ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 5500 ರೂ. ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ಎರಡನೇ ದಿನವೂ ಮುಂದುವರಿದಿದ್ದು, ಪೊಲೀಸರ ಮನವೊಲಿಕೆಗೂ ಬಗ್ಗದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಬೆಂಗಳೂರಿನಲ್ಲಿ ಸಕ್ಕರೆ ಸಚಿವರು ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಪ್ರತಿಭಟನೆ ಹಿಂಪಡೆಯುವಂತೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಅವರು ಮನವೊಲಿಸಲು ಯತ್ನಿಸಿದರೂ ಪ್ರತಿಭಟನಾಕಾರರು ಇದಕ್ಕೆ ಒಪ್ಪದೇ ಧರಣಿ ಮುಂದುವರಿಸಿದ್ದಾರೆ.
ಸ್ಥಳಕ್ಕೆ ವೈದ್ಯರು ಬಂದು ಪ್ರತಿಭಟನಾಕಾರರ ಆರೋಗ್ಯ ತಪಾಸಣೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಬೀಡು ಬಿಟ್ಟಿರುವ ರೈತರು ಸಚಿವರು ಬಂದು ನಮ್ಮ ಮನವಿ ಆಲಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಬಂದು, ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರನ್ನು ಕರೆಯಿಸಿ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದರೂ ರೈತರು ತಮ್ಮ ಪಟ್ಟು ಸಡಿಲಿಸುತ್ತಿಲ್ಲ.
ಪ್ರತಿ ಟನ್ ಕಬ್ಬಿನ ದರ ನಿಗದಿ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮತ್ತು ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸ್ಥಳಕ್ಕೆ ಬಂದು ಬೇಡಿಕೆ ಕೇಳುವಂತೆ ಮನವಿ ಮಾಡಿಕೊಂಡರೂ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಮುಖ್ಯಮಂತ್ರಿಗಳಿಂದಲೂ ಈವರೆಗೆ ಭರವಸೆ ಸಿಕ್ಕಿಲ್ಲ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮನವಿ ಮಾಡಿಕೊಂಡರೂ ಸಭೆಯ ನೆಪ ಮಾಡಿಕೊಂಡು ಬೆಂಗಳೂರಿಗೆ ತೆರಳಿದ್ದಾರೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಅನೇಕ ಸಕ್ಕರೆ ಕಾರ್ಖಾನೆಗಳು ಎರಡು ವರ್ಷಗಳ ಕಬ್ಬಿನ ಬಾಕಿ ಬಿಲ್ ನೀಡಬೇಕಿವೆ. ಇದನ್ನು ಪಾವತಿಸುವಂತೆ ಸರ್ಕಾರ ಕಾರ್ಖಾನೆಗಳ ಮೇಲೆ ಒತ್ತಡ ಹಾಕಬೇಕು. ಬಾಕಿ ಬಿಲ್ ಇಲ್ಲದೇ ಅನೇಕ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಬಗ್ಗೆ ಸರ್ಕಾರದ ಮೃದು ಧೋರಣೆಯಿಂದ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು. ಪ್ರತಿ ಟನ್ ಕಬ್ಬಿಗೆ ಸರ್ಕಾರ 5500 ರೂ. ನಿಗದಿ ಮಾಡಬೇಕು. ರೈತರ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು. ರೈತರು ಸಂಕಷ್ಟದಲ್ಲಿದ್ದಾಗ ಅವರ ಸಮಸ್ಯೆಗೆ ಸ್ಪಂದಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಜಿಲ್ಲೆಯಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಕಬ್ಬು ಬೆಳೆಗಾರರಿಗೆ ಉತ್ತಮ ದರ ಸಿಗಬೇಕು ಎಂದು ಆಗ್ರಹಿಸಿದರು.
ಡಿಸಿ ಕಚೇರಿ ಗೇಟ್‌ಗೆ ಬೀಗ
ಜಿಲ್ಲಾ ಧಿಕಾರಿ ಕಚೇರಿಗೆ ಒಳ ಪ್ರವೇಶಿಸುವ ಮಾರ್ಗದಲ್ಲಿಯೇ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಇದೇ ಸ್ಥಳದಲ್ಲಿಯೇ ರೈತರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಹೀಗಾಗಿ ಜಿಲ್ಲಾ ಧಿಕಾರಿ ಕಚೇರಿಗೆ ತೆರಳುವವರಿಗೆ ಹಾಗೂ ಅಧಿ ಕಾರಿಗಳಿಗೆ ಸಮಸ್ಯೆ ಆಗುತ್ತಿದೆ. ಹಿಂಬದಿಯ ಇನ್ನೊಂದು ಪ್ರವೇಶ ದ್ವಾರದಿಂದ ಕಚೇರಿಗೆ ತೆರಳುವಂತಾಗಿದೆ. ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು ಗೇಟ್ ಮೂಲಕ ಒಳ ನುಗ್ಗಲು ಯತ್ನಿಸಿದಾಗ ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಗೇಟ್‌ಗೆ ಬೀಗ ಜಡಿದಿದ್ದಾರೆ. ಗೇಟ್ ಹೊರಭಾಗದಲ್ಲಿಯೇ ಕುಳಿತುಕೊಂಡು ಪ್ರತಿಭಟನೆ ಮುಂದುವರಿಸಲಾಗಿದೆ.