Advertisement

Karnataka ಸಿಎಂ ಕುರ್ಚಿ ಖಾಲಿ ಇಲ್ಲ : ಸಿದ್ದು ಆಪ್ತರ ತಿರುಗೇಟು

11:48 PM Jun 30, 2024 | Team Udayavani |

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಒಳಬೇಗುದಿ ಮುಂದುವರಿದಿದ್ದು ಸಚಿವರು-ಶಾಸಕರು ತಮ್ಮ ನಾಯಕರ ಪರ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

ದಿಲ್ಲಿಯಿಂದ ಮರಳಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಪರಮಾಪ್ತ ಸಚಿವ ಡಾ| ಎಚ್‌.ಸಿ. ಮಹದೇವಪ್ಪ, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ್ದಾರೆ. ಸಚಿವ ಜಮೀರ್‌ ಅಹಮದ್‌ ಕೂಡ ಇದೇ ಮಾತು ಹೇಳಿದ್ದಾರೆ. ಸಚಿವ ಚಲುವರಾಯ ಸ್ವಾಮಿ ಕೂಡ ಈ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ. ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಮಾತ್ರ ಇಲ್ಲಿ ಪ್ರಸ್ತುತ ಮತ್ತು ಅಪ್ರಸ್ತುತ ಅಂತ ಅಲ್ಲ. ಸಿಎಂ ಆಯ್ಕೆ ಶಾಸಕರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ಚನ್ನಗಿರಿ ಶಾಸಕ ಮಾತ್ರ ಡಿ.ಕೆ. ಶಿವಕುಮಾರ್‌ ಪರ ಬ್ಯಾಟಿಂಗ್‌ ಮುಂದುವರಿಸಿದ್ದು ಡಿಕೆಸಿ ಸಿಎಂ ಆಗುವುದು ಖಚಿತ ಎಂದು ಘೋಷಿಸಿದ್ದಾರೆ. ಈ ಮಧ್ಯೆ ದಿಲ್ಲಿಯಲ್ಲೇ ಉಳಿದಿರುವ ಡಿ.ಕೆ. ಶಿವಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಈ ಮಧ್ಯೆ ಬಿಜೆಪಿಯವರು ಕೂಡ ಸಿಎಂ ಬದಲಾವಣೆ ವಿಚಾರದಲ್ಲಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸದ್ಯಸಿಎಂ ಸ್ಥಾನ ಖಾಲಿ ಇಲ್ಲ: ಸಚಿವ ಜಮೀರ್‌
ಮಂಡ್ಯ: ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಅಗತ್ಯವಿಲ್ಲ ಎಂದು ವಸತಿ, ವಕ್ಫ್  ಮತ್ತು ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಸಚಿವ ಜಮೀರ್‌ ಅಹಮದ್‌ ಖಾನ್‌ ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿಯ ಅಭಿಪ್ರಾಯ ವೈಯಕ್ತಿಕ. ಈಗಾಗಲೇ ಹೈಕಮಾಂಡ್‌ ಸಿದ್ದರಾಮಯ್ಯ ಸಿಎಂ ಎಂದು ತೀರ್ಮಾನ ಮಾಡಿ ಆಗಿದೆ. ಸಿಎಂ ಕುರ್ಚಿ ಖಾಲಿ ಇರುವಾಗ ಚರ್ಚೆ ಮಾಡಬೇಕು. ಖಾಲಿ ಇಲ್ಲದಿರುವಾಗ ಚರ್ಚೆ ಮಾಡುವ ಅಗತ್ಯವಿಲ್ಲ. ಸಿಎಂ ಸ್ಥಾನ ಒಕ್ಕಲಿಗರು, ಲಿಂಗಾಯತರು, ದಲಿತರು ಕೇಳುತ್ತಿದ್ದಾರೆ. ಅದರಲ್ಲಿ ತಪ್ಪಿಲ್ಲ. ಹೈಕಮಾಂಡ್‌ ಹಾಕಿದ ಗೆರೆಯನ್ನು ನಾವ್ಯಾರೂ ದಾಟುವುದಿಲ್ಲ ಎಂದರು.

Advertisement

ಹೈಕಮಾಂಡ್‌ ತೀರ್ಮಾನ: ಚಲುವರಾಯಸ್ವಾಮಿ
ಮಂಡ್ಯ: ಸಿಎಂ ಬದಲಾವಣೆ ವಿಚಾರದ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನಿಸಲಿದೆ. ಯಾರಿಗೂ ಕೂಡ ನೀವು ಏನು ಹೇಳಬೇಡಿ ಎನ್ನಲು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ತೀರ್ಮಾನ ಮಾಡಲು ನಾಯಕರಿದ್ದಾರೆ. ಒಬ್ಬ ಮಗ ಹೆಚ್ಚು ಮಾತನಾಡುತ್ತಾನೆ ಎಂದು ಮನೆಯಿಂದ ಓಡಿಸಲು ಆಗದು. ಕೆಲವು ಸನ್ನಿವೇಶಗಳಲ್ಲಿ ಹೀಗಾಗುವುದು ಸಾಮಾನ್ಯ. ಚಂದ್ರಶೇಖರ ಸ್ವಾಮೀಜಿಯಿಂದ ಸಿಎಂ ಬದಲಾವಣೆ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರು.

ಹುದ್ದೆ ಖಾಲಿ ಇಲ್ಲ, ಚರ್ಚೆ ಅನಗತ್ಯ: ಮಹದೇವಪ್ಪ
ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹಾಗಾಗಿ ಆ ಬಗ್ಗೆ ಚರ್ಚೆ ಅನಗತ್ಯ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಐದು ವರ್ಷ ಆಡಳಿತ ನಡೆಸುವಂತೆ ಕಾಂಗ್ರೆಸ್‌ ಪಕ್ಷಕ್ಕೆ ಜನರು ಅಧಿಕಾರ ನೀಡಿದ್ದಾರೆ. ಮುಖ್ಯಮಂತ್ರಿ ಆಯ್ಕೆಗೆ ಪೂರ್ವದಲ್ಲಿ ಪಕ್ಷದ ವರಿಷ್ಠರು ವೀಕ್ಷಕರನ್ನು ಕಳುಹಿಸಿ ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದಾರೆ. ಆ ಸಂದರ್ಭ ಹೈಕಮಾಂಡ್‌ ಏನು ಚರ್ಚೆ ಮಾಡಿದೆ ಎಂಬುದನ್ನು ಬಹಿರಂಗ ಪಡಿಸಲಾಗದು ಎಂದರು. ಲೋಕಸಭೆ ಚುನಾವಣೆ ಸಮಯದಲ್ಲಿ ಜಾತಿವಾರು ಡಿಸಿಎಂ ನೇಮಕ ಚರ್ಚೆ ನಡೆದಿತ್ತು. ಆದರೆ ಅದು ಸಾಧ್ಯವಿಲ್ಲ. ಪಕ್ಷದ ಹಿತದೃಷ್ಟಿಯಿಂದ ಇಂತಹ ವಿಚಾರಗಳು ಆಂತರಿಕವಾಗಿ ಚರ್ಚೆಯಾಗಬೇಕು ಎಂದರು.

ಸಿಎಂ ಹುದ್ದೆಗೆ ಬಿ.ಕೆ. ಹರಿಪ್ರಸಾದ್‌
ಪರಿಗಣಿಸಿ: ಪ್ರಣವಾನಂದ ಶ್ರೀ
ಯಾದಗಿರಿ: ಒಕ್ಕಲಿಗ, ವೀರಶೈವ ಲಿಂಗಾಯತ ಬಳಿಕ ಈಗ ಈಡಿಗ ಸಮುದಾಯ ವ್ಯಕ್ತಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಕೂಗು ಕೇಳಿ ಬಂದಿದ್ದು, ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್‌ ಅವರನ್ನು ಸಿಎಂ ಮಾಡಬೇಕೆಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ, ಡಿಸಿಎಂ ವಿಚಾರ ಕೇವಲ ರಾಜಕೀಯ ಗಿಮಿಕ್‌. ಇದರ ಸಂಪೂರ್ಣ ರೂವಾರಿ ಡಿಸಿಎಂ ಡಿ.ಕೆ.ಶಿವಕುಮಾರ್‌. ನಾಡಿನ ಸ್ವಾಮೀಜಿಗಳ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಳ್ಳದ ಡಿಕೆಶಿ ಇನ್ನು ಮುಂದೆ ಯಾವುದೇ ಮಠಗಳಿಗೆ ಕಾಲಿಡುವುದು ಬೇಡ. ಮುಂದಿನ ರಾಜಕೀಯ ಬದಲಾವಣೆಯಲ್ಲಿ ಎಲ್ಲ ಸಮುದಾಯಗಳ ನಾಯಕರ ಪಾತ್ರವಿರಲಿದೆ. ಸಿಎಂ ಬದಲಾವಣೆ ಮಾಡುವುದಾದರೆ ಬೇರೆ ಪ್ರಬಲ ಸಮುದಾಯದವರು ಕೇಳುತ್ತಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಈಡಿಗ ಸಮುದಾಯದ ಬಿ.ಕೆ. ಹರಿಪ್ರಸಾದ್‌ ಅವರನ್ನು ಮುಂದಿನ ದಿನಗಳಲ್ಲಿ ಸಿಎಂ ಹುದ್ದೆಗೆ ಪರಿಗಣಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next