Advertisement

ಸಚಿವ ಅಶೋಕ್‌ ವಿರುದ್ಧ ಮುಂದುವರಿದ ಅಭಿಯಾನ

08:22 PM Jan 28, 2023 | Team Udayavani |

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ ವಿರುದ್ಧ ಮೊದಲು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಗೋ ಬ್ಯಾಕ್‌ ಚಳವಳಿ ಆರಂಭಿಸಿದ್ದ ಬಿಜೆಪಿ ಕಾರ್ಯಕರ್ತರು, ಈಗ ನಗರದ ಪ್ರಮುಖ ರಸ್ತೆಗಳ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಗೋಬ್ಯಾಕ್‌ ಜತೆಗೆ ಬಾಯ್ಕಟ್‌ ಅಭಿಯಾನ ನಡೆಸಿದ್ದಾರೆ.

Advertisement

ನಗರದ ಹೊರವಲಯದ ಉಮ್ಮಡಹಳ್ಳಿ ಗೇಟ್‌ನ ಬೆಂಗಳೂರು-ಮೈಸೂರು ಹೆದ್ದಾರಿಯ ಕೆಳಸೇತುವೆಯ ಗೋಡೆಗಳ ಮೇಲೆ ಗೋಬ್ಯಾಕ್‌ ಅಶೋಕ್‌, ಬಾಯ್ಕಟ್‌ ಅಶೋಕ್‌ ಎಂದು ಬರೆಯುವ ಮೂಲಕ ಅಭಿಯಾನ ಮುಂದುವರಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಸಚಿವ ಗೋಪಾಲಯ್ಯ ಅವರನ್ನು ಬದಲಿಸಿ ಆರ್‌.ಅಶೋಕ್‌ ಹೆಗಲಿಗೆ ವಹಿಸಿದ ದಿನದಿಂದಲೇ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಆದ್ದರಿಂದ ಕಳೆದ ಮೂರು ದಿನಗಳಿಂದ ಗೋಬ್ಯಾಕ್‌, ಬಾಯ್ಕಟ್‌ ಅಭಿಯಾನ ನಡೆಯುತ್ತಿದೆ. ಈ ಹಿಂದೆ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಆರ್‌.ಅಶೋಕ್‌ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಸಾಧ್ಯವಾಗಲಿಲ್ಲ.

ಈಗ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮತ್ತೆ ಅವರನ್ನೇ ನೇಮಕ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಚಿವ ಅಶೋಕ್‌ ವಿರುದ್ಧ ಸ್ವಪಕ್ಷದ ಕಾರ್ಯಕರ್ತರೇ ನಡೆಸುತ್ತಿರುವ ಗೋಬ್ಯಾಕ್‌ ಹಾಗೂ ಬಾಯ್ಕಟ್‌ ಚಳವಳಿಯ ವರದಿ ಹೈಕಮಾಂಡ್‌ ತಲುಪಿದೆ ಎನ್ನಲಾಗುತ್ತಿದೆ.

ಆರ್‌. ಅಶೋಕ್‌ ಅವರು ಬಿಜೆಪಿ ಹಿರಿಯ ನಾಯಕರು, ಮಂಡ್ಯಕ್ಕೆ ಅವರು ಇದೇ ಮೊದಲ ಬಾರಿಗೆ ಹೋಗುತ್ತಿಲ್ಲ, ಅವರ ನಾಯಕತ್ವದಿಂದ ಮಂಡ್ಯ ಜಿಲ್ಲೆಯಲ್ಲಿ ಮೂರರಿಂದ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದ್ದು, ಇದನ್ನು ಸಹಿಸಲಾರದೆ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಷಡ್ಯಂತ್ರ ರೂಪಿಸಿದವರು ಯಾರು ಎಂಬ ಬಗ್ಗೆ ಈಗಾಗಲೇ ಹಲವು ಮಾಹಿತಿ ಲಭ್ಯವಾಗಿದೆ.
-ಡಾ.ಸುಧಾಕರ್‌, ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next