ಮೈಸೂರು: ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಮುಂದೂಡಿರುವ ಮೇಯರ್ ಕ್ರಮ ಖಂಡಿಸಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಶುಕ್ರವಾರವೂ ಮುಂದುವರಿಯಿತು. ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಮುಂದೂಡಿದ್ದಕ್ಕೆ ಗುರುವಾರ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಪಾಲಿಕೆ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ಶುಕ್ರವಾರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ಮುಂದುವರಿಸಿದರು ಮೇಯರ್, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಧಿಕ್ಕಾರ ಕೂಗಿದರು. ಕಳೆದ 14 ತಿಂಗಳಿಂದ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದಿಲ್ಲ. ಇದರಿಂದಾಗಿ ಇವುಗಳಿಗೆ ಅಧ್ಯಕ್ಷರು, ಸದಸ್ಯರಿಲ್ಲ. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಗುಣಮಟ್ಟವನ್ನು ಪರಿಶೀಲಿಸಲು ಆಗುತ್ತಿಲ್ಲ. ಯಾವ ಹೊಸ ಯೋಜನೆಗಳಿಗೆ ಅನುಮೋದನೆ ನೀಡಲು ಆಗುತ್ತಿಲ್ಲ. ಇದರ ಪರಿಣಾಮವಾಗಿ ನಗರದ ಬೆಳವಣಿಗೆ ಕುಂಟಿತ ವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಜನತಂತ್ರ ವ್ಯವಸ್ಥೆಯನ್ನು ಉಳಿಸಿ: ಚುನಾವಣೆ ತಡೆಹಿಡಿಯುವ ಹುನ್ನಾರವು ಪ್ರಜಾಪ್ರಭುತ್ವಕ್ಕೆ ಮತ್ತು ಜನತಾ ಸರ್ಕಾರಕ್ಕೆ ವಿರುದ್ಧವಾಗಿದೆ. ಜತೆಗೆ, ಕಾನೂನುಬಾಹಿರವಾಗಿದೆ. ಆದ್ದರಿಂದ ಕೂಡಲೇ 4 ಸ್ಥಾಯಿ ಸಮಿತಿಗಳ ಚುನಾವಣೆಯನ್ನು ದಿನಾಂಕವನ್ನು ನಿಗದಿ ಪಡಿಸಿ ಚುನಾವಣೆ ನಡೆಸಬೇಕು. ಇದರೊಂದಿಗೆ ಜನತಂತ್ರ ವ್ಯವಸ್ಥೆಯನ್ನು ಉಳಿಸಬೇಕು ಎಂದು ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಆಗ್ರಹಿಸಿದರು.
ಸದಸ್ಯೆ ಪಲ್ಲವಿಬೇಗಂ ಮಾತನಾಡಿ, ಏಕಪಕ್ಷೀಯವಾಗಿ ಅಧಿಕಾರ ಚಲಾಯಿಸಲು ಮೇಯರ್ ಮುಂದಾಗಿದ್ದಾರೆ. ಇದರಿಂದಾ ಗಿಯೇ ಈ ಚುನಾವಣೆ ನಡೆಸಲು ಅವಕಾಶ ನೀಡುತ್ತಿಲ್ಲ. ಈ ಕಾರಣದಿಂದ ನಗರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಜನ ಸಮಸ್ಯೆಗಳಿಗೆ ಪರಿಹಾರವೂ ದೊರೆಯುತ್ತಿಲ್ಲ ಎಂದು ದೂರಿದರು.
Related Articles
ಮತ್ತೂಬ್ಬ ಸದಸ್ಯೆ ಶೋಭಾ ಸುನೀಲ್ ಮಾತನಾಡಿ, ಯಾವ ಕಾರಣಕ್ಕೆ ಈ ಚುನಾವಣೆ ಯನ್ನು ಮುಂದೂಡಲಾಗಿದೆ ಎಂಬುದನ್ನು ಮೇಯರ್ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಮುನ್ಸಿಪಲ್ ಕಾಯ್ದೆ ಸ್ಪಷ್ಟ ಉಲ್ಲಂಘನೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಚುನಾವಣೆ ಮುಂದೂಡಿಕೆಯು ಮುನ್ಸಿಪಲ್ ಕಾಯ್ದೆ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗೆ ಸಮಯ ವ್ಯರ್ಥ ಮಾಡಲು ಹುನ್ನಾರ ನಡೆದಿದೆ. ಅಷ್ಟೊತ್ತಿಗೆ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ. ಇದು ಮುಗಿಯುವ ಹೊತ್ತಿಗೆ ಪಾಲಿಕೆ ಅಧಿಕಾರ ಅವಧಿಯೇ ಮುಗಿಯಲಿದೆ. ಹೀಗಾಗಿ, ಚುನಾವಣೆಯನ್ನು ನಡೆಸಲು ಹಿಂದೇಟು ಮಾಡುವ ಮೂಲಕ ಪಾಲಿಕೆಗೆ ಬರುವ ಅನುದಾನವನ್ನು ಲೂಟಿ ಮಾಡಲಾಗುತ್ತಿದೆ. ಆದ್ದರಿಂದ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿ ಪಾಲಿಕೆಯನ್ನೇ ಸೂಪರ್ ಸೀಡ್ ಮಾಡಬೇಕೆಂದು ಆಗ್ರಹಿಸಲಾಗುವುದು. ಜತೆಗೆ, ಕಾಂಗ್ರೆಸ್ ವತಿಯಿಂದ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ಯಲ್ಲಿ ಪಾಲಿಕೆ ಪ್ರತಿಪಕ್ಷ ನಾಯಕ ಅಯೂಬ್ ಖಾನ್, ಸದಸ್ಯರಾದ ಪುಷ್ಪಲತಾ ಚಿಕ್ಕಣ್ಣ, ಜಗನ್ನಾಥ್, ವಿ.ಶ್ರೀಧರ್, ಎಚ್.ಎಂ.ಶಾಂತಕುಮಾರಿ, ಜೆ.ಗೋಪಿ, ಲೋಕೇಶ್(ಪಿಯಾ), ಪ್ರದೀಪ್ , ಅಕ್ಮಲ್ ಪಾಷಾ, ಬಷೀರ್ ಅಹಮ್ಮದ್, ಉಷಾ, ಕಾಂಗ್ರೆಸ್ ಮುಖಂಡರಾದ ಎಂ.ಶಿವಣ್ಣ, ಟಿ.ಶ್ರೀನಿವಾಸ್ ಇನ್ನಿತರರು ಇದ್ದರು.