ಬೆಂಗಳೂರು: ಸರ್ಕಾರಿ ನೌಕರ, ಸಿಬ್ಬಂದಿಗೆ ಸಂಬಂಧಪಟ್ಟಂತೆ “ಸಕಾಲ’ ವ್ಯಾಪ್ತಿಯಡಿ ಕಲ್ಪಿಸಿರುವ ಸೇವೆಗಳು ಉಪಯುಕ್ತ ಎಂದು ಅಭಿಪ್ರಾಯ ಪಟ್ಟಿರುವ ರಾಜ್ಯ ಸರ್ಕಾರಿ ನೌಕರರ ಸಂಘವು “ಸಕಾಲ’ ವ್ಯಾಪ್ತಿಯಲ್ಲಿರುವ ಎಲ್ಲ ಸೇವೆಗಳನ್ನು ಮುಂದುವರಿಸು ವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಒತ್ತಾಯಿಸಲು ನಿರ್ಧರಿಸಿದೆ. “ಸಕಾಲ’ ವ್ಯಾಪ್ತಿಯಿಂದ 18 ಸೇವೆ ಕೈಬಿಡುವ ಪ್ರಯತ್ನದ ಬಗ್ಗೆ “ಉದಯವಾಣಿ’ ಪ್ರಕಟಿಸಿದ ವರದಿ ಸರ್ಕಾರಿ ನೌಕರ ವರ್ಗದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಪತ್ರಿಕೆಯ ವರದಿಯ ಪ್ರತಿಯನ್ನು ಬಹುಮಹಡಿ ಕಟ್ಟಡದ (ಎಂ.ಎಸ್.ಬಿಲ್ಡಿಂಗ್) ಆವರಣದೆಲ್ಲೆಡೆ ನೌಕರರು ಸ್ವಯಂಪ್ರೇರಿತವಾಗಿ ಅಂಟಿಸಿದ್ದು, ನೌಕರರು ಗುಂಪು ಗುಂಪಾಗಿ ಚರ್ಚೆ ನಡೆಸು ತ್ತಿದ್ದ ದೃಶ್ಯ ಮಂಗಳವಾರ ಕಂಡುಬಂತು.
ಆಯ್ದ ಸೇವೆ ಕೈಬಿಡುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು, ಸರ್ಕಾರಿ ನೌಕರರು, ಸಿಬ್ಬಂದಿಗೆ ಸಂಬಂಧಪಟ್ಟಂತೆ ಪ್ರಮುಖವಾದ 21 ಸೇವೆಗಳನ್ನು ಈ ಹಿಂದೆಯೇ “ಸಕಾಲ’ ವ್ಯಾಪ್ತಿಗೆ ತರಲಾಗಿ ದ್ದು, ಅವು ನೌಕರರಿಗೆ ಉಪಯುಕ್ತವಾಗಿವೆ ಎಂದರು. ಹಾಗಾಗಿ ಅಷ್ಟೂ ಸೇವೆಗಳು ಸಕಾಲದಲ್ಲಿ ಮುಂದುವರಿಯಬೇಕು ಎಂಬುದು ಸಂಘದ ನಿಲುವು ಎಂದು ಹೇಳಿದರು. ಈ ನಡುವೆ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ಪಿ.ಗುರುಸ್ವಾಮಿ ಅವರು ಆಯ್ದ 18 ಸೇವೆಗಳನ್ನು “ಸಕಾಲ’ದಿಂದ ಹೊರಗಿಡಲು ಒಪ್ಪಿಗೆ ಸೂಚಿಸಿರುವುದಾಗಿ ಗೊತ್ತಾಗಿದೆ. ಅವರು ಸಚಿವಾಲಯದ 3000 ನೌಕರರಿಗೆ ಸೀಮಿತವಾಗಿ ಒಪ್ಪಿಗೆ ನೀಡಿರುವುದಾಗಿ ಹೇಳಿದ್ದಾರೆ. ಅವರು ಯಾವ ಕಾರಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂಬುದು ಗೊತ್ತಿಲ್ಲ. ಈ ಸಂಬಂಧ ಅವರೊಂದಿಗೂ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹಿರಿಯ ಅಧಿಕಾರಿಗಳು ಈವರೆಗೆ ಸಂಘದ ಅಭಿಪ್ರಾಯ ಕೇಳಿಲ್ಲ. “ಸಕಾಲ’ದಲ್ಲಿರುವ ಎಲ್ಲ ಸೇವೆಗಳು ನೌಕರರಿಗೆ ಪೂರಕವಾಗಿದ್ದು, ಅವುಗಳನ್ನು ಮುಂದುವರಿಸಬೇಕು. ಆ ಹಿನ್ನೆಲೆಯಲ್ಲಿ “ಸಕಾಲ’ ವ್ಯಾಪ್ತಿಯಲ್ಲಿರುವ ಯಾವ ಸೇವೆಯನ್ನೂ ಕೈಬಿಡದೆ ಮುಂದುವರಿಸುವಂತೆ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಗುರುವಾರ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ
ಎಂದು ಹೇಳಿದರು.