Advertisement

Congress ಒಳ ಬೇಗುದಿ: ಇಂದು ಕೆಪಿಸಿಸಿ ಸಭೆ

01:43 AM Jul 01, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಒಳಬೇಗುದಿ ಹೆಚ್ಚಾಗಿದೆ. ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಿಎಂ-ಡಿಸಿಎಂ ಬಣಗಳ ನಡುವೆ ನಡೆಯುತ್ತಿರುವ ಚರ್ಚೆಗಳು ಕಾವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೋಮವಾರ ಪಕ್ಷದ ಪದಾಧಿಕಾರಿಗಳ ಸಭೆ ಕರೆದಿರು ವುದು ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಹೆಚ್ಚುವರಿ ಡಿಸಿಎಂ, ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಡಿಕೆಶಿ ಆಪ್ತರಿಂದ ಒತ್ತಡ ಇರುವ ಹಿನ್ನೆಲೆಯಲ್ಲಿ ಈ ವಿಷಯ ಪ್ರಸ್ತಾವವಾದರೆ ಜಟಾಪಟಿ ನಡೆಯುವುದು “ಗ್ಯಾರಂಟಿ’ ಎಂದೇ ಹೇಳಲಾಗಿದೆ.

Advertisement

ಈಗಾಗಲೇ ಹೈಕಮಾಂಡ್‌ಗೆ ಎರಡೂ ಕಡೆಯಿಂದ ದೂರು ಹೋಗಿದೆ. ದಿಲ್ಲಿಯಲ್ಲಿ ನಾಯಕ ರಾಹುಲ್‌ ಗಾಂಧಿಗೆ ಸಿಎಂ ದೂರಿತ್ತರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಡಿಕೆಶಿ ದೂರು ನೀಡಿ ಬಂದಿದ್ದಾರೆ. ಈ ಬೆನ್ನಲ್ಲೇ ಡಿಕೆಶಿ ಕರೆದಿರುವ ಸಭೆ ಜಟಾಪಟಿಗೆ ಕಾರಣವಾಗಲಿದೆ ಎಂದೇ ಹೇಳಲಾಗುತ್ತಿದೆ.

ಒಂದು ವೇಳೆ ಈ ವಿಚಾರ ಸಭೆಯಲ್ಲಿ ಪ್ರಸ್ತಾವವಾದರೆ, ಸಿಎಂ ಬಣ ಆಕ್ಷೇಪ ವ್ಯಕ್ತಪಡಿಸಲಿದೆ. ಇದು ಉಭಯ ಬಣಗಳ ನಡುವೆ ಜಟಾಪಟಿಗೂ ಕಾರಣವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಇದಲ್ಲದೆ ಹೊಸ ಪದಾಧಿಕಾರಿಗಳಿಗೆ ವಿಧಾನಸಭಾ ಕ್ಷೇತ್ರವಾರು ಜವಾಬ್ದಾರಿ ಹಂಚಿಕೆ ಮಾಡಲಾಗುತ್ತದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಯಲಿದೆ. ಇದೇ ವೇಳೆ ನಿಗಮ ಮಂಡಳಿಗಳಿಗೆ ಸದಸ್ಯರು, ನಿರ್ದೇ ಶಕರನ್ನು ಆಯ್ಕೆ ಮಾಡಲು ರಚಿಸಲಾಗಿರುವ ಸಮಿತಿಯಿಂದ ಪಕ್ಷದ ಪದಾಧಿಕಾರಿಗಳನ್ನು ಹೊರಗಿಟ್ಟಿರುವ ಬಗ್ಗೆ ಪಕ್ಷದ ವಲಯದಲ್ಲಿ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ. ಸಭೆಗೆ ಮುಖ್ಯಮಂತ್ರಿಯವರಿಗೂ ಆಹ್ವಾನ ಹೋಗಿದೆ ಎಂದು ಹೇಳಲಾಗುತ್ತಿದೆ. ಆದರೆ ಮುಖ್ಯಮಂತ್ರಿಯವರ ಸೋಮವಾರದ ಅಧಿಕೃತ ಪ್ರವಾಸ ಪಟ್ಟಿಯಲ್ಲಿ ಈ ಸಭೆಯ ಪ್ರಸ್ತಾಪವಿಲ್ಲ.

ಅದೇ ರೀತಿ ಕೆಪಿಸಿಸಿ ಅಧ್ಯಕ್ಷರು ಸಭೆ ಕರೆದಿದಾರೆ ಎಂದು ಹೇಳಲಾಗಿದೆ. ಆದರೆ ಡಿ.ಕೆ. ಶಿವಕುಮಾರ್‌ ಅವರ ಪ್ರವಾಸ ಪಟ್ಟಿ ಯಲ್ಲೂ ಸಭೆಯ ಪ್ರಸ್ತಾಪವಿಲ್ಲ ದಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಮುಂದಿನ ಚುನಾವಣೆಗಳ ಬಗ್ಗೆಯೂ ಚರ್ಚೆ?
ಉಪ ಮುಖ್ಯಮಂತ್ರಿಯೂ ಆದ ಕೆಪಿ ಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಾ ಧ್ಯಕ್ಷರು, ಉಪಾಧ್ಯಕ್ಷರು ಭಾಗ ವಹಿಸ ಲಿದ್ದಾರೆ. ಪಕ್ಷದ ಸಂಘಟನೆ, ಬರುವ ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಗಳ ಚುನಾವಣೆ ಸೇರಿದಂತೆ ವಿವಿಧ ವಿಷಯ ಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಯ ಫ‌ಲಿತಾಂಶದ ಪರಾಮರ್ಶೆ, ಪಂಚಾಯತ್‌ ಚುನಾವಣೆಗೆ ಪಕ್ಷ ಸಂಘಟನೆ, ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಈ ಮೂರು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಪಕ್ಷದ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಇದು ದಿಢೀರ್‌ ಕರೆದ ಸಭೆ ಅಲ್ಲ, ಕಳೆದ ವಾರವೇ ಇದರ ಸೂಚನೆ ಹೋಗಿತ್ತು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಸೋಮವಾರ ಬೆಳಗ್ಗೆ 10.30ಕ್ಕೆ ಕೆಪಿಸಿಸಿ ಪದಾಧಿಕಾರಿಗಳ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕರೆದಿರುವುದು ಕುತೂಹಲ ಮೂಡಿ ಸಿದೆ. ಸಭೆ ಬಳಿಕ ಡಿ.ಕೆ. ಶಿವಕುಮಾರ್‌ ಮಾಧ್ಯಮಗಳನ್ನು ಉದ್ದೇಶಿಸಿ ಮಾತ ನಾಡಲಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗ ತಿಳಿಸಿದೆ.

ಸಿಎಂ ಬಣಕ್ಕೆ ಸಂದೇಶ?
ಸಿದ್ದರಾಮಯ್ಯ ಬಣಕ್ಕೆ ಸಂದೇಶ ರವಾನಿಸಲು ಈ ಸಭೆ ಕರೆಯ ಲಾಗಿದೆ. ಹೆಚ್ಚುವರಿ ಡಿಸಿಎಂ, ಅಧ್ಯ ಕ್ಷರ ಬದಲಾವಣೆ ವಿಚಾರವಾಗಿ ಸಭೆ ಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳು ವಂತೆ ಡಿಕೆಶಿ ಆಪ್ತರಿಂದ ಒತ್ತಡ ಇದೆ ಎನ್ನಲಾಗಿದೆ.

ಖರ್ಗೆಗೆ ಡಿಕೆಶಿ ದೂರು?
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹೆಚ್ಚಾಗುತ್ತಲೇ ಇದೆ. ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದರೆ, ಅತ್ತ ಸಿಎಂ ಬಣವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಸಿಎಂ-ಡಿಸಿಎಂ ಮುಸುಕಿನ ಗುದ್ದಾಟ ಮುಂದುವರಿದಿದೆ. ಇದರ ಭಾಗವಾಗಿ ಶನಿವಾರವಷ್ಟೇ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದ ಸಿಎಂ ಬಣ ಕೆಲವು ದೂರುಗಳನ್ನು ಅವರ ಕಿವಿಗೆ ಹಾಕಿ ಬಂದಿದೆ ಎಂದು ಹೇಳಲಾಗಿದೆ. ರವಿವಾರ ಡಿ.ಕೆ. ಶಿವಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ಕಡೆಯ ವಾದ-ದೂರನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.

ದಿಲ್ಲಿಯಲ್ಲಿ ರವಿವಾರ ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನು ಭೇಟಿಯಾದ ಡಿಸಿಎಂ ಡಿ.ಕೆ. ಶಿವಕುಮಾರ್‌ ಪಕ್ಷದೊಳಗೆ ನಡೆಯುತ್ತಿರುವ ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಅಲ್ಲದೆ ತಮ್ಮ ವಿರುದ್ಧ ನಡೆಯುತ್ತಿರುವ ಮಸಲತ್ತುಗಳೇನು, ಸಿಎಂ ಬಣದವರು ಹೂಡುತ್ತಿರುವ ಕಾರ್ಯತಂತ್ರಗಳೇನು, ಇದರಿಂದಾಗಿ ಪಕ್ಷದ ವರ್ಚಸ್ಸಿಗೆ ಆಗುವ ಘಾಸಿ ಏನು ಎಂಬಿತ್ಯಾದಿ ವಿಷಯಗಳನ್ನು ವಿವರಿಸಿದ್ದಾರೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next