May 22, 2024 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಮಳೆ ಮುಂದುವರಿದಿದ್ದು, ಹಲವು ಕಡೆ ಬುಧವಾರ ಗುಡುಗು-ಮಿಂಚು ಸಹಿತ ಉತ್ತಮ ಮಳೆಯಾಗಿದೆ.

Advertisement

ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ ಬಳಿಕ ಮಳೆ ಆರಂಭಗೊಂಡಿತ್ತು. ಮಂಗಳೂರಿನಲ್ಲಿ ಬೆಳಗ್ಗೆ ಮಳೆ ಬಿಡುವು ನೀಡಿದ ಕಾರಣ ಸೆಕೆಯ ವಾತಾವರಣ ಇತ್ತು. ನಗರದಲ್ಲಿ 33 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.3 ಡಿ.ಸೆ.ಕಡಿಮೆ ಮತ್ತು 25.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.2 ಡಿ.ಸೆ. ಅಧಿಕ ಉಷ್ಣಾಂಶ ದಾಖಲಾಗಿತ್ತು.

ಉಡುಪಿ: ಮಳೆಯ ನಡುವೆಯೂ ಸೆಕೆ!
ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಮೋಡ-ಬಿಸಿಲಿನ ವಾತಾವರಣದ ನಡುವೆ ಬೆಳಗ್ಗೆ ಸಂಜೆ ವೇಳೆ ಉತ್ತಮ ಮಳೆಯಾಗಿದೆ. ಕುಂದಾಪುರ, ಕಾರ್ಕಳ, ಬೈಂದೂರು, ಉಡುಪಿ, ಕಾಪು ಭಾಗದಲ್ಲಿ ಕೆಲಕಾಲ ನಿರಂತರ ಮಳೆಯಾಗಿದ್ದು, ಹೆಬ್ರಿ, ಕಾರ್ಕಳ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಮಳೆಯ ವಾತಾವರಣವಿದ್ದರೂ ಇನ್ನಷ್ಟು ಉರಿ ಸೆಖೆ ಅನುಭವ ಜನರನ್ನು ಕಾಡುತ್ತಿದೆ.

ಮಳೆಗೆ ಕುಸಿದ ಮನೆ
ಪುತ್ತೂರು: ಭಾರೀ ಮಳೆಗೆ ಕೆಯ್ಯೂರು ಗ್ರಾಮದ ದೇರ್ಲದಲ್ಲಿ ಅಣ್ಣು ಅವರ ವಾಸದ ಮನೆಯ ಛಾವಣಿ ಮುರಿದು ಬಿದ್ದಿದೆ. ಮನೆ ಮಂದಿಗೆ ಅಪಾಯ ಉಂಟಾಗಿಲ್ಲ. ಅವರು ಸ್ಥಳೀಯ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.

ಸ್ಥಳಕ್ಕೆ ಕೆಯ್ಯೂರು ಪಿಡಿಒ ನಮಿತಾ ಎ.ಕೆ., ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅಧ್ಯಕ್ಷ ಶರತ್‌ ಕುಮಾರ್‌ ಮಾಡಾವು, ಸದಸ್ಯರಾದ ಬಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ಗ್ರಾಮ ಆಡಳಿತ ಅಧಿಕಾರಿ ಸ್ವಾತಿ, ಸಹಾಯಕ ನಾರಾಯಣ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

4 ದಿನ “ಎಲ್ಲೋ ಅಲರ್ಟ್‌’
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮೇ 23 ರಿಂದ 26ರವರೆಗೆ ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್‌’ ಘೋಷಣೆ ಮಾಡಲಾಗಿದೆ. ಈ ವೇಳೆ ಬಿರುಸಿನಿಂದ ಕೂಡಿದ ಮಳೆಯಾಗುವ
ಸಾಧ್ಯತೆ ಇದೆ.

ಸಿದ್ದಾಪುರ: ವಾರದ ಸಂತೆಗೆ ಮಳೆ ಅಡ್ಡಿ
ಕುಂದಾಪುರ: ಬುಧವಾರ ಮಧ್ಯಾಹ್ನದ ಅನಂತರ ಕುಂದಾಪುರ, ಬೈಂದೂರು ತಾಲೂಕಿನ ಕುಂದಾಪುರ, ಸಿದ್ದಾಪುರ, ಹಾಲಾಡಿ, ಕೋಟೇಶ್ವರ, ಬಸ್ರೂರು, ತೆಕ್ಕಟ್ಟೆ, ಬಿದ್ಕಲ್‌ಕಟ್ಟೆ, ಕೊಲ್ಲೂರು, ಜಡ್ಕಲ್‌, ಉಪ್ಪುಂದ, ಬೈಂದೂರು ಸಹಿತ ವಿವಿಧೆಡೆಗಳಲ್ಲಿ ಮಳೆ ಸುರಿಯಿತು. ಸಿದ್ದಾಪುರದಲ್ಲಿ ವಾರದ ಸಂತೆ ಆವರಣಕ್ಕೆ ಮಳೆ ನೀರು ನುಗ್ಗಿ ಹೊಳೆಯಂತಾಗಿತ್ತು. ವರ್ತಕರು ತೊಂದರೆ ಅನುಭವಿಸಿದರು. ತರಕಾರಿ, ಒಣ ಮೀನು ಮಳೆ ನೀರಿಗೆ ಕೊಚ್ಚಿಕೊಂಡು ಹೋದ ಪ್ರಸಂಗವೂ ನಡೆಯಿತು.

ಇನ್ನು ಮಳೆ ನೀರು ರಸ್ತೆಯಲ್ಲಿಯೇ ಹರಿದ ಪರಿಣಾಮ ಸಿದ್ದಾಪುರ ಪೇಟೆಯ ಮುಖ್ಯ ರಸ್ತೆಯೂ ಸಹ ತೋಡಿನಂತಾಗಿತ್ತು. ಇನ್ನೂ ಚರಂಡಿಯ ಹೂಳೆತ್ತದ ಪರಿಣಾಮ ಮಳೆ ನೀರು ಪೂರ್ತಿ ರಸ್ತೆಯಲ್ಲಿಯೇ ಹರಿದು ಹೋಗುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next